ಸಂಜೆ...
'ಬೆಟಪ್ಪ ಬಾ ಹಿಲ್ಲಿ....ಸೀ ಹೀ ಈಸ್ ದಿ ಐ ವಿಟ್ ನೆಸ್ ....'
ದೊಡ್ಡ ಕುಂಕುಮದ ಆಕೆ ತನ್ನ ವಿಚಿತ್ರ ಆಕ್ಸೆಂಟ್ ನ ಕನ್ನಡದಲ್ಲಿ ಕರೆದಾಗ, ಕಪ್ಪು ಕನ್ನಡಕದೊಳಿಗಿನಿಂದ ಸುಟ್ಟು ಕರಕಲಾಗಿದ್ದ ಗುಡಿಸಲುಗಳನ್ನು ನೋಡುತ್ತಿದ್ದ ಅಷ್ಟೂ ಪತ್ರಕರ್ತರು ತಿರುಗಿದರು. ಕಪ್ಪು ಬಣ್ಣದ, ಬಡಕಲು ದೇಹದ ಉದ್ದನೆ ವ್ಯಕ್ತಿಯೊಬ್ಬ ದೀನತೆಯಿಂದ ಕೈ ಮುಗಿದು ನಿಂತಿದ್ದ. ಟಿ ವಿ ವರದಿಗಾರರು ತಮ್ಮ ತಮ್ಮ ಕ್ಯಾಮರಾಮ್ಯಾನ್ ಗಳನ್ನು ಕರೆದರು. ಸುಟ್ಟ ಗುಡಿಸಲಿನ ಭಾಗದಂತೇ ಕಾಣುತ್ತಿದ್ದ ಅಲ್ಲಿನ ಜನರ ಸ್ಥಿತಿಯನ್ನು ವಿವಿಧ ಕೋನಗಳಿಂದ ಸೆರೆಹಿಡಿಯುತ್ತಿದ್ದ,ಛಾಯಾಗ್ರಾಹಕರು ಆತನ ಸೌಂಡ್ ಬೈಟ್ ರೆಕಾರ್ಡ್ ಮಾಡಲು ಧಾವಿಸಿ ಬಂದರು.
ಗುಡಿಸಲಿಗೆ ಬೆಂಕಿ ಬಿದ್ದ ಆ ಪ್ರಕರಣವೂ ಇತರ ಎಲ್ಲಾ ದುರಂತಗಳಂತೆ ತಣ್ಣಗಾಗುವುದರಲ್ಲಿತ್ತು.ಅಪಾರ ಪ್ರಮಾಣದ ನಷ್ಟವಾಗಿದ್ದರೂ,ಹೆಚ್ಚಿನ ಸಾವು ನೋವು ಸಂಭವಿಸಿರಲಿಲ್ಲವಾದ್ದರಿಂದ ಸುದ್ದಿಬಾಕ ಮೀಡಿಯಾಗಳಿಗೂ ಪ್ರಕರಣ ಸಪ್ಪೆಯೆನಿಸಿತ್ತು.ಅದರೆ,ಯಾರಿಗೂ ಅರಿವಾಗದಂತೆ ಹುಟ್ಟಿಕೊಂಡಿದ್ದ ಸತ್ಯ ಶೋಧನಾ ಸಮಿತಿ ಇಂದು ಹೊಸ ಸುದ್ದಿಯೊಂದನ್ನು ಸ್ಫೋಟಿಸಿತ್ತು. ಸ್ಲಂ ಪ್ರದೇಶವನ್ನು ಖಾಲಿ ಮಾಡಿಸುವ ಸಲುವಾಗಿ ಲ್ಯಾಂಡ್ ಮಾಫಿಯಾ ಈ ಕೃತ್ಯ ಎಸಗಿದೆ ಎಂದಿತ್ತು. ಸರ್ಕಾರದ ನಿಕಟವರ್ತಿಯೊಬ್ಬನ ಕೈವಾಡವಿದೆ ಎಂಬ ಆರೋಪವನ್ನೂ ಮಾಡಿತ್ತು. ಪರಿಣಾಮ ನಗರದ ಇಡೀ ಮೀಡಿಯಾ ಪ್ರಪಂಚವೇ ಬೂದಿಯೊಳಗೆ ಸುದ್ದಿ ಕೆದಕಲು ಬಂದಿತ್ತು.
ಕ್ಯಾಮರಾ ಮ್ಯಾನ್ ಗಳ ಸಾಹಸ ಮುಂದುವರಿದಿದ್ದರೆ,ಬಹಳ ದಿನಗಳ ನಂತರ ಭೇಟಿಯಾಗಿದ್ದ ವರದಿಗಾರರೆಲ್ಲಾ ಗುಂಪು ಗುಂಪಾಗಿ ಸ್ವಾರಸ್ಯಕರ ಹರಟೆಯಲ್ಲಿ ತೊಡಗಿದ್ದರು. ಸತ್ಯ ಶೋಧನ ಸಮಿತಿಯ ಆಕೆಗೆ, ವರದಿಗಾರರು ತನ್ನ ಸೌಂಡ್ ಬೈಟ್ ಪಡೆಯಲಿಲ್ಲ ಎಂಬ ಬೇಸರವಿದ್ದಂತಿತ್ತು. ಮುಳುಗುತ್ತಿದ್ದ ಸೂರ್ಯನ ಕಿರಣಗಳು ಅಳಿದುಳಿದಿದ್ದ ಗುಡಿಸಲುಗಳ ಪಳೆಯುಳಿಕೆಗಳಿಗೆ ಕೆಂಪು ಬಣ್ಣ ಮೆತ್ತುತ್ತಿತ್ತು.
------------------------
ರಾತ್ರಿ.
ಪುಟ್ಟ ಬೆಚ್ಚನೆ ಗೂಡಿನಲ್ಲಿ ಇದುವರೆಗೆ ಹದುಗಿಕೊಂಡಿದ್ದವರು, ಬೀದಿಗೆ ಬಿದ್ದಿದ್ದಾರೆ.........ಟಿವಿಯಲ್ಲಿ ಪ್ರಣತಿ ಭಾವಪೂರ್ಣವಾಗಿ ವಿವರಣೆ ನೀಡುತ್ತಾ ಇದ್ದಳು.
'ಹೇಗೆ ಕಾಣ್ತಾ ಇದ್ದೀನಿ...'ಪ್ರಣತಿ ಪ್ರಶ್ನೆಗೆ ಸೂರಜ್ ಕೂಡಲೇ ಪ್ರತಿಕ್ರಿಯೆ ನೀಡಲಿಲ್ಲ. ಇನ್ನೂ ಸಿಟ್ಟು ಇಳಿದಿಲ್ಲೇನೋ ಎಂದುಕೊಂಡ ಅವನತ್ತ ತಿರುಗಿದಳು. ಸೂರಜ್ ಟಿವಿ ಕಡೆ ಕಣ್ಣು ನೆಟ್ಟು ನೀರು ಕುಡಿಯುತ್ತಿದ್ದ. ಇನ್ನೂ ಒಂದೆರಡು ರೌಂಡ್ ಇಳಿಸಬೇಕು ಎಂಬ ಉತ್ಸಾಹದಲ್ಲಿದ್ದ ಸೂರಜ್ ನನ್ನು ಪಾರ್ಟಿ ಱರಂಭವಾದ ಸ್ವಲ್ಪ ಹೊತ್ತಿಗೇ ಅವಸರ ಅವಸರವಾಗಿ ಕರೆ ತಂದಿದ್ದಳು ಪ್ರಣತಿ. ಪಾಟೀಲ್ ಹೇಳಿದ್ದ 10.00 ಗಂಟೆ ನ್ಯೂಸ್ ನ ಹೈಲೈಟ್ ನಿಂದೇ ಸ್ಟೋರಿ ಅಂತ.
'ಉಹು...ಯಾಕೋ ನಿನ್ನ ಹೊಸ ಹೇರ್ ಸ್ಟೈಲ್ ಸ್ಕ್ರೀನ ನಲ್ಲಿ ಚೆನ್ನಾಗಿ ಕಾಣ್ತಾ ಇಲ್ಲ.' ಸೂರಜ್ ಮಾತು ಪ್ರಣತಿಗೆ ನಿಜ ಅನ್ನಿಸ್ತು. ಈ ಸ್ಟೋರಿಗೆ ಪಿಟಿಸಿ ಕೊಡಬೇಕಾಗುತ್ತೆ ಅಂತಲೇ ಬೆಳಗ್ಗೆ ಬ್ಯೂಟಿ ಪಾರ್ಲರ್ ಗೆ ಹೋಗಿ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಳು. 'ವೆಂಕಟ್ ಗೆ ಹೇಳಿದ್ದೆ ಅಷ್ಟು ಕ್ಲೋಸ್ ಅಪ್ ಬೇಡ ದಪ್ಪ ಕಾಣ್ತೀನಿ ಅಂತ. ಛೇ ಸರಿಯಾಗಿ ಬಂದಿಲ್ಲ...' ಅಂದು ಕೊಂಡಳು.
'ನಿನ್ನ ಹಿಂದೆ ಬ್ಯಾಕ್ ಡ್ರಾಪ್ ನಲ್ಲಿ ಕಾಣ್ತಾ ಇರೋ ಜನ ಎಷ್ಟು ಆರ್ಟಿಫಿಷಿಯಲ್ ಆಗಿ ಅಳ್ತಾ ಇದ್ದಾರೆ ನೋಡು' ಸೂರಜ್ ಹೇಳಿದ.
ಪ್ರಣತಿ ಘಟನೆಯ ಬಗ್ಗೆ ವಿವರಣೆ ನೀಡುವಾಗ ಫ್ರೇಮ್ ನಲ್ಲಿ ಹಿಂದುಗಡೆ ಏನು ಇರಬೇಕೆಂದು ವೆಂಕಟ್ ಸಾಕಷ್ಟು ತಲೆ ಕೆಡಿಸಿಕೊಂಡು ಬಳಿಕ ಬೀದಿಪಾಲದ ಜನ ಅಳುತ್ತಾ ಇದ್ದರೆ ಫ್ರೇಮ್ ತುಂಬಾ ಚೆನ್ನಾಗಿರುತ್ತೆ ಎಂದಿದ್ದ. ಅಲ್ಲಿದ್ದವರನ್ನೆಲ್ಲಾ ಸೇರಿಸಿ ಇವಳ ಹಿಂದೆ ಗೋಳಾಡುತ್ತಾ ನಿಲ್ಲುವಂತೆ ಹೇಳಿದ್ದ. ಯಾರಿಗೂ ಅಳು ಬರುತ್ತಿರಲಿಲ್ಲವಾದ್ದರಿಂದ ಅಳುವಂತೆ ನಟಿಸುತ್ತಾ ಕ್ಯಾಮರಾವನ್ನೇ ನೋಡಲಾರಂಭಿಸಿದ್ದರು. ವೆಂಕಟ್ ಸಾಕಷ್ಟು ಹೇಳಿ, ಹಲವು ಬಾರಿ ಟೇಕ್ ತಗೊಂಡು ಕೊನೆಗೆ ಒ ಕೆ ಎಂದಿದ್ದ. ಈಗ ನೀಡಿದ್ರೆ ಅಳುತ್ತಾ ನಿಂತವರೆಲ್ಲಾ ಕ್ಯಾಮೆರಾಗಾಗಿಯೇ ಅಳುತ್ತಿರುವಂತೆ ಅನಿಸುತ್ತಿತ್ತು. ಪ್ರಣತಿಗೆ ಚಿಕ್ಕದಾಗಿ ಆತಂಕ ಶುರುವಾಯ್ತು. ಕಳೆದ ಬಾರಿ ಹೂಚ್ ಟ್ರಾಜಿಡಿ ಸರಿಯಾಗಿ ಕವರ್ ಮಾಡಲಿಲ್ಲ ಅಂತ ಪಾಟೀಲ್ ಗುರುಗುಟ್ಟಿದ್ದ. ಬೇರೆ ಛಾನಲ್ ಗಳನ್ನು ನೋಡಿ, ಕುಟುಂಬವನ್ನು ಕಳೆದುಕೊಂಡು ಅಳುತ್ತಾ ಇರುವವರ ಬೈಟ್ ತಂದೇ ಇಲ್ಲ ಎಂದು ಎಗರಾಡಿದ್ದ. ದುರಂತಗಳ ವರದಿ ನೋಡ್ತಾ ಇದ್ದರೆ ಜನ ಕಣ್ಣೀರು ಸುರಿಸಬೇಕು ಗೊತ್ತಾ ಎಂದು ಮೂದಲಿಸಿದ್ದ. ಅದಕ್ಕಾಗಿಯೇ ಈ ಬಾರಿ ಪ್ರಣತಿ ವಿಶೇಷ ಕಾಳಜಿ ವಹಿಸಿದ್ದಳು. ಈಗ ನೋಡಿದ್ರೆ ಬರೀ ತಪ್ಪುಗಳೇ ಕಣ್ಣಿಗೆ ಬೀಳ್ತಾ ಇದೆ. ರಿಪೋರ್ಟ್ ಮುಗಿಯುತ್ತಿದ್ದಂತೆ ಬೇರೇನೂ ನೋಡೋ ಮನಸ್ಸಿಲ್ಲದೆ ಪ್ರಣತಿ ಟಿವಿ ಆರಿಸುವುದಕ್ಕೂ, ಮೊಬೈಲ್ ಸದ್ದು ಮಾಡುತ್ತಾ ಸಂದೇಶ ಬಂದಿದೆ ಎಂಬ ಮಾಹಿತಿ ನೀಡುವುದಕ್ಕೂ ಸರಿ ಹೋಯಿತು.
'ಹೋ, ಫೋನ್ ಮಾಡಿ ಉಗಿಯೋ ಬದಲು ಪಾಟೀಲ್ ಮೆಸೇಜ್ ಕಳಿಸಿದ್ದಾನೆ. ನಾಳೆ ಆಫೀಸಲ್ಲಿ ಇದೆ ಹಬ್ಬ' ಎಂದುಕೊಂಡು ಬೇಸರದಿಂದಲೇ ಮೊಬೈಲ್ ಕೈಗೆತ್ತಿಕೊಂಡ ಪ್ರಣತಿಗೆ ಆಶ್ಚರ್ಯವಾಯ್ತು. 'ನೈಸ್ ರಿಪೋರ್ಟ್. ವೆರೀ ಮಚ್ ಟಚಿಂಗ್. ಗುಡ್ ಎಂದಿತ್ತು.' ಪ್ರಣತಿಯ ಎಲ್ಲಾ ಆತಂಕ ಕ್ಷಣಾರ್ಧದಲ್ಲೇ ಕರಗಿತು.
-----------------------------
ಸುಟ್ಟು ಹೋಗಿದ್ದ ಆ ಕೊಳೆಗೇರಿಯ ಪಕ್ಕದ ಸಾರಾಯಿ ಅಂಗಡಿಯಲ್ಲಿ ನಿತ್ಯದಷ್ಟು ಜನ ಇರಲಿಲ್ಲ. ಮನೆ ಕಳೆದುಕೊಂಡಿದ್ದ ಹಲವರು ಬೇರೆ ಆಶ್ರಯ ಹುಡುಕಿ ಹೊರಟಿದ್ದರು. ಇನ್ನೂ ಕೆಲವರು ತಲೆಯ ಮೇಲಿನ ಸೂರಿಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದರು. ಬೆಟ್ಟಪ್ಪ ಯಾಕೋ ಸ್ವಲ್ಪ ಹೆಚ್ಚೇ ಭಾವಾವೇಷದಲ್ಲಿದ್ದ. ದುಖದಲ್ಲಿದ್ದ. 'ಏನ್ಲಾ ಹಿಂಗಾಯ್ತು ಕೆಂಚ,ಗುಂಡು ಹಾಕಿದ್ ಮೇಲೆ ಮೊನ್ನೆ ಸುಮ್ನೆ ಮನೆ ಕಡೆ ಹೋಗಿದ್ರೆ ಇಷ್ಟೆಲ್ಲಾ ಆಯ್ತಿತ್ತಾ,ಅಲ್ಲಿ ಹಟ್ಟಿ ತಾವ ಅಲ್ಯಾರನ್ನಾ ಬೈಯ್ತಾ ಕುಂತ್ಕೊಂಡೆ...ಅಲ್ಲೇ ಬೀಡಿ ಸೇದಿ ಒಗಾಸ್ದೋ . ನೋಡ್ಲಾ ಹೆಂಗಾಗೋಯ್ತು...'ಬೆಟ್ಟಪ್ಪ ಕುಡಿದ ಅಮಲಲ್ಲಿ ಗೋಳಾಡತೊಡಗಿದ.
'ಲೇ ಸುಮ್ಕಿರ್ಲಾ...ಯಾರಾದ್ರೋ ಕೇಳಿಸ್ಕೊಂಡ್ರೆ ಅಷ್ಟೇಯಾ ಜೈಲಿಗೆ ಹೋಗ್ಬೇಕಾಯ್ತದೆ. ಅದರಲ್ಲೂ ಯಾರೋ ಬಂದು ಬೆಂಕಿ ಹಾಕಿದ್ದೂ ನೋಡಿದೀವಿ ಅಂತ ಬೇರೆ ಸುಳ್ಳು ಹೇಳಿದೀವಿ.' ಕೆಂಚ ಬೆಟ್ಟಪ್ಪನ್ನ ಬಾಯಿ ಮುಚ್ಚಿ ಪಿಸುಗುಟ್ಟಿದ.
'ಅಲ್ಲಿ ಪೊದೆಗೆ ಬೆಂಕಿ ಹೊತ್ಕೊಂಡ್ರೂ ನಾವು ಸುಮ್ನೆ ಕಣ್ಣುಮುಚ್ಕೊಂಡು ಹೋಗಿದ್ದು ತಪ್ಪು ಕಣ್ಲಾ...ಬೆಂಕಿ ಇಷ್ಟು ದೊಡ್ದಾಗಿ ಸುಟ್ಟು ಹಾಕ್ ಬಿಡ್ತಾದೇ ಅನ್ ಕಂಡಿರಲಿಲ್ಲಾ ಕೆಂಚ...'ಬೆಟ್ಟಪ್ಪನ್ನ ಗೋಳಾಟ ಮುಂದುವರಿದೇ ಇತ್ತು.
-------------------------------
ಮಧ್ಯರಾತ್ರಿ
'ಮಿನಿಸ್ಚ್ರು ರೆಡ್ಡಿ ಹತ್ರ ಮಾತಾಡಿದ್ಯಾ....' ಟಿವಿಯಲ್ಲಿ ಬರುತ್ತಿದ್ದ ಯಾವುದೋ ರೊಮ್ಯಾಂಟಿಕ್ ಮೂವಿಯಲ್ಲಿ ಮುಳುಗಿದ್ದ ಪ್ರಣತಿ, ಸೂರಜ್ ಮಾತಿಗೆ ಪ್ರತಿಕ್ರಿಯಿಸಲಿಲ್ಲ.
'ನೀನು ಮಾತಾಡ್ದೇ ಇದ್ರೆ, ಕಷ್ಟ ಆಗುತ್ತೆ ಪ್ರಣತಿ. ಎಲ್ಲಾ ಕಡೆ ಗ್ಲೋಬಲ್ ರೆಸೆಷನ್ ಅಂತಿದ್ರೂ ನಮ್ಮ ಬಾಸ್ ನನಗೆ ಡಬಲ್ ಪ್ರಮೋಶನ್ ಕೊಡೋಕೆ ರೆಡಿ ಇದಾರೆ. ಈ ಕಾಂಟ್ರಾಕ್ಟ್ ಒಂದು ನಮ್ಮ ಕಂಪನಿಗೆ ಸಿಗಬೇಕು ಅಷ್ಟೆ. ರೆಡ್ಡಿ ನಿನ್ನ ಮಾತು ತೆಗೆದು ಹಾಕಲ್ಲ. ಇಲ್ಲ, ಅಂದ್ರೆ ನೀನು ಬಹಳ ಇಷ್ಟ ಪಟ್ಟಿರೋ ಆ ಫಾರ್ಮ ಹೌಸ್ ಕೊಂಡ್ಕೋಳ್ಳೋದು ಸಾಧ್ಯನೇ ಇಲ್ಲ. ಮರೆತು ಬಿಡು.' ಕಳೆದ ಒಂದು ವಾರದಿಂದ ಸೂರಜ್ ಕೇಳುತ್ತಲೇ ಇದ್ದ. ಪ್ರಣತಿ ಯಾಕೋ ರೆಡ್ಡಿಯನ್ನು ಕೇಳಲು ಹಿಂಜರಿದಿದ್ದಳು.
'ಖಂಡಿತಾ ನಾಳೆ ಮಾತಾಡ್ಲೇ ಬೇಕು. ರೆಡ್ಡಿಗೆ ತಾನು ಎಷ್ಟು ಬಾರಿ ಪಬ್ಲಿಸಿಟಿ ಕೊಟ್ಟಿಲ್ಲ.ಹಿಂಜರಿಕೆ ಯಾಕೆ. ತಾನು ಯಾರಿಗೂ ಅನ್ಯಾಯ ಮಾಡ್ತಾ ಇಲ್ವಲ್ಲಾ.' ಪ್ರಣತಿ ತನಗೆ ತಾನೇ ಸಮರ್ಥನೆ ಕೊಟ್ಟುಕೊಂಡಳು.
ಅಗಲೇ, ಫೋನ್ ರಿಂಗಾಯ್ತು...ನಂಬರ್ ನೋಡಿದವಳೇ ಬೇಸರದಿಂದ ಫೋನ್ ಕಟ್ ಮಾಡಿದ್ಲು. 'ಯಾರದ್ದು...'ಸೂರಜ್ ಕೇಳಿದ.
'ಅದೇ ಗುಡಿಸಲಿನ ಜನ. ಇವತ್ತು ಹೋಗಿದ್ದೆನಲ್ಲಾ, ಏನಾದ್ರೋ ಇನ್ಫರ್ಮೇಶನ್ ಕೊಡಬಹುದು ಅಂತ ಫೋನ್ ನಂಬರ್ ಕೊಟ್ಟೆ. ಈಗ ನೋಡಿದ್ರೆ ಅವನ ಮಗ ಯಾರೋ ಎಸ್ ಎಸ್ ಎಲ್ ಸಿ ನಲ್ಲಿ 70 ಪರ್ಸೆಂಟ್ ತಗೊಂಡಿದಾನಂತೆ. ಆ ಇಡೀ ಕೊಳೆಗೇರಿಯಲ್ಲಿ ಇದುವರೆಗೆ ಅವನಷ್ಟು ಮಾರ್ಕ್ಸ್ ಯಾರೂ ತಗೊಂಡೇ ಇಲ್ವಂತೆ. ಒಳ್ಳೇ ಕಾಲೇಜಲ್ಲಿ ಸೀಟು ಕೊಡ್ಸಿ,. ಮಿನಿಸ್ಚ್ರ ಹತ್ರ ಹೇಳಿ ಹಣದ ಸಹಾಯ ಮಾಡ್ಸಿ ಅಂತಾ ಒಂದೇ ಸಮನೆ ಪಕ್ಕದ ಕಾಯಿನ್ ಬೂತ್ ನಿಂದ ಫೋನ್ ಮಾಡ್ತಾ ಇದ್ದಾನೆ. ಮಿನಿಸ್ಟ್ರ ಹತ್ರ ಇದೆಲ್ಲಾ ಕೇಳೋದು ಏನು ಚೆನ್ನಾಗಿರುತ್ತೆ ಹೇಳಿ...'ಪ್ರಣತಿ ಬೇಸರದಿಂದ ನುಡಿದಳು.
ಮೊಬೈಲ್ ಸ್ವಿಚ್ ಆಫ್ ಮಾಡಿದವಳೆ...'ನಡೀ ಸೂರಜ್ ಮಲ್ಕೊಳ್ಳೋಣ, I am very much tierd. ನಾಳೆ ಖಂಡಿತಾ ರೆಡ್ಡಿ ಆಫೀಸಿಗೆ ಹೋಗ್ತೀನಿ' ಎಂದು ಎದ್ದು ನಿಂತಳು.
-------------------------------
"ನಾನು ಹೇಳುವುದೆಲ್ಲಾ ಸತ್ಯ" ಹೆಸರಿನಲ್ಲಿ ಪ್ರಕಟಗೊಂಡಿದೆ.