Thursday, March 30, 2017

ಫೀನಿಕ್ಸ್ಇಲ್ಲದವರಿಂದಲೇ ಕಿತ್ತು ತಿನ್ನೋ ಈ ಜಗತ್ತನ್ನು ನೋಡಿದ ಮೇಲೂ ಕೂಡ ಜೀವನದಲ್ಲಿ ಒಂದು ಸರ್ತಿನಾದರೋ ಕಮ್ಯುನಿಸ್ಟ್ ಸಿದ್ಧಾಂತ ಆಕರ್ಷಿಸಲಿಲ್ಲ ಅಂದ್ರೆ ಅವನೂ ಒಬ್ಬ ಮನುಷ್ಯನಾ? ಅವನಿಗೆ ಭಾವನೆಗಳಿವೆ ಅನ್ನಬಹುದಾ?”
 
ಕಹಿ ತುಂಬಿಕೊಂಡ ದನಿಯಲ್ಲಿ ಹೇಳುತ್ತಿದ್ದ ಅವನ ತೋಳ ಮೇಲೆ ಮಲಗಿ, ಕುರುಚಲು ಗಡ್ಡದ ಅವನ ಕೆನ್ನೆಯನ್ನೇ ಸವರುತ್ತಾ ಮತ್ತಿನಲ್ಲಿದ್ದಂತೆ ಕಣ್ಣು ಮುಚ್ಚಿಕೊಂಡಿದ್ದ ಅವಳು ಕಣ್ಣುತೆರೆದಳು.ಅವನ ಮುಖವನ್ನೇ ನೋಡಿ ತುಟಿ ಕೊಂಕಿಸಿದಳು. ಮಾತನಾಡುತ್ತಲೇ ಇದ್ದವನ ಬಾಯಿಯನ್ನು ತನ್ನ ಕೈಗಳಿಂದ ಮುಚ್ಚಿ ಅವನದೇ ದ್ವನಿ ಅನುಕರಿಸುತ್ತಾ ಜೀವಮಾನದಲ್ಲಿ ಒಮ್ಮೆಯಾದರೋ, ಮುಟ್ಟಿದರೆ ಸುಡುವಂತಹ ಒಬ್ಬ ಬಿಸಿರಕ್ತದ ಕಮ್ಯುನಿಸ್ಟನನ್ನು ಪ್ರೀತಿಸಲಿಲ್ಲ ಅಂದರೆ, ಅವನ ಕೆಂಪು ಯೋಚನೆಗಳಿಗೆ ಉದ್ರೇಕಗೊಂಡು ಉರಿದುಹೋಗಲಿಲ್ಲ ಅಂದರೆ, ಅವಳೂ ಒಂದು ಹೆಣ್ಣಾ? ಅವಳಿಗೂ ಒಂದು ಹೃದಯ ಇದೆ ಅನ್ನಬಹುದಾ?” ಎಂದು ಕಿಸಕ್ಕನೆ ನಕ್ಕಳು.

ತನ್ನ ಲಹರಿಯಿಂದ ಹೊರ ಬಂದ ಅವನು ತನ್ನ ಬಾಯಿ ಮುಚ್ಚಿದ ಅವಳ ಬೆರಳುಗಳನ್ನು ಕಚ್ಚಿದ. ನೋವಿನಿಂದ ಕೈ ಎಳೆದುಕೊಂಡವಳು ಈಗ ಅವನೆದೆಯ ಕೂದಲುಗಳನ್ನು ಮೆಲುವಾಗಿ ಜಗ್ಗುತ್ತಾ, ಅವನ ಬೆವರಿನ ಘಮದೊಂದಿಗೇ, ಆ ಘಳಿಗೆಯನ್ನೂ ತನ್ನೊಳಗೆ ಹೀರಿಕೊಳ್ಳುವಂತೆ ಜೋರಾಗಿ ಉಸಿರೆಳೆದುಕೊಂಡಳು. ತೋಳಿನ ಮೇಲೆ ಮಲಗಿದ್ದವಳನ್ನು ಬಳಸಿ ಹಿಡಿದಿದ್ದ ಅವನ ಕೈಬೆರಳುಗಳು ಅಯಾಚಿತವಾಗಿ ಘಾಟಿರಸ್ತೆಯ ತಿರುವುಗಳಂತಿದ್ದ ಅವಳ ಕಿವಿಯೊಳಗೆ ಸಂಚರಿಸತೊಡಗಿತು. ಮತ್ತೆ ಇಬ್ಬರಿಗೂ ಮಾತಾಡಬೇಕೆನಿಸಲಿಲ್ಲ. ತಣ್ಣನೆ ಮೌನದ ಗುನುಗುನಿಸುವಿಕೆಯಂತಿದ್ದ ಅವರಿಬ್ಬರ ಬೆಚ್ಚನೆಯ ಉಸಿರಾಟ ಒಂದಕ್ಕೊಂದು ಪೂರಕವಾಗಿ ಲಯಬದ್ಧವಾಗಿ ಸಾಗುತ್ತಿತ್ತು. ಅದ್ಯಾವಾಗ ಮಧ್ಯಾಹ್ನದ ಮಂಪರು ನಿದ್ದೆ ಹತ್ತಿತೋ ಇಬ್ಬರಿಗೂ ಅರಿವಾಗಲಿಲ್ಲ.

********************

 “ಅದ್ಯಾಕಂಥಾ ಗಡಿಬಿಡಿ? ಇನ್ನೂ ಐದೂವರೆ....
ಮನೆಗೆ ಹೋಗಲು ತನಗೇಕೆ ಅವಸರ ಎಂಬುದನ್ನು ಅವನಿಗೆ ಹೇಳಬೇಕಿನಿಸಲಿಲ್ಲ ಅವಳಿಗೆ. ಹಾಗಂತ ಕಾರಣ ಅವನಿಗೆ ಗೊತ್ತಿಲ್ಲದ್ದೇನಲ್ಲ. ಆದರೂ ಅದನ್ನು ವಾಚ್ಯವಾಗಿಸಿ, ಮಧ್ಯಾಹ್ನದಿಂದ ಆವರಿಸಿದ್ದ ಆ ಉನ್ಮತ್ತತೆಯನ್ನು, ಧ್ಯಾನಸ್ಥತೆಯನ್ನು ಕದಡುವ ಮನಸ್ಸಾಗಲಿಲ್ಲ. ಯಾವಾಗಲೂ ಎದ್ದು ಬಟ್ಟೆ ಧರಿಸಬೇಕಾದರೆ ನಾಚಿ ಒದ್ದಾಡುತ್ತಾ ಅವನಿಗೆ ಬೇರೆಡೆ ತಿರುಗುವಂತೆ, ಕಣ್ಣು ಮುಚ್ಚುವಂತೆ ಕಾಡಿ ಬೇಡುವ, ಅವಳು ಇಂದು ಮಾತ್ರ ತನ್ನ ನಗ್ನತೆಯ ಪರಿವೇ ಇಲ್ಲದಂತೆ ದಡಬಡನೆ ಕೆಳಗೆ ಬಿದ್ದಿದ್ದ ಸೀರೆ ಎತ್ತಿಕೊಂಡಳು.  
 “ಕಣ್ಣು ಮುಚ್ಚಿಕೊಳ್ಳೋದು ಬೇಡ್ವಾ?” ಅವಳು ಬಟ್ಟೆ ಧರಿಸುವಾಗೆಲ್ಲಾ ಅರೆಬರೆ ಕಣ್ಣು ತೆರೆದು ಕಾಡುವ ಅವನು ಇಂದವಳ ಅವಸರ ಕಂಡು ಕಿಚಾಯಿಸಿದ. ಕೀಟಲೆಯ ಲಹರಿಯಲ್ಲಿಲ್ಲದ ಅವಳಿಗೆ ತನ್ನ ನಾಚಿಕೆಯ ಸಮಯಸಾಧಕತನ ಕಂಡು ಪೆಚ್ಚೆನ್ನಿಸಿತು. ಎಲ್ಲವನ್ನೂ ತೆರೆದಿಟ್ಟು ಖಾಲಿಯಾದ ಭಾವದಲ್ಲಿ, ಮತ್ತೇನೋ ಹೊಸತನ್ನು ತುಂಬಿಕೊಂಡ ಭ್ರಮೆಯಲ್ಲಿ ಪೇಲವ ನಗೆ ನಕ್ಕಳು.
ಮಂಚದ ಮೇಲೆ ಒರಗಿಯೇ ಅವಳನ್ನು ಗಮನಿಸುತ್ತಿದ್ದವನು ಲಗುಬಗೆಯಿಂದ ಹೊರಟವಳ ಕೈ ಗಟ್ಟಿಯಾಗಿ ಹಿಡಿದ. ಮತ್ಯಾವಾಗಾ?” ಎಂದ. ಆ ಕಣ್ಣ ಯಾಚನೆ, ದನಿಯ ಯಾತನೆ, ಕೈ ಹಿಡಿತದ ಬಿಗುಪು, ಎಲ್ಲಾ ಅವಳಲ್ಲೂ ಅನುರಣಿಸಿ ಫೋನ್ ಮಾಡ್ತೀನಿ ಎಂದಳು.
ಅವನು ಊರಿಗೆ ಹೊರಟಿದ್ದ. ಇನ್ನು ಒಂದು ತಿಂಗಳಂತೂ ಭೇಟಿ ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದ ಇಬ್ಬರ ಕಣ್ಣುಗಳು, ಕೆಲ ನಿಮಿಷಗಳ ಕಾಲ ಮಿಳಿತಗೊಂಡು, ಅವಳ ಕಣ್ಣಲ್ಲೊಂದು ತೆಳುಪೊರೆಯನ್ನೂ, ಇವನ ಕಣ್ಣಲ್ಲೇನೋ ಅತೃಪ್ತಿಯನ್ನು ಬಿಟ್ಟು ಬೇರೆಯಾದವು.

********************

ಲಿಫ್ಟ್ ಬಾಗಿಲು ತೆರೆದೊಡನೆ ಓಡುತ್ತಲೇ ಕಾರಿಡಾರ್ ಸವೆಸಿದವಳಿಗೆ, ಬಾಗಿಲಿಗೆ ಒರಗಿಕೊಂಡು ಸ್ಕೂಲ್ಬ್ಯಾಗ್ ಹಿಡಿದು, ಯೂನಿಫಾರ್ಮ್ನಲ್ಲೇ ಹೊರಗೆ ಕುಳಿತಿದ್ದ ಮಗಳನ್ನು ಕಂಡೊಡನೆ ಎದೆ ಧಸಕ್ಕೆಂದಿತು. ಅಯ್ಯೋಸರಳಾ ಇವತ್ತು ಕೆಲಸಕ್ಕೆ ಬಂದಿಲ್ಲ ಎಂಬ ಸಂಗತಿ ತನ್ನ ಮನಸ್ಸಿನಿಂದ ಸಂಪೂರ್ಣ ಮರೆಯಾಗಿದ್ದು ಹೇಗೆ ಎಂಬ ಆಘಾತದಿಂದ ಸಾರೀ ಪುಟ್ಟ....ಬರೋಕೆ ಚೂರು ಲೇಟ್ ಆಯ್ತು ಎಂದು ತೀವ್ರ ಅಪರಾಧಿ ಭಾವದೊಂದಿಗೆ ಹೇಳುತ್ತಲೇ ಕೀ ಹೊರತೆಗೆದಳು.
ಸರಳಾ ಆಂಟಿ ಎಲ್ಲಮ್ಮಾ?”
ಅವಳು ಇವತ್ತು ರಜಾ ಪುಟ್ಟಿ. ಎಷ್ಟು ಹೊತ್ತಿಂದ ಕಾಯ್ತಾ ಇದ್ದೀಯಾ ಕಂದಾ?” ಎಂದು ಕೇಳಿದವಳೇ ಮಗಳನ್ನು ಗಟ್ಟಿಯಾಗಿ ಹೊಟ್ಟೆಗೆ ಅಪ್ಪಿಕೊಂಡಳು.

***************
ರಾತ್ರಿ ಮಗಳನ್ನು ತಟ್ಟಿ ಮಲಗಿಸುವಾಗಲೂ ನಿಟ್ಟುಸಿರು ಒತ್ತೊತ್ತಿ ಬರುತ್ತಿತ್ತು. ತಾನು ಅವನ ತೋಳಲ್ಲಿ ಮೈ ಮರೆತು ಮಲಗಿದ್ದಾಗ ಪುಟ್ಟಿ ಇಲ್ಲಿ ಬಾಗಿಲ ಹೊರಗೆ ಕಾಯುತ್ತಿದ್ದಳೆಂಬ ನಿಜವನ್ನು ಜೀರ್ಣಿಸಿಕೊಳ್ಳಲಾಗದೆ ಸಂಜೆಯಿಂದಲೂ ಒಳಗೇ ಬೇಯತ್ತಿದ್ದಳು. ಒಂದು ವರ್ಷದ ಹಿಂದೆ ಈ ತೀವ್ರ ಬಂಡಾಯದಂತಹ ಸಂಬಂಧ ಅಂಕುರಿಸತೊಡಗಿದಾಗಲೇ ಆಗಲಿ ಅಥವಾ ಅವನ ಆ ಪುಟ್ಟ ರೂಮಿನಲ್ಲಿ ಮೊದಲ ಬಾರಿಗೆ ತಾನು ಅನಾವರಣಗೊಂಡು, ಅವನೊಳಗೆ ಸೇರಿಹೋದ ಆ ಉತ್ಕಟ ಕ್ಷಣದಲ್ಲಾಗಲೀ ಮೂಡದ ಈ ಅಪರಾಧ ಪ್ರಜ್ಞೆ ಈಗ ಮಾತ್ರ ಕಿತ್ತು ತಿನ್ನುತ್ತಿರುವ ರೀತಿಗೆ ಕಂಗಾಲಾದಳು
**************

ಯೂನಿವರ್ಸಿಟಿ ನಂತರ ಸುಮಾರು 15 ವರ್ಷಗಳ ಬಳಿಕ ಅವನನ್ನು ಒಂದು ಪೈಂಟಿಂಗ್ ಎಕ್ಸಿಬಿಷನ್ನಲ್ಲಿ ಭೇಟಿಯಾಗಿದ್ದಳು. ಹೊಸದಾಗಿ ಬಿಟ್ಟಿದ್ದ ಕುರುಚಲು ಗಡ್ಡದ ಹೊರತಾಗಿ ಅವನು ಬಹುತೇಕ ಹಾಗೇ ಇದ್ದ. ಕಾಲು ಭಾಗದಷ್ಟು ಬೆಳ್ಳಗಾಗಿದ್ದ ಅವನ ತಲೆ ಕೂದಲು ಅವನ ಆಕರ್ಷಣೆಯನ್ನು ಮತ್ತಷ್ಚು ಹೆಚ್ಚಿಸಿದಂತೆ ಕಂಡಿತ್ತವಳಿಗೆ. ಅವನೇ ಗುರುತಿಸಿ ಬಂದು ಮಾತನಾಡಿದಾಗ ಪುಳಕಗೊಂಡಿದ್ದಳು. ಆಗಲೇ ಅವಳು ಮೊತ್ತಮೊದಲ ಬಾರಿಗೆ ಒಪ್ಪಿಕೊಳ್ಳುವ ಧೈರ್ಯ ಮಾಡಿದ್ದು....ಕಾಲೇಜು ದಿನಗಳಿಂದಲೂ ತನಗೆ ಅವನ ಕುರಿತಂತೆ ಏನೋ ಆಕರ್ಷಣೆ ಇತ್ತು, ನಕ್ಸಲರ ಜೊತೆಗೆ ಅವನಿಗೆ ಸಂಪರ್ಕವಿದೆ ಎಂಬ ಗುಸುಗುಸುವಿನಿಂದ ಅವನೆಡೆಗೆ ಇದ್ದ ಸೆಳೆತ ಮತ್ತಷ್ಟು ಹೆಚ್ಚಿತ್ತು, ಆದರೆ, ಅದನ್ನು ಮುಚ್ಚಿಡುವ ಸಲುವಾಗಿಯೇ ಅವನೆಡೆಗೆ ಪ್ರಯತ್ನಪೂರ್ವಕವಾಗಿ ಏನೋ ಅಸಡ್ಡೆಯನ್ನು. ಅಸಹನೆಯನ್ನು ಬೆಳೆಸಿಕೊಳ್ಳುವ ಮತ್ತು ಅದನ್ನು ಸಾರ್ವಜನಿಕವಾಗಿ ತೋರಿಸುವ ಕಾರ್ಯ ನಡೆಸಿದ್ದೆ ಎಂಬ ಸತ್ಯವನ್ನು.

ಅಂದಿನ ಭೇಟಿಯ ನಂತರ ಅವನ ಕೆಲವು ಸಮುದಾಯದ ಕಾರ್ಯಕ್ರಮಗಳ ಭಾಗವಾದಳು. ಕಾಲೇಜು ದಿನಗಳಲ್ಲಿದ್ದಷ್ಟೇ ಉತ್ಸಾಹ ಮತ್ತು ಆಕ್ರೋಶದಲ್ಲಿ ಅವನು ಅನ್ಯಾಯ, ಅಕ್ರಮಗಳ ಬಗ್ಗೆ ಮಾತನಾಡುತ್ತಿದ್ದರೆ ಇವಳ ಒಳಗೊಂದು ಹೊಸ ಆವೇಶ. ಹೀಗೆ, ಸಣ್ಣದಾಗಿ ಮೊಳೆತ ಬಂಧ ದೊಡ್ಡ ಸೆಳೆತವಾಗಿ ಅವಳನ್ನು ಕೊಚ್ಚಿಕೊಂಡು ಹೋಗಿತ್ತು. ಅವನ ತಂಡದ ಜೊತೆ ಸೇರಿಕೊಂಡಾಗಲೇ ಇದು ಇಲ್ಲಿಗೆ ಮುಗಿಯುವ ಕಥೆಯಲ್ಲ ಎಂಬ ಅರಿವು ಅವಳಲ್ಲಿ ಇದ್ದಿರಲೇಬೇಕು...ಆ ಅರಿವು ಅವನಲ್ಲೂ ಇದ್ದಂತಿತ್ತು. ಅಂದು ಅವನ ರೂಮಿನೊಳಗೆ ಕಾಲಿಟ್ಟ ಘಳಿಗೆಯಲ್ಲೂ ಆ ಅರಿವು ಇಬ್ಬರಲ್ಲೂ ಇತ್ತು. ಹಾಗಾಗಿಯೇ ಅವರಿಬ್ಬರ ನಡುವೆ ಸ್ಪೋಟಿಸಿ ಸಿಡಿದೇ ಬಿಡುತ್ತದೆ ಎಂಬಷ್ಟರಮಟ್ಟಿಗೆ, ಅಸಹನೀಯವೆನಿಸುವಂತೆ ಬೆಳೆದು ಬಿಟ್ಟಿದ್ದ ಆ ದೈಹಿಕ ತುಡಿತ ತೀರಾ ಸಹಜವೆಂಬ ರೀತಿಯಲ್ಲಿ ಪರ್ಯಾವಸನದ ದಾರಿ ಕಂಡುಕೊಂಡಿತ್ತು. ಅವಳಿಗೆ ಈಗ ಎಷ್ಟೇ ನೆನಪಿಸಿಕೊಂಡರೂ ಅಂದು ಏನಾಯ್ತು ಎಂಬುದು ಜ್ಞಾಪಕಕ್ಕೇ ಬಾರದಷ್ಟು ಸಾಮಾನ್ಯವಾಗಿ ಎಲ್ಲಾ ನಡೆದುಬಿಟ್ಟಿತ್ತು. ಮತ್ತು ನಡೆಯುತ್ತಲೇ ಸಾಗಿತ್ತು.

*******************

ಮಗಳನ್ನು ಮಲಗಿಸಿ ತನ್ನ ಮೊಬೈಲ್ ಕೈಗೆತ್ತಿಕೊಂಡವಳಿಗೆ ಒಮ್ಮೆಲೆ ದೊಡ್ಡ ಎಂಎನ್ಸಿ ಕೆಂಪೆನಿಯಲ್ಲಿ ತನಗಿರುವ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆ, ತಾನು ಪಡೆಯವ ಸಂಬಳ, ತನ್ನ ಅಪಾರ್ಟ್ಮೆಂಟ್, ಐಷಾರಾಮಿ ಕಾರು – ಇವುಗಳೆಲ್ಲದರ ವಾಸ್ತವತೆ ಮತ್ತು ಅವುಗಳ ಮೇಲೆ ತನಗಿರುವ ಅವಲಂಬನೆ ಕಿಸ್ಸಕ್ಕನೆ ಅಣಕಿಸಿ ನಕ್ಕಂತಾಯ್ತು.
ಕ್ಯಾಪಿಟಲಿಸಂ ಸುಖವನ್ನೂ ಅನುಭವಿಸುತ್ತಾ, ಕಮ್ಯೂನಿಸಂ ಉನ್ಮಾದದಲ್ಲಿ ತೇಲುವ ತನ್ನ ಬಗ್ಗೆ ಅವಳಿಗೇ ಹೇಸಿಗೆ ಮೂಡಿಬಿಟ್ಟಿತು. ಎಲ್ಲಕ್ಕಿಂತ ಮುಖ್ಯವಾಗಿ ಹಠ ಹಿಡಿದು ಗಂಡನಿಂದ ವಿಚ್ಛೇದನ ಪಡೆಯಲು ಕಾರಣವಾದ ಸಂಗತಿ ಎಷ್ಟೇ ದೂರತಳ್ಳಿದರೂ ಒಳಹೊಕ್ಕಿರುವ ಮುಳ್ಳಿನಂತೆ ಸಂಜೆಯಿಂದ ಚುಚ್ಚುತ್ತಲೇ ಇತ್ತು. ತನ್ನ ಮಾಜಿ ಗಂಡನೊಂದಿಗೆ ಅವಳನ್ನು ಮೊದಲಬಾರಿ ನೋಡಿದಾಗ ಅಸಹ್ಯ, ನಿಕೃಷ್ಟ ಹಾಗು ಹೀನಾಯ ದೃಷ್ಟಿ ಬೀರಿಯೇ ಅವಳು ಅವಮಾನದಿಂದ ತಲೆ ತಗ್ಗಿಸುವಂತೆ ಮಾಡಿದ್ದಳು. ಈಗ ತಾನು ಅವಳ ಸ್ಥಾನದಲ್ಲಿ ನಿಲ್ಲಬೇಕಾಗಬಹುದಾದ ಸಾಧ್ಯತೆಯ ಬಗ್ಗೆ ಯೋಚಿಸಿಯೇ ಬೆವರಿದಳು. ಶನಿವಾರ ಮಾತ್ರ ಭೇಟಿಯಾಗುವ ಅಪ್ಪನಿಗೆ ಪುಟ್ಟಿ ಇಂದು ಮನೆಯ ಹೊರಗೆಯೇ ತನಗಾಗಿ ಕಾಯಬೇಕಾಗಿ ಬಂದ ಸಂಗತಿ ತಿಳಿಸಿದರೆ ಅದರ ಪರಿಣಾಮ ಏನಾಗಬಹುದೆಂಬುದನ್ನು ಊಹಿಸಿ ಬೆದರಿದಳು.          

ತಕ್ಷಣವೇ ನಿರ್ಧಾರಕ್ಕೆ ಬಂದವಳಂತೆ ಫೋನ್ ಕೈಗೆತ್ತಿಕೊಂಡು, ಅವನ ಎಲ್ಲ ಮೆಸೇಜ್ಗಳನ್ನು ಡಿಲಿಟ್ ಮಾಡಿ, ನಂಬರ್ ಬ್ಲಾಕ್ ಮಾಡಿ, ಕೊನೆಗೆ ತನ್ನ ಪೋನಿನಿಂದ ಅವನ ಹೆಸರನ್ನು ಅಳಿಸಿಹಾಕಿ, ಮನಸ್ಸಿನಿಂದಲೇ ಒರಸಿಬಿಟ್ಟಂತೆ ಸೂತಕದ ಭಾವದಲ್ಲಿ ಮಗಳನ್ನು ತಬ್ಬಿ ಮಲಗಿಬಿಟ್ಟಳು.  .            

*************

ಇನ್ನೂ ಅವಳ ಮಂಪರಲ್ಲೇ ಇದ್ದವನಿಗೆ ಹೆಂಡತಿಯ ಫೋನ್ ಬಂದಾಗ ಯಾಕೋ ರಿಸೀವ್ ಮಾಡುವ ಮನಸ್ಸಾಗಲಿಲ್ಲ. ಮತ್ತೆ ಕರೆ ಮಾಡಿದಾಗ ಬೇಸರದಿಂದಲೇ ಫೋನ್ ತೆಗೆದುಕೊಂಡವ ಮಾತನಾಡುವ ಮೂಡ್ ಇಲ್ಲದೆ, ಅವಳು ಹೇಳಿದ್ದಕ್ಕೆಲ್ಲಾ ಹೂಂಗುಟ್ಚತೊಡಗಿದ. ಈ ಬಾರಿ ಬಂದವನು ನನ್ನ ಡೆಲಿವರಿಯಾಗಿ ಎರಡು ತಿಂಗಳಾಗುವವರೆಗಾದರೋ ಇಲ್ಲೇ ಜೊತೆಯಲ್ಲಿ ಇದ್ದು ಬಿಡು ಅವಳ ಬೇಡಿಕೆಯ ದನಿ ಕೇಳಿ ಎಚ್ಚೆತ್ತು ಹೇಳಿದ
ನೋಡೋಣ..ಇಲ್ಲಿನ ಪರಿಸ್ಥಿತಿ ಹೇಗಿರುತ್ತೋ ಹೇಳೋಕೆ ಆಗಲ್ಲ
ದೇಶದ ಪರಿಸ್ಥಿತಿ ಬಗ್ಗೆ ಅಷ್ಟೊಂದು ಯೋಚಿಸೋ ನಿನಗೆ, ತಿಂಗಳು ತುಂಬಿರೋ ನಾನು ಕೆಲಸಕ್ಕೂ ಹೋಗುತ್ತಾ, ಮೂರು ವರ್ಷದ ಮಗುವನ್ನೂ ಸಂಬಾಳಿಸುತ್ತಾ ಹೇಗೆ ಒಂಟಿಯಾಗಿದ್ದೇನೆ ಅನ್ನುವ ಬಗ್ಗೆ ಮಾತ್ರ ಯಾವ ಕಾಳಜಿಯೂ ಮೂಡಲ್ಲ ಅಲ್ವಾ ಕಾಮ್ರೇಡ್?” ಅವಳ ಮಾತಿನಲ್ಲಿದ್ದ ವ್ಯಂಗ್ಯವನ್ನು ಮೀರಿದ ವಿಷಾದ ಅವನನ್ನು ತಟ್ಟಿತು.
ಮದುವೆಗೆ ಮೊದಲೇ ಇದೆಲ್ಲದರ ಬಗ್ಗೆ ಮಾತಾಡಿದ್ವಿ ಅಲ್ವಾ? ನನಗೆ ಸಿದ್ದಾಂತಗಳೇ ಮುಖ್ಯ...ಮದುವೆ ಬೇಡ... ಅಂದಾಗ ರಿಜಿಸ್ಚ್ರಾರ್ ಆಫೀಸಿಗೆ ಬಂದು ಸಹಿ ಹಾಕು ಸಾಕು....ನಿನ್ನ ಯಾವುದೇ ಕೆಲಸಕ್ಕೂ ನಾನು ಅಡ್ಡ ಬರೋಲ್ಲ, ಹೆಂಡತಿಯಾದೆ ಅಂದ ತಕ್ಷಣ ನನ್ನ ಜವಾಬ್ದಾರಿ ನಿನ್ನದಲ್ಲ ಅಂದಿದ್ದು ಯಾರು? ನಾನು ಮದುವೆಗೆ ಒಪ್ಪಿದ್ದೇ ನಿನ್ನ ಆ ಮಾತು ನಂಬಿ.” ಅವನಿಗೆ ತನ್ನ ಸಮರ್ಥನೆ ತೀರಾ ಸವಕಲೆನ್ನಿಸಿತು.
ಪ್ರೇಮದ ಉನ್ಮಾದದಲ್ಲಿದೆ ನಾನು. ನನ್ನೆಲ್ಲಾ ಹೋರಾಟ, ಸಿದ್ಧಾಂತಗಳಿಗಿಂತ ನಿನಗೆ ಹೆಂಡತಿಯಾಗುವುದೇ ತೀರಾ ಮುಖ್ಯ...ಅದರಲ್ಲೇ ನನ್ನ ಮೋಕ್ಷ ಅನ್ನಿಸಿಬಿಟ್ಟಿತ್ತು. ಈಗ ಆ ಪ್ರೇಮ ಪಕ್ವವಾಗಿದೆ. ಆದ್ರೂ ನಾನು ಅವತ್ತು ಹೇಳಿದ ಮಾತನ್ನು ಮರೆತಿಲ್ಲ ಬಿಡು. ಇವತ್ತ್ಯಾಕೋ ಬೆಳಗ್ಗೆಯಿಂದ ಒಂಥರಾ ಭಯ...ನೀನು ಪಕ್ಕ ಇರಲೇಬೇಕು ಅನ್ನಿಸ್ತು. ಅದಕ್ಕೆ ಹಂಗಂದೆ...ಅಷ್ಟೆ ಅವಳ ದನಿ ಅಳುವಿನ ಅಂಚಿನಲ್ಲಿತ್ತು.
ಅದ್ಸರಿ....ನೀನು ಯಾಕೆ ಇನ್ನೂ ಕೆಲಸಕ್ಕೆ ಹೋಗ್ತಿದೀಯಾ? ಒಂದು ಕಾಲದಲ್ಲಿ ಮಹಿಳಾ ಹಕ್ಕುಗಳಿಗಾಗಿ ಹೋರಾಡಿದ್ದು ನೀನೇನಾ? ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಿರುವವನ ಹೆಂಡತಿ ನೀನು. ಕಾರ್ಪೊರೇಟ್ ವಲಯ ಸೇರಿಕೊಂಡ ಮೇಲೆ ಎಲ್ಲಾ ಬದಲಾಯ್ತಾ? ಮೆಟರ್ನಿಟಿ ರಜೆ ತಗೋ...ಅದು ನಿನ್ನ ಹಕ್ಕು. ಇನ್ನೂ ಏನೇನೋ ಉಪದೇಶ ಮಾಡುವನಿದ್ದನೇನೋ ಅವಳು ಅಲ್ಲಿಗೆ ತಡೆದು,
ಹೆಂಡತಿ ಈ ಪರಿಸ್ಥಿತಿಯಲ್ಲಿ ಇನ್ನೂ ದುಡೀತಾ ಇದಾಳಲ್ಲ ಅಂತ ನಿಂಗೆ ಅನಿಸಿದ್ದೆ ಇವತ್ತು...ನಾ ಹೇಳಿದ ಮೇಲೆ, ಇನ್ನು ಸಂಬಳ ಕೊಡೋ ಅವರಿಗೆ ಅದೆಲ್ಲಾ ಕಾಣುತ್ತಾ? ಹೋಗ್ಲಿ...ಆ ಮಾತು ಬಿಡು.. ದುಡ್ಡು ಏನಾದ್ರೋ ಬೇಕಾ? ಅಕೌಂಟಿಗೆ ಹಾಕ್ಲಾ?” ಎಂದಳು. ಅವನಿಗೆ ಎದೆಗೆ ಗುರಿ ಇಟ್ಟು ಇರಿದಂತಾಗಿ ಬೇಡ ಎಂದವನೇ ಪೋನಿಟ್ಟ.
ಯಾಕೆ ಸಡನ್ ಆಗಿ ದುಡ್ಡು ಬೇಕಾ ಅಂತ ಕೇಳಿದಳು, ನಿಜ....ಹೊಸದೇನು ಅಲ್ಲ ಅದರಲ್ಲಿ. ಅವಳೇ ಕೇಳುತ್ತಾಳೆ ಅಥವಾ ನಾನೇ ದುಡ್ಡು ಹಾಕು ಅನ್ನುತ್ತೇನೆ. ಆದರೆ ಇವತ್ಯಾಕೋ ಅವಳ ದನಿ, ಕೇಳಿದ ಸಂದರ್ಭ ಎಲ್ಲಾ ಮತ್ತೇನನ್ನೋ ಹೇಳಿತು. ನನ್ನ ಅನ್ನ ತಿಂತಾ ಇದೀಯಾ ಅಂದಳಾ? ನಿನ್ನ ಸಿದ್ದಾಂತ ಉಳಿದಿರೋದು ನನ್ನ ರುಣದ ಭಿಕ್ಷೆ ಅಂದಳಾ?’
ಹೆಂಡತಿಗಷ್ಟೇ ಅಲ್ಲ ನಾನು ನಂಬಿದ ಸಿದ್ಧಾತಕ್ಕೂ ವಂಚಿಸುತ್ತಿದ್ದೇನೆ. ನಂದೆಲ್ಲಾ ಬರೀ ಬೂಟಾಟಿಕೆಯ ಹೋರಾಟ. ಪರಾವಲಂಬಿ ಜೀವನ ಎಂಬ ಭಾವ ಅವನಲ್ಲಿ ಮೊದಲ ಬಾರಿಗೆ ಮೂಡಿತು....ನಾಚಿಕೆಯಾಯಿತು. ಇದೆಲ್ಲಾ ಇಲ್ಲಿಗೇ ನಿಲ್ಲಬೇಕು….ಎಲ್ಲಕ್ಕಿಂತ ಮೊದಲು ಅವಳ ಜೊತೆಗಿನ ಬೆಂಕಿಯಂತಹ ಸಂಬಂಧ ಕಡಿದುಕೊಳ್ಳಬೇಕು. ಮೂಡಿದ ಗಟ್ಟಿ ನಿರ್ಧಾರದೊಂದಿಗೆ ಹೊರಬಿದ್ದ ನಿಟ್ಟುಸಿರು ಬಿಸಿಯಾಗಿತ್ತು

*************

ಬಾಗಿಲ ಹೊರಗೆ ನಿಂತಿದ್ದ ಅವಳನ್ನು ಅವಸರ ಅವಸರವಾಗಿ ಒಳಗೆಳೆದುಕೊಂಡವನೇ, ಬಾಗಿಲನ್ನು ಧಡಾರನೇ ಮುಚ್ಚಿ ಉಸಿರುಗಟ್ಟುವಂತೆ ತಬ್ಬಿ ಹಿಡಿದ. ಮೂರು ತಿಂಗಳು....!!ಅಬ್ಬಾ ನಿನ್ನ ನೋಡದೆ ಹೇಗೆ ಕಳೆದೆ ಅಂತಾನೇ ಅರ್ಥವಾಗ್ತಾಯಿಲ್ಲ!!!” ಉಸುರಿದ.
ಮೂರು ತಿಂಗಳ ಯಾತನೆಯ ಮುಂದೆ, ಅವನ ಅಪ್ಪುಗೆಯಲ್ಲಿನ ಹಿಂಡುವಂತಹ ನೋವು ನೋವೆನಿಸಲೇ ಇಲ್ಲ ಅವಳಿಗೆ. ಅಥವಾ ಆ ಕ್ಷಣದ ಆ ನೋವೇ, ದೀರ್ಘ ಯಾತನೆಯೊಂದನ್ನು ತೊಡೆದುಹಾಕಿತ್ತು. ಜ್ವರ ಬಂದಂತಿದ್ದವನನ್ನು ತಬ್ಬಿದವಳೇ ಅರ್ಥಗಳ ಬಗ್ಗೆ ಯೋಚಿಸುವ ಅನರ್ಥ ಮಾಡೋದು ಬೇಡ ಎಂದಳು.
ಅವರಿಬ್ಬರ ಬಿಸಿಯುಸಿರಿನಿಂದಾಗಿ ಆರಿಯೇ ಇರದ ಬೆಂಕಿ, ಬೂದಿ ಕೊಡವಿ ಮತ್ತೆ ಧಗ್ಗನೆ ಹೊತ್ತಿತು. ಆ ಉರಿಯಲ್ಲಿ ಮತ್ತೇನೋ ಸುಟ್ಟ ವಾಸನೆ ದಟ್ಟವಾಗಿತ್ತು...   


(ವಿಜಯಕರ್ನಾಟಕ ಯುಗಾದಿ ವಿಶೇಷಾಂಕ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ) 


                   

1 comment:

ಶ್ರೀನಿವಾಸಗೌಡ said...

ಅರ್ಪಣಾ ಮೇಡಂ ಕಥೆಗಳನ್ನು ಓದಿ ದಶಕಗಳೇ ಆಗಿದ್ದವು ನಿಮ್ಮ ಕಥೆ ಅಬ್ಬಾ ಅನ್ನಿಸಿಬಿಟ್ಟಿತು, ತುಂಬಾ ಚನ್ನಾಗಿದೆ, ಚಿಕ್ಕದಾಗಿಯೂ ನಾವೇ ಪಾತ್ರಗಳೇನೋ ಅನ್ನಿಸುವಂತೆ ಬರೆದಿದ್ದೀರಿ u deserve a award honesty.