ಕ್ಯಾಪರ್ನೌಮ್
ಬೀರತ್ ನಲ್ಲಿ ನಿನ್ನೆ ಸಂಭವಿಸಿದ ದೊಡ್ಡ ಸ್ಫೋಟದಿಂದಾಗಿ
ಈ ಲೆಬನೀಸ್ ಸಿನಿಮಾ ಮತ್ತೆ ನೆನಪಿಗೆ ಬಂತು. 2018ರಲ್ಲಿ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಮೊದಲು
ಪ್ರದರ್ಶನ ಕಂಡು, ನಂತರ ಹಲವಾರು ಚಿತ್ರೋತ್ಸವಗಳಲ್ಲಿ ಅಪಾರ ಮೆಚ್ಚುಗೆಯ ಜೊತೆ ಪ್ರಶಸ್ತಿ
ಬಾಚಿಕೊಂಡ ಚಿತ್ರ ಇದು, ಜೊತೆಗೆ ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ಕಮರ್ಷಿಯಲ್ ಆಗಿಯೂ
ಯಶಸ್ವಿಯಾದ ಚಿತ್ರ.
ಲೆಬನಾನ್ ರಾಜಧಾನಿ ಬೀರತ್ ನ ಸ್ಲಮ್ ಒಂದರ ಹುಡುಗನ ಹೋರಾಟದ
ಕತೆ ಇದು. ತನ್ನ ಹೆತ್ತವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಕೋರಿ ಝೈನ್ ಕೋರ್ಟ್ ಮೆಟ್ಚಿಲು
ಹತ್ತುವುದರ ಮೂಲಕ ಸಿನಿಮಾ ಆರಂಭವಾಗುತ್ತದೆ. ಆತನ ಪ್ರಕಾರ ಅವನ ಹೆತ್ತವರ ಅಪರಾಧವೆಂದರೆ ಅವನನ್ನು
ಹುಟ್ಟಿಸಿದ್ದು. ಏಳು ಜನ ಒಡಹುಟ್ಟಿದವರ ಜೊತೆ, ಹಸಿವಿನ, ಕಡುಬಡತನದ ಬದುಕು ತಳ್ಳುತ್ತಿರುವ ಝೈನ್ ನ ಹೋರಾಟ ಸಾಕಲಾಗದಿದ್ದರೂ
ಮಕ್ಕಳನ್ನು ಮಾಡಿಕೊಳ್ಳುವ ತನ್ನಂತಹ ಎಲ್ಲಾ ಹೆತ್ತವರ ವಿರುದ್ಧ. ಅಲ್ಲಿಂದ ಮುಂದೆ ಝೈನ್ ಎದುರಿಸಿದ
ಪರಿಸ್ಥಿತಿಗಳು, ಬದುಕಲು ಆತ ಮಾಡುವ ಸಾಹಸ, ತನ್ನ ತಂಗಿಯರನ್ನು ಕಾಪಾಡಲು ಆತನ ಮಾಡುವ ಪ್ರಯತ್ನಗಳು,
ಹೆತ್ತವರ ತಣ್ಣನೆಯ ಕ್ರೂರತನಗಳು ಜೊತೆಗೆ, ನಿರಾಶ್ರಿತರ ಹೀನಾಯ. ಬದುಕು, ಬವಣೆಯೂ
ಅನವಾರಣಗೊಳ್ಳುತ್ತಾ ಹೋಗುತ್ತದೆ.
ಲೆಬನಾನ್ ನಿಂದ ಬರುವ ಚಿತ್ರಗಳ ಸಂಖ್ಯೆ ಕಡಿಮೆಯಾದರೂ, ಇತ್ತೀಚಿನ
ವರ್ಷಗಳಲ್ಲಿ ಅಲ್ಲಿನ ಚಿತ್ರಗಳೂ ಸಾಕಷ್ಟು ಗಮನಸೆಳೆಯುತ್ತಿವೆ. ಝೈನ್ ಪಾತ್ರದಲ್ಲಿ ನಟಿಸಿರುವ ಸಿರಿಯಾದ
ನಿರಾಶ್ರಿತ ಬಾಲಕ ಝೈನ್ ಅಲ್ ರಫೀಯ ಮುದ್ದು, ಮುಗ್ದ ಮತ್ತು ಗಂಭೀರ ಮುಖ ಹಲವು ದಿನ ಮನಸ್ಸಲ್ಲಿಯೇ
ಉಳಿದು ಬಿಡುತ್ತದೆ. ಈಗಾಗಲೇ ತನ್ನ ಹಲವು ಚಿತ್ರಗಳಿಂದ ಗಮನಸೆಳೆದಿರುವ ನಿರ್ದೇಶಕಿ ನಾದೀನ್
ಲಬಿಕಿ ಈ ಚಿತ್ರದಲ್ಲಿ ಎರಡು ಯುದ್ಧ ನಿರತ ರಾಷ್ಚ್ರಗಳ ನಡುವೆ ಸಿಲುಕಿ ತನ್ನ ಗತ ವೈಭವ ಕಳೆದುಕೊಂಡಿರುವ
ಲೆಬನಾನ್ ನ ಈಗಿನ ಸ್ಥಿತಿಯನ್ನು ನೈಜ್ಯವಾಗಿ ತೆರೆಯ ಮೇಲೆ ಮೂಡಿಸುತ್ತಾರೆ. ವಿಷಾದದ
ಸಂಗತಿಯೆಂದರೆ, ಈ ಚಿತ್ರದ ಕತೆ ಲೆಬಾನಾನ್ ಗೆ ಸೀಮಿತವಾಗಬೇಕಿಲ್ಲ. ಎಷ್ಟೋ ದೇಶಗಳ ಸ್ಥಿತಿ
ಇದಕ್ಕಿಂತ ಬೇರೆಯದಾಗೇನೂ ಇಲ್ಲ,
ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ಲಭ್ಯ