Friday, October 12, 2007

ವೋ ಬರಸಾತ್ ಕೀ ರಾತ್........

ಹೊರಗೆ ಸುರಿಯುವ ಮಳೆ, ನಸುಗತ್ತಲು, ಮುಖೇಶ್ ನ ಧರ್ದ್ ಬರೀ ಕಂಠದಿಂದ ಭೂಲೀ ಹುಯಿ ಯಾದೋ ಮುಝೆ ಇತನಾ ನ ಸತಾವೋ.....ಕಿಟಕಿಯ ಸರಳಿನ ಮೂಲಕ ಹನಿಗಣನ್ನೆಣಿಸುತ್ತಿರುವ ನಾನು...........

ಯಾವತ್ತಾದರೋ ಜೋರಾಗಿ ಸುರಿವ ಮಳೆ ನೋಡುತ್ತಾ ನಿಮ್ಮ ಇಷ್ಟದ ಹಾಡು ಕೇಳುತ್ತಾ, ಒಂಟಿಯಾಗಿ ಕಾಲ ಕಳೆದಿದ್ದೀರಾ? ಹಾಗಿದ್ದರೆ ಮಳೆ ಕಟ್ಟಿಕೊಡುವ ಭಾವನಾ ಪ್ರಪಂಚದ ಪರಿಚಯ ನಿಮಗಿರಲೇ ಬೇಕು.
ಆದರೂ, , ಮಳೆಗಿರುವ ನೆನಪುಗಳನ್ನು ಬಡಿದೆಬ್ಬಿಸುವ ಅಗಾಧ ಶಕ್ತಿಯ ಅರಿವಾಗಬೇಕೆಂದರೆ ಮಲೆನಾಡಿನ ಯಾವುದಾದರೋ ಹಳ್ಳಿಯಲ್ಲಿ ಮಳೆಗಾಲದ ಒಂದು ರಾತ್ರಿಯನ್ನು ಕಳೆಯಬೇಕು
ಸೂರ್ಯ ಮುಳುಗುತ್ತಿದ್ದಂತೆ ತೆಪ್ಪಗಾಗುವ ಈ ಹಳ್ಳಿಗಳಲ್ಲಿ ಜೋರಾಗಿ ಮಳೆ ಸುರಿದು ಕರೆಂಟ್ ಕೈಕೊಟ್ಟರೆ ಕೇಳುವುದೇ ಬೇಡ. ಜೀಗುಟ್ಚುವ ಕತ್ತಲಲ್ಲಿ ನಿಶಬ್ವವೇ ಮೂಖವಾದಂತಹ ಮೌನ. ಧೋ ಎಂದು ಸುರಿಯುವ ಮಳೆಯ ಸದ್ದು ಕೂಡ ತನ್ನ ಏಕತಾನತೆಯಿಂದಾಗಿ ಅ ಮೌನವನ್ನು ಮತ್ತಷ್ಟು ಹೆಪ್ಪುಗಟ್ಟಿಸುತ್ತದೆ. ಕಣ್ಣು ಹಾಯಿಸಿದಷ್ಚು ಉದ್ದಕ್ಕೂ ಕಾಣುವ ಅದೇ ನೋಟ. ನೋಡುತ್ತಾ ನಿಂತರೆ ನೆನಪುಗಳು ಸುರುಳಿಯಾಗಿ ಬಿಚ್ಚಿಕೊಳ್ಳುತ್ತವೆ,

ಉಣ್ಣದೆ ಮಲಗಿದವರನ್ನು ಎಬ್ಬಿಸಿ ಅಮ್ಮ ಬಲವಂತವಾಗಿ ಊಟ ಮಾಡಿಸಿದ್ದು, 25 ಪೈಸೆ ಕದ್ದಿದ್ದಕ್ಕೆ ಅಪ್ಪ ಹೊಡೆದಿದ್ದು, ಶಾಲೆಯಲ್ಲಿ ಕೊಟ್ಟ ಪುಟ್ಟ ಸ್ಟೀಲ್ ಲೋಟದ ಬಹುಮಾನವನ್ನು ಅಪ್ಪ ಹೆಮ್ಮೆಯಿಂದ ಎಲ್ಲರಿಗೂ ತೋರಿಸಿದ್ದು. ಫ್ರಿಲ್ಸ್ ಇರುವ ಫ್ರಾಕ್ ತೊಡುವ ಕನಸು ಕನಸಾಗಿಯೇ ಉಳಿದದ್ದು, ತಮ್ಮನಿಗೆ ಬರೀ ಸುಳ್ಳು ಕಥೆ ಕಟ್ಟಿ ಹೇಳಿ ನಂಬಿಸಿದ್ದು, ಅದೇ ಪುಟ್ಟ ತಮ್ಮ ಕಡಿಮೆ ಮಾರ್ಕ್ಸ್ ತಗೊಂಡು ಅಳುತ್ತಿದ್ದ ನನ್ನ ಕಣ್ಣೊರೆಸಿದ್ದು, ಎರಡು ವರ್ಷ ನಿರಂತರವಾಗಿ ಕಾಲೇಜಿನವರೆಗೂ ಹಿಂಬಾಲಿಸಿದ ಹುಡುಗ ಕೊನೆವರೆಗೂ ಮೌನವಾಗಿಯೇ ಉಳಿದು ಮರೆಯಾದದ್ದು, ಹೈಸ್ಕೂಲ್ ಪ್ರೇಮಕ್ಕೆ ಇನ್ಫ್ಯಾಚುಯೇಶನ್ ಎಂಬ ಹೆಸರಿಟ್ಟು ಬದುಕು ಗುರಿ ತಪ್ಪದಂತೆ ಕಾದಿದ್ದು......ಹೀಗೇ ಏನೇನೋ ಒಂದಕ್ಕೊಂದು ಸಂಬಂಧವಿಲ್ಲದ ನೆನಪುಗಳ ಸರಮಾಲೆ.. ಸುರಿಯುತ್ತಿರುವ ಮಳೆಯಿಂದಾಗಿ ಮನದಲ್ಲಡಗಿರುವ ನೆನಪುಗಳೆಲ್ಲಾ ಒದ್ದೆಯಾಗಿ ಒಂದಕ್ಕೊಂದು ಅಂಟಿಕೊಂಡು ಬಿಡಿಸಲಾಗದೆ, ಕಲಸುಮೇಲೊಗರವಾದ ರೀತಿ...

ಈ ಯಾವ ನೆನಪುಗಳೂ ಮನಸ್ಸಿಗೆ ಎಂದಿಗೂ ಸಂತಸ ತಂದ್ದಿಲ್ಲ ..ಅಂತರ್ಮುಖಿಯಾಗಿಸುತ್ತದೆ. ಆದರೂ ಮತ್ತೆ ಮತ್ತೆ ಮಳೆ ನೋಡುತ್ತಾ ನೆನಪುಗಳ ಧೂಳು ಕೊಡಹುವ ಬಯಕೆ..ಗಾಯವನ್ನು ಮತ್ತೆ ಮತ್ತೆ ಮುಟ್ಟಿಕೊಂಡು ನೋವು ಅನುಭವಿಸುವಂತೆ ..ಎಂತಹದ್ದೋ ಅನುಭವಿಸುವ ಚಟ ಹತ್ತಿಸುವಂತಹ ಸಣ್ಣ ನೋವು....ಅದಕ್ಕೆ ನನಗನ್ನಿಸುವುದು ಮಳೆಯೆಂದರ ಮ್ಲಾನತೆ.......ಖಿನ್ನತೆ.....ನೆನಪುಗಳ ಯಾತನೆ.

Saturday, August 18, 2007

ಗುಲ್ ಮೊಹರ್ ಹಾದಿಯಲ್ಲಿ ಒಂದು ಪಕಳೆ


{ ಹದಿಹರೆಯದ ಆ ದಿನಗಳಲ್ಲಿ ಮೂಡಿದ ನನ್ನ ಚೊಚ್ಚಲ ಕೃತಿ। ನಾನು ಬರೆಯಬಲ್ಲೆ ಎಂಬ ವಿಶ್ವಾಸ ಮೂಡಿಸಿದ್ದ ಕಥೆ. ಹೀಗಾಗಿ ಪ್ರೀತಿ ಕೊಂಚ ಹೆಚ್ಚು। }

ಪ್ರೀತಿಯ ಹುಡುಗ,

ಹಾಗಂತ ಕರಿಯಬಹುದು ತಾನೆ? ಈಗ ನೀನು ಹುಬ್ಬು ಹಾರಿಸುತ್ತೀ! ಹಣೆ ಒತ್ತಿಕೊಳ್ಳುತ್ತಿ ಸರೀನಾ? ಆಶ್ಚರ್ಯ ಆದಾಗ ನೀನು ಹೀಗೇ ತಾನೆ ಮಾಡೋದು. ಈ ವಯಸ್ಸಿನಲ್ಲಿ [ನಿನಗೆಷ್ಟು ಈಗ ೪೮ ವರ್ಷ ಹೌದು ತಾನೆ] ಯಾರು "ಹುಡುಗ" ಅಂತ ಕರೆಯೋದು ಅಂತ ಆಶ್ಚರ್ಯನಾ? ಇಪ್ಪತ್ತರ ಚಿಗುರು ಮೀಸೆ ಹುಡುಗನಾಗಿ ಕೊನೆಯ ಬಾರಿ ನಿನ್ನ ನೋಡಿದಾಗ ನನ್ನ ಮನದಲ್ಲಿ ಮೂಡಿದ್ದ ನಿನ್ನ ಚಿತ್ರಕ್ಕೆ ಇನ್ನೂ ವಯಸ್ಸಾಗಿಲ್ಲ . ಇದ್ಯಾರಪ್ಪ ಅಂತ ಯೋಚಿಸುವುದನ್ನು ನಿಲ್ಲಿಸು. ನಿನಗೆ ಖಂಡಿತಾ ನನ್ನ ನೆನಪಿಲ್ಲ. ಇಷ್ಟು ದಿನ ಅದುಮಿ ಅದುಮಿ ಒಳಗೆ ಮುಚ್ಚಿಟ್ಟಿದ್ದ ಭಾವನೆಗಳೆಲ್ಲಾ ಇಂದೇಕೋ ಒಮ್ಮೆಗೆ ಆಸ್ಪೊಟಿಸಿವೆ. ಅದನೆಲ್ಲಾ ಒಳಗೆ ತುರುಕಿ ಪುನ: ಹೃದಯದ ಕದ ಮುಚ್ಚುವ ಮೊದಲು ಹೊರ ಹಾರಿದ್ದರಲ್ಲಿ ನಿನ್ನ ನೆನಪಿನ ತುಣುಕೂ ಇತ್ತು. ಭಾವನೆ ಹರಿಬಿಡಲು ಒಂದು ಗುರಿ ಬೇಕು ತಾನೆ? ನೀನು ನನ್ನ ಗುರಿ ಅಷ್ಟೇ. ನಿನ್ನ feedback ಬೇಕಿಲ್ಲ. ಆದ್ದರಿಂದ ಸುಮ್ಮನೆ ಓದು.
ನಾನು ನಿನ್ನ ಜೊತೆ ಕಾಲೇಜಿನಲ್ಲಿ ನಿನ್ನದೇ ತರಗತಿಯಲ್ಲಿ ಕೂತಿರುತ್ತಿದ್ದ ಹುಡುಗಿ. ಎಲ್ಲರಿಗಿಂತ ಮೊದಲು ಬಂದು ಎಲ್ಲರಿಗಿಂತೆ ಕೊನೆಗೆ ಎದ್ದು ಸುಮ್ಮನೆ ನಡೆದು ಬಿಡುತ್ತಿದ್ದ ನಾನು ನಿನ್ನ ಅಷ್ಟೇ ಯಾಕೆ ಮತ್ಯಾರ ನೆನಪಲ್ಲೂ ಇರಲಿಕ್ಕಿಲ್ಲ. ಏಕೆಂದರೆ ನನಗೆ ನನ್ನದೇ ಆದ Identity ಇರಲೇ ಇಲ್ಲ. ಇರಲಿಲ್ಲ ಯಾಕೆ, ಈಗಲೂ ಇಲ್ಲ.
ಅವತ್ತೊಂದು ದಿನ ಕಾಲೇಜಿನಲ್ಲಿ ನೀನು "ಮೇರೆ ಮೆಹೆಬೂಬ್ ತುಝೆ..." ಅಂತ ಭಾವಪೂರ್ಣವಾಗಿ ಹಾಡಿದಾಗ ಅದ್ಯಾಕೋ ಗೊತ್ತಿಲ್ಲ ನೀನು ನನಗಾಗಿಯೇ ಹಾಡಿದೆ ಅನ್ನಿಸಿಬಿಟ್ಟಿತು. ಅಂದಿನಿಂದ ನಿನ್ನ ಗುಟ್ಟಾಗಿ ಗಮನಿಸಲಾರಂಭಿಸಿದೆ. ನೀನು ಕ್ಲಾಸಿನಲ್ಲಿ ಕುಳಿತು ಹುಡುಗಿಯರನ್ನು ನೋಡುವುದು, ಅದರಲ್ಲೂ ಸೀಮಾ ರೆಡ್ಡಿಯ ಕಡೆ ಆಗಾಗ ಕಳ್ಳ ನೋಟ ಹರಿಸುವುದು, ಸೀಮಾ ಬೇರೆಯವನ ಜೊತೆ ಸುತ್ತಲಾರಂಭಿಸಿದಾಗ ಒಂದು ತಿಂಗಳು ಗಡ್ಡ ಬಿಟ್ಟು, ನಂತರ ಟ್ರಿಮ್ ಆಗಿ ಶಾರದಳನ್ನು ಹಿಂಬಾಲಿಸಿದ್ದು, ನೋಟ್ಸ್ ಬರೆದಂತೆ ನಟಿಸಿ ಚಿತ್ರ ಬರೆದದ್ದು ಯಾವುದೂ... ಯಾವುದೂ... ನನ್ನ ಕಣ್ಣು ತಪ್ಪಿಸಿಲ್ಲ. ಹುಡುಗ ಇವುಗಳಲೆಲ್ಲಾ ನನಗೆ ಬೇಸರ ತಂದ ಸಂಗತಿ ಒಂದೇ... ಇಷ್ಟೆಲ್ಲಾ ಮಾಡಿದವ ನೀನು ತಪ್ಪಿ ಕೂಡ ನನ್ನ ಕಡೆ ನೋಡಲಿಲ್ಲ.
ಹಾಗಂತ ನಾನು ಕುರೂಪಿಯಾಗಿದ್ದೆ ಅಂತ ತಿಳೀಬೇಡ. ನಾನು ಸುಂದರಿಯರ ಸಾಲಿಗೆ ಸೇರಿದವಳೇ. ಅಪ್ಪನ ಶ್ರೀಮಂತಿಕೆಯೂ ಜೊತೆಗಿತ್ತು, ಬುದ್ದಿವಂತೆಯೂ ಆಗಿದ್ದೆ. ಆದರೆ ಇದೆಲ್ಲದರ ಜೊತೆಗೆ ಮುಖೇಡಿತನ, ಆತ್ಮವಿಶ್ವಾಸದ ಕೊರತೆಯೂ ಇತ್ತು. ಹುಡುಗರು ಬಿಡು, ಹುಡುಗಿಯರಲ್ಲೂ ನನಗೆ ಸುಮ ಒಬ್ಬಳೆ ಸ್ನೇಹಿತೆ. ನಮ್ಮ ಕ್ಲಾಸಿನ ಎಲ್ಲಾ ಹುಡುಗ ಹುಡುಗಿಯರ ಕಣ್ಣಿಗೆ ನಾನು ಗಂಭೀರ, ಶಾಂತ, ಅಂತರ್ಮುಖಿಯಾದ ಹುಡುಗಿ. ಆದರೆ ನಿಜ ಹೇಳುತ್ತೇನೆ ಕೇಳು, ನನಗೆ ನೀವು ಆರೋಪಿಸಿದ ಆ ಗಂಭೀರತೆ ಬೇಡವಿತ್ತು. ನನಗೂ ನೀನಾ, ರಮ್ಯ, ಸ್ಮಿತಾರಾವ್ ರಂತೆ ಮಾಡ್ ಡ್ರೆಸ್ ಮಾಡಿಕೊಂಡು ಊರು ಸುತ್ತೋ ಆಸೆ ಇತ್ತು. ಕ್ಲಾಸಿಗೆ ಚಕ್ಕರ್ ಮಾಡೋ ಆಸೆ ಇತ್ತು, ಲೆಕ್ಚರರ್‍ಗೆ ಅಡ್ಡ ಹೆಸರಿಟ್ಟು ಕರೆಯೋ ಆಸೆ ಇತ್ತು. ಥಿಯೇಟರ್‍ನ ಕತ್ತಲಲ್ಲಿ ಕುಳಿತು ಆಗಿನ ಬಿಸಿ ಜೋಡಿ " ಹಂ ತುಮ್ ಎಕ್ ಕಮರೇ ಮೆ ..." ಎಂದು ಹಾಡುವುದನ್ನು ನೋಡೋ ಆಸೆ ಇತ್ತು. ಆದರೆ... ಜೊತೆಗೆ ಭಯ ಬೇಕಾದಷ್ಟಿತ್ತು.
ಹೀಗಿದ್ದ ನನ್ನ ಶುಷ್ಕ ಜೀವನದಲ್ಲೂ ಒಂದು ಬಾರಿ ವಸಂತ ಬಂತು. ಅಂತ ಸಂಭ್ರಮಿಸಿದೆ. ಹೆಚ್ಚೇನೂ ಆಗಿರಲಿಲ್ಲ. ಸುಮ ಒಂದು ಪುಸ್ತಕ ಕೊಟ್ಟು ನಿನಗೆ ಕೊಡಲು ಹೇಳಿ ಊರಿಗೆ ಹೋಗಿದ್ದಳು ಅಷ್ಟೆ. ನಗಬೇಡ ಹುಡುಗ ಅವತ್ತು ರಾತ್ರಿ ಇಡೀ ನನಗೆ ಸರಿಯಾಗಿ ನಿದ್ದೆ ಇಲ್ಲ. ನಿದ್ದೆ ಬಂದರೂ ಅರೆ ಬರೆ ಕನಸು. ನಾನು ಪುಸ್ತಕ ಕೊಟ್ಟೆ, ನೀನು ಕೈ ಹಿಡಿದೆ. ಕಣ್ಣಲ್ಲಿ ಇಳಿದೆ. ನಂತರ ಮದುವೆ ಮಕ್ಕಳು... ಹೀಗೆ ಏನೇನೋ. ಕನಸುಗಳಿಗೆ ಮಿತಿ ಕ್ಷಿತಿಜ ತಾನೆ?
ಮಾರನೆ ದಿನ ಚೂರು ಮುತುವರ್ಜಿಯಿಂದ ಅಲಂಕರಿಸಿಕೊಂಡೆ. ನೆನಪಿಡು ಚೂರೇ ಚೂರು. ನನ್ನ ಅಲಂಕಾರದಲ್ಲಿ ಏನೇ ವ್ಯತ್ಯಾಸ ಆದರೂ ಅಜ್ಜಿಯ ಬೆದರಸಿವ ಕಣ್ಣಿನಿಂದ ಹಿಡಿದು ತಂಗಿಯ ಕೆದಕುವ ಪ್ರಶ್ನೆಯವರೆಗೂ ಏನೆಲ್ಲಾ ಎದುರಿಸಬೇಕು. ಅವತ್ತು ಕಾರಿಡಾರಿನ ಆ ತುದಿಯಿಂದ ನೀನು ಒಬ್ಬನೇ ನಡೆದು ಬರುತ್ತಿದ್ದರೆ ನಾನು ಆಗಲೇ ಬೆವರಲಾರಂಭಿಸಿದ್ದೆ. ಬೆವರಿ ನಡುಗುತ್ತಿದ್ದ ಕೈ ಚಾಚಿ "ನೋಟ್ಸ್" ಎಂದೆ. ಉಳಿದ ಹುಡುಗಿಯರೊಂದಿಗೆ ಏನೆಲ್ಲಾ ನೆಪ ತೆಗೆದು ಹರಟೆ ಹೊಡಿಯುವ ನೀನು ಬಗ್ಗಿಸಿದ್ದ ತಲೆ ಎತ್ತಿ ನೋಟ್ಸ್ ಪಡೆದು ಗೌರವಯುತವಾಗಿ "ಥ್ಯಾಂಕ್ಸ್" ಎಂದೆ. ಪುನ: ತಲೆ ತಗ್ಗಿಸಿ ನಡೆದುಬಿಟ್ಟೆ. ನಾನು ಪೋಣಿಸಿದ್ದ ಕನಸುಗಳೆಲ್ಲಾ ದಾರ ಕಡಿದು ಚೆಲ್ಲಾಪಿಲ್ಲಿಯಾಗಿ ಕಾರಿಡಾರಿನ ತುಂಬಾ ಹರಡಿ ಬಿದ್ದಿದ್ದರೆ ನೀನು ಅವುಗಳನ್ನೇ ನಿರ್ದಾಕ್ಷಿಣ್ಯವಾಗಿ ತುಳಿದು ಹೋಗಿಬಿಟ್ಟೆ. ಅಂದು ರಾತ್ರಿ ನನ್ನ ದಿಂಬಿಡೀ ಕಣ್ಣೀರಿನಿಂದ ಒದ್ದೆಯಾಗಿತ್ತು.
ನಿಮ್ಮ ಕಾಲೇಜಿನ ನೆನಪುಗಳಲ್ಲಿ ಚಂದದ ಹುಡುಗಿಯರಿರಬಹುದು. ಅವರೊಂದಿಗೆ ನೀವು ಕಳೆದ ಮಧುರ ಕ್ಷಣಗಳಿರಬಹುದು.ಲೆಕ್ಚರರಿಂದ ಬೈಸಿಕೊಂಡ, ಹುಡುಗಿಯಿಂದ ಕಪಾಳಮೋಕ್ಷ ಮಾಡಿಸಿಕೊಂಡ ನೆನಪುಗಳಿರಬಹುದು ಆದರೆ ನನಗೆ ಕಾಲೇಜೆಂದರೆ ನೆನಪಾಗುವುದು ಬರೀ ದಪ್ಪ ಕನ್ನಡಕದ ಪ್ರೊಫೆಸರ್‍ಗಳು, ಕಪ್ಪು ಹಲಗೆಯ ತುಂಬ ತುಂಬಿಕೊಂಡ ಬಿಳಿ ಬಿಳಿ ಅರ್ಥವಾಗದ ಲೆಕ್ಕಗಳು, ಉತ್ತರಪತ್ರಿಕೆಯ ಮೇಲಿನ ಕೆಂಪು ಅಂಕಗಳು ಮಾತ್ರ. ನೀನು ನಂಬಲಿಕ್ಕಿಲ್ಲ, ಫೇರ್‍ವೆಲ್ ದಿನ ನೀವೆಲ್ಲಾ ನಿಮ್ಮ ನೆನಪುಗಳನ್ನು ಹಂಚಿಕೊಂಡು ಕಣ್ಣೀರು ಹಾಕುತ್ತಿದ್ದರೆ, ನಾನು ಚಿಂತಿಸುತ್ತಿದುದ್ದು ಒಂದೇ ವಿಷಯ. ಲೇಟಾದರೆ ಮನೆಯಲ್ಲಿ ಏನು ಹೇಳುತ್ತಾರೋ ಅಂತ. ಅದಕ್ಕೆ ನನ್ನ ಕಾಲೇಜು ಜೀವನವೇ ಒಂದು ಶುಷ್ಕ ಅನುಭವ. ನೀನು ನಂಬಲಾರೆ ಐದು ವರ್ಷಗಳಲ್ಲಿ ನಮ್ಮಿಬ್ಬರ ನಡುವೆ ನಡೆದ ಸಂಭಾಷಣೆ "ನೋಟ್ಸ್" ಮತ್ತು "ಥಾಂಕ್ಸ್".
ಕಾಲೇಜು ಬಿಟ್ಟ ನಂತರ ನಿನ್ನ ನೋಡಲೇ ಇಲ್ಲ, ಮನೆಯಲ್ಲಿ ಓದು ಸಾಕು ಎಂದರು. ವರಾನ್ವೇಷಣೆ ಆರಂಭಿಸಿದರು. ಆಗ ನೀನು ಖಾಲಿ ಮಾಡಿದ ಜಾಗವನ್ನು ಎದುರು ಮನೆಗೆ ಹೊಸದಾಗಿ ಬಂದ ಹುಡುಗ ತುಂಬಿದ. ಮತ್ತೆ ಕನಸುಗಳು, ಕಲ್ಪನಾ ಲೋಕ. "ನಾನೆ ವೀಣೆ ನೀನೇ ತಂತಿ..." ಆಶ್ಚರ್ಯ ಯಾಕೆ? ಜೀವನದಲ್ಲಿ ಒಬ್ಬರನ್ನೇ ಪ್ರೀತಿಸಲಿಕ್ಕೆ ಸಾಧ್ಯ ಅನ್ನುವ ಮಾತನ್ನ ನಾನು ಒಪ್ಪುವುದಿಲ್ಲ. ಅದು ಪ್ರೇಮದ ದಾರಿದ್ರ್ಯ ಇರುವವರ ಮಾತು. ನನ್ನ ಹೃದಯದಲ್ಲಿರುವ ಸಾಗರದಷ್ಟು ಪ್ರೀತಿಯನ್ನು ಎಷ್ಟೋ ಜನಕ್ಕೆ ಹಂಚಿಕೊಟ್ಟರೂ ಉಳಿಯುವಂತಿತ್ತು.
ನಂತರ ನನ್ನ ಮದುವೆ ಒಬ್ಬ ಡಾಕ್ಟರ್ ಜೊತೆ ನಡೆಯಿತು. ಒಳ್ಳೆ ಮನೆ, ಒಳ್ಳೆ ಗಂಡ, ದುಡ್ಡು, ಅಂತಸ್ತು ಎಲ್ಲಾ ಸಿಕ್ಕಿತು. ನನ್ನ ಅಪ್ಪ ಕಟ್ಟಿಸಿಕೊಟ್ಟ ಆಸ್ಪತ್ರೆಯಲ್ಲಿ ದುಡಿಯಲಿಕ್ಕೇ ಹುಟ್ಟಿದಂತೆ ನನ್ನವರ ಅವಿರತ ಶ್ರಮ. ಇವೆಲ್ಲದರ ಮಧ್ಯದಲ್ಲೇ ಎರಡು ಮಕ್ಕಳು. ನಿಜ ಹೇಳುತ್ತೇನೆ ಹುಡುಗ, ಹೆಣ್ಣಿನ ಜೀವನ ಸಾರ್ಥಕ ಎನಿಸುವುದು ಈ ಹಂತದಲ್ಲೇ, ತಾಯ್ತನದಲ್ಲಿ. ಎಲ್ಲದಕ್ಕೂ ನನ್ನನ್ನೇ ಅವಲಂಬಿಸಿರುವ ಎರಡು ಮುದ್ದಾದ ಜೀವಗಳು. ಎಂತಹ ಸುಖ, ಹೃದಯ ಬಿರಿಯುವಷ್ಟು ತುಂಬಿದ್ದ ಪ್ರೀತಿಯನ್ನೆಲ್ಲಾ ಮೊಗೆದು ಮೊಗೆದು ಧಾರೆ ಎರೆದು ಅವರನ್ನು ಬೆಳೆಸಿದೆ. ನೀವೆಲ್ಲಾ ಎಲ್ಲೋ ಮರೆಯಾಗಿ ಬಿಟ್ಟಿರಿ. ಮರೆತೇ ಬಿಟ್ಟೆನೇನೋ ಎಂಬಂತಹ ವಿಸೃತಿ. "ಅಮ್ಮ ಷೂಸ್ ಎಲ್ಲಿ?", "ಜಡೆ ಹಾಕು", "ಬೇಗ ತಿಂಡಿ ಕೊಡು", "ಇನ್ನೊಂದು ಸ್ವಲ್ಪ ಹೊತ್ತು ಆಡ್ತಿನಿ" ಎನ್ನುತ್ತಿದ್ದ ಕಾಡುತ್ತಿದ್ದ ಮಕ್ಕಳು ದಿನದ ಇಪ್ಪತ್ನಾಲ್ಕು ಗಂಟೆಗಳೂ ಸಾಕಾಗುತ್ತಿರಲಿಲ್ಲ. ತುಂಬಿದ ದಿನಗಳು, ಯಾರೋ ಒಬ್ಬರು ನಮ್ಮನ್ನೆ ಸಂಪೂರ್ಣವಾಗಿ ಆವಲಂಭಿಸಿದ್ದಾರೆ.ಎಂದರೆ ಎಂತಹ ತೃಪ್ತಿ ಅಲ್ಲವಾ?
ಮೊನ್ನೆ ಮೊನ್ನೆ ತನಕ ನನಗೆ ಅಂಟಿಕೊಂಡಿದ್ದ ಮಕ್ಕಳು ಈಗ ತಿಂಡಿ ಮಾಡಿ ಕಾದರೆ "sorry ನನ್ನದಾಯ್ತು" ಅನ್ನುತ್ತಾರೆ. ಬೇಗ ಮನೆಗೆ ಬನ್ನಿ ಅಂದರೆ "please ಮಮ್ಮಿ its my life, I know how to lead it" ಅನ್ನುತ್ತಾರೆ. ನನ್ನೊಂದಿಗೆ ಅನ್ಯೊನ್ಯವಾಗಿ ಬೆಸೆದುಕೊಂಡಿದ್ದ ಅವರ ಜೀವನ ಯಾವಾಗ ಅವರದೇ ಆಯಿತೋ ನನಗೆ ಈಗಲೂ ಅಚ್ಚರಿ.
ನನ್ನವರಿಗೆ ಎಂದಿಗೂ ನಾನು ಒಂದು ಅವಶ್ಯಕತೆ ಅಂತ ಅನಿಸಿರಲೇ ಇಲ್ಲ. ಅವರ ಜೀವನವೇ ಬೇರೆ. ಹೀಗಾಗಿ ತುಂಬೆಕೊಂಡಿದ್ದ ದಿನಗಳು, ಮನಸ್ಸು ಮತ್ತೆ ಖಾಲಿ ಖಾಲಿ. ಈಗ ಪುನ: ನೀವೆಲ್ಲಾ ವೇಷ ಸರಿಪಡಿಸಿಕೊಂಡು ತಲೆ ಕೊಡವಿ ರಂಗಪ್ರವೇಶ ಮಾಡಿದ್ದೀರಿ.
ಇವತ್ತು ನೋಡು ನಾನು ಒಬ್ಬಳೇ ಮನೆಯಲ್ಲಿ. ಮಗ ಸ್ನೇಹಿತರ ಮನೆಯಲ್ಲಿ, ಮಗಳಿಗೆ ಯಾವುದೋ tour, ಇವರಿಗೆ ಮೆಡಿಕಲ್ ಕಾನ್ಫರೆನ್ಸ್. ಹೊರಗೆ ಬೆಳ್ಳನೆ ಬೆಳದಿಂಗಳು. ಅರೆಬಿರಿದ ದುಂಡು ಮಲ್ಲಿಗೆ. "ಚೌದವೀಕಾ ಚಾಂದ್ ಹೊ..." ರಫಿಯ ಕಂಠ. ಎಷ್ಟು ಸುಂದರವಾಗಿದೆ. ಇವರು ಇರುತ್ತಿದ್ದರೂ ಯಾವುದಾದರು ಹ್ಯೂಮನ್ ಅನಾಟಮಿ ಪುಸ್ತಕ ಓದುತ್ತಿರುತ್ತಿದ್ದರು. ಗಂಡ ಹೆಂಡಿರಲ್ಲಿ ಒಬ್ಬರು ಮಾತ್ರ ಭಾವುಕರಾಗಿರುವುದು ಎಂತಹ ದುರಂತ ಅಲ್ವಾ? ರಾತ್ರಿಯ ಈ ನೀರವತೆಯಲ್ಲಿ ಯಾಕೋ ನೀವೆಲ್ಲಾ ತುಂಬಾ ಕಾಡುತ್ತಿದ್ದೀರಾ. ಮನಸ್ಸು ಬಿಚ್ಚಿ ಹಗುರಾಗುವ ಸಲುವಾಗಿಯೇ ಪತ್ರ
ನನ್ನ ಬಗ್ಗೆ ಎನೆಂದುಕೊಳ್ಳುತ್ತಾ ಇದ್ದೀಯ? ನಲತ್ತರ ಹರೆಯದಲ್ಲಿ ಹಳೆಯ ಪ್ರೇಮದ ಕನವರಿಕೆ ಅಂದುಕೊಂಡೆಯಾ? ತಪ್ಪೆನ್ನುತ್ತೀಯಾ? ನನ್ನ ಗಂಡನ ಬಗ್ಗೆ ಎನೇನೋ ಕಲ್ಪಿಸಿಕೊಳ್ಳಬೇಡ. ಅವರು ಒಬ್ಬ ಅತ್ಯಂತ ಒಳ್ಳೆಯ ಗಂಡ. ನನಗೆ ಬೇಕಾದ ಸೆಕ್ಯುರಿಟಿ, ಸಾಮಾಜಿಕ ಗೌರವ ಕಲ್ಪಿಸಿ ಕೊಟ್ಟಿದ್ದಾರೆ. ಒಂದು ದಿನವೂ ನನ್ನ ಮಾತು ಮೀರಿಲ್ಲ. ಪಾರ್ಟಿಗಳು, ಔಟಿಂಗ್, ವರ್ಷಕ್ಕೆರಡು ಟೂರ್, ಎಲ್ಲಾ ಇದೆ. ಆದರೆ ಅದೇಕೋ ಭಾವನೆಗಳು ಬೆಸೆದಿವೆ ಎನಿಸುವುದಿಲ್ಲ.
ಅಂದಿನ ಬಿಸಿ ರಕ್ತದ ಕಾಲದಲ್ಲಿ ಪ್ರೀತಿ ವ್ಯಕ್ತಪಡಿಸಲಾರದವಳಿಗೆ ಈಗ ಧೈರ್ಯ ಬಂದಿದೆ ಎಂದಿಕೊಂಡೆಯಾ? ಖಂಡಿತಾ ಇಲ್ಲ. ಎಲ್ಲೋ ಒಳಗೆ ಹುದುಗಿದ್ದ ಮರೆಯಾಗಿದ್ದ ನೀವೆಲ್ಲ ಇಂದು ಹೊರಗಿಣುಕಿದ್ದೀರಿ ಅಷ್ಟೆ. ಈಗಲೂ ನನಗೆ ಹೆಸರು ಹೇಳೋ ಧೈರ್ಯ ಇಲ್ಲ. ಜೊತೆಗೆ ಸುಮಾಳ ಅಟೋಗ್ರಾಫ್ ನಿಂದ ಕದ್ದ ನಿನ್ನ ಹಳೆಯ ವಿಳಾಸಕ್ಕೆ ಕಳಿಸುತ್ತಿರುವ ಈ ಪತ್ರ ನಿನ್ನ ಕೈ ಸೇರದು ಎಂಬ ವಿಶ್ವಾಸ. ಸಿಕ್ಕರೂ ನೀನು ಹೆಚ್ಚು ಕೆದಕಲಾರೆ ಎಂಬ ನಂಬಿಕೆ.
ಹಾ....ಈ ಪತ್ರ ನಿನ್ನ ಹೆಂಡತಿಗೆ ಸಿಕ್ಕರೂ ಹೆಚ್ಚೇನು ಗಲಾಟೆಯಾಗದು ಆಕೆ ನನ್ನನು ಅರ್ಥೈಸಿಕೊಳ್ಳುತಾಳೆ ಎಂದುಕೊಳ್ಳುತ್ತೇನೆ. ಎಕೆಂದರೆ ಅವಳೂ ನನ್ನ ಗಂಡನಂತವನ ಬಗ್ಗೆ ಕನಸಿಸುತ್ತಿಲ್ಲ ಎಂದು ಯಾವ ನಂಬಿಕೆ? ಸಿನಿಕಳಂತೆ ಮಾತನಾಡುತ್ತಿದ್ದೇನೆ ಅನ್ನುತ್ತೀಯಾ? ಇಲ್ಲ ಬಿಡು ಎಷ್ಟೆಂದರೂ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಅಲ್ವಾ? ಇಲ್ಲಿಗೆ ಮುಗಿಸಲೇ?
ಇತಿ

Tuesday, July 10, 2007

ಕಾಲವನ್ನು ಹಿಂದಕ್ಕೆ ತಿರುಗಿಸೋ ಮಹರಾಯ.......




ಈ ನೆನಪುಗಳೆಲ್ಲಾ ಯಾವತ್ತೂ ಹಸಿಬಿಸಿಯಲ್ಲ. ಎಲ್ಲೋ ಮನಸ್ಸಿನೊಳಗೆ ಅಡಗಿದ್ದು, ಒಮ್ಮೆಲೆ ಪುಸಕ್ಕನೆ ಹೊರಗೆ ಜಾರಿದ್ದು। ಬಹುಶ ಅಜ್ಜಿ ಮನೆಯಲ್ಲಿ ರಜಾ ದಿನ ಕಳೆಯುತ್ತಿದ್ದವರಿಗೆಲ್ಲಾ ಇಂತದೇ ನೆನಪುಗಳು ಕಾಡುತ್ತಿರುತ್ತವೆ। ರಜಕ್ಕಾಗಿಯೇ ಕಾದು ಹೊರಡಲು ಅನುವಾಗಿ ಭರ್ಜರಿ 1 ಅಥವಾ 2 ತಿಂಗಳು ಅಜ್ಜಿಮನೆಯಲ್ಲೇ ಠಿಕಾಣಿ ಹೂಡುತ್ತಿದ್ದ ಆ ದಿನಗಳನ್ನು ಮರೆತೇನೆಂದರೂ ಮರೆಯಲಿ ಹ್ಯಾಂಗಾ………
ಪ್ರತೀಬಾರಿ ಅಜ್ಜಿಮನೆಗೆ ಹೋದಾಗಲೂ ಹಳೆ ಗೆಳೆಯರೆಲ್ಲಾ ಸುಮಾರು 6 ತಿಂಗಳ ವಿರಹದ ಬಳಿಕ ಮತ್ತೆ ಆಟಕ್ಕೆ ಜೊತೆಯಾಗುತ್ತಿದ್ದರು. ಹೊಸ ಗೆಳೆಯರು ಯಾವುದೇ ಪರಿಚಯ, ಫಾರ್ಮಾಲಿಟೀಸ್ ಗಳ ಅಗತ್ಯವಿಲ್ಲದೆ ಆಟಕ್ಕೆ ಬರ್ತೀಯ...ಅನ್ನೋ ಆಹ್ವಾನದ ಜೊತೆಗೋ, ಜಗಳದ ಜೊತೆಗೆ ಜೀವದ ಗೆಳೆಯರಾಗಿ ಬಿಡುತ್ತಿದ್ದರು. ಅಜ್ಜಿಯ ಪುಟಾಣಿ ಬೆಲ್ಲ,... ಅಜ್ಜನ ಶ್ಲೋಕ...ಅತ್ತೆಯ ಕೈತುತ್ತು,... ಮಾವನ ಬ್ರೆಡ್ ಬಿಸ್ಕತ್ತು,...ಹೀಗೆ... ರೆಜೆಯ ಎಲ್ಲಾ ಆಯಾಮಗಳು ಹಳೆಯ ಪುಸ್ತಕದ ಹಳದಿಗಟ್ಟಿದ ಹಾಳೆಗಳಂತೆ ಮನಸ್ಸಲ್ಲಿ ಉಳಿದು ಬಿಟ್ಟಿವೆ.

ಆದರೆ ಈ ಎಲ್ಲಕ್ಕಿಂತ ನನ್ನನ್ನು ಹೆಚ್ಚಾಗಿ ಕಾಡುತ್ತಿದ್ದದ್ದು, ಅಜ್ಜಿಯ ಕತ್ತಲೆ ಕೋಣಿಯೊಳಗಿನ ಮಂಚದ ಕೆಳಗೆ ಭದ್ರವಾಗಿದ್ದ ಹಳೆಯ ಭಾರೀ ಗಾತ್ರದ ಟ್ರಂಕು। ಅದರ ಕುರಿತು ನನಗಂತೂ ಇನ್ನಿಲ್ಲದ ಆಕರ್ಷಣೆ। ಅದರ ಕತ್ತಲೊಳಗೆ ಅಡಗಿರುವ ನಿಗೂಡ ಪ್ರಪಂಚದ ಕುರಿತು ಏನೋ ಕುತೂಹಲ. ಅಜ್ಜಿ ಟ್ರಂಕು ತೆರೆಯಲು ಕುಳಿತಾಗೆಲ್ಲಾ ಕೋಣೆಯ ಕತ್ತಲನ್ನು ಓಡಿಸಲು ಹೆಣಗುತ್ತಿದ್ದ ಝೀರೋ ಕ್ಯಾಂಡಲ್ ದೀಪದಲ್ಲೇ ಅಚ್ಚರಿಯಿಂದ ಕಣ್ಣು ಅರಳಿಸಿ ಅಜ್ಜಿ ಅಕ್ಕ ಪಕ್ಕ ಕುಳಿತಿರುತ್ತಿದ್ದೆವು, ಮೂಗಿಗೆ ಹೊಡೆಯಲಿರುವ ನುಸಿಗುಳಿಗೆಯ ವಾಸನೆಯನ್ನು ಆಸ್ವಾದಿಸಲಿಕ್ಕೇ ಎಂಬಂತೆ ಕಣ್ಣಿನೊಂದಿಗೆ ಮೂಗನ್ನೂ ಅರಳಿಸಿ ಕಾಯುತ್ತಿರುತ್ತಿದ್ದೆವು. ದೊಡ್ಡ ಖಜಾನೆಯ ಬಾಗಿಲಿನಂತೆ ಅಜ್ಜಿಯ ಮಾಂತ್ರಿಕ ಟ್ರಂಕ್ ನ ಬಾಗಿಲು ತೆರೆದುಕೊಳ್ಳುತ್ತಿತ್ತು. ಮೇಲೆ ಇರುತ್ತಿದ್ದ 18 ಮೊಳದ ಭಾರೀ ಗಾತ್ರದ ರೇಷಿಮೆ ಸೀರೆಗಳನ್ನು ಅತೀ ಜಾಗರೂಕತೆಯಿಂದ ಪಕ್ಕಕ್ಕೆ ಎತ್ತಿ ಇಡುವ ಅಜ್ಜಿ ವಿಸ್ಮಯ ಲೋಕ ತೋರಿಸುತ್ತಾರೆಂಬಂತೆ ನಾವು ಕಾಯುತ್ತಿದ್ದ ರೀತಿ ಈಗ ನೆನೆಸಿಕೊಂಡರೆ ತೀರಾ ವಿಚಿತ್ರವೆನಿಸುತ್ತದೆ. ಒಳಗೇನಿದೆ ಎಂದು ನಮ್ಮ ಕುತೂಹಲದ ಕಣ್ಣು ಅರಸುತ್ತಿರುವಾಗಲೇ ಟ್ರಂಕಿನ ಯಾವುದೋ ಮೂಲೆಯಿಂದ ಕಟ್ಟು ಹಾಕಿದ ಫೋಟೋ ಒಂದನ್ನು ನಮ್ಮಜ್ಜಿ ತೆಗೆದು ನೋಡ್ರೋ ನಿಮ್ಮಮ್ಮ ಎನ್ನುತ್ತಿದ್ದರು. ಎರಡು ಜಡೆ ಹಾಕಿಕೊಂಡು, ಉದ್ದನೇ ಲಂಗ ತೊಟ್ಟು ತನ್ನ ಕಾಲೇಜು ಗೆಳತಿಯರೊಂದಿಗೆ ಫೋಟೋದಿಂದ ಇಣುಕುವ ಅಮ್ಮ ಯಾಕೋ ತೀರಾ ಅಪರಿಚಿತ ಎನಿಸುತ್ತಿದ್ದಳು. ಫೋಟೋವನ್ನು ಕದ್ದು ಮುಚ್ಚಿ ನಾಚಿಕೆಯಿಂದಲೇ ನೋಡುತ್ತಿದ್ದೆವು. ಅಷ್ಟರೊಳಗೆ ಅನಾವರಣಗೊಂಡಿದ್ದ ಅಜ್ಜಿಯ ಟ್ರಂಕ್ ಲೋಕ ನಿಧಾನವಾಗಿ ಮುಚ್ಚಿಕೊಳ್ಳುತ್ತಿತ್ತು. ಒಟ್ಟಿನಲ್ಲಿ ರಜೆಯ ಎಲ್ಲಾ ವೈಭೋಗಗಳಿಗೆ ಟ್ರಂಕ್ ಪ್ರಹಸನ ಕಳಶದಂತಿತ್ತು.



ಬೇಸಿಗೆ ರಜೆಯಾದರೆ ಎರಡು ತಿಂಗಳು, ಅಕ್ಟೋಬರ್ ರಜೆಯಾದರೆ ಒಂದು ತಿಂಗಳು ಯಾವುದೇ ಶಿಬಿರಗಳ ಕಾಟವಿಲ್ಲದೆ ಅದು ಹೇಗೋ ಕಳೆದೇ ಹೋಗುತ್ತಿತ್ತು. ಮನೆಗೆ ಕರೆದೊಯ್ಯಲು ಬರುತ್ತಿದ್ದ ಅಪ್ಪ ಅಮ್ಮನೊಂದಿಗೆ ಪೆಚ್ಚು ಮೋರೆಯೊಂದಿಗೆ ಮುಂದಿನ ವರ್ಷದ ರಜೆಯ ಕನಸು ಹೊತ್ತೇ ಪ್ರಯಾಣ ಬೆಳೆಸುತ್ತಿದ್ದೆವು.
ಅದು ಹೇಗೋ ನಾವು ಬೆಳೆದಂತೆ ನಮ್ಮ ರಜಾದಿನಗಳ ಅಜ್ಜಿಮನೆಯ ಪಯಣ ವಿರಳವಾಗುತ್ತಾ ಬಂತು. ತಿಂಗಳ ಠಿಕಾಣಿಯಿಂದ ದಿನಗಳಿಗೆ ಇಳಿದದ್ದು ಕೊನೆಗೊಮ್ಮೆ ನಿಂತೇ ಹೋಯ್ತು. ಆದರೆ, ಅದರ ನೆನಪುಗಳು ಮಾತ್ರ ಇಂದಿಗೂ ಚೇತೋಹಾರಿ.

ಕನವರಿಸುವ ಮುನ್ನ........

ಯಾಕೆ ಬರೀಬೇಕು ಅಂದುಕೊಂಡೆ? ಪ್ರಾಯುಶ long leaveನಲ್ಲಿ ಇದ್ದೀನಿ ತುಂಬಾ time ಇರುತ್ತೆ ಅಂತಾನಾ....ಏನಾದ್ರೋ ಮಾಡಬೇಕು ಅನ್ನೋ ತುಡಿತಕ್ಕಾ.....ಅಥವಾ ಬಿಟ್ಟೇ ಹೋಗಿರೋ ಬರೆಯುವ ಹವ್ಯಾಸ ಮತ್ತೆ ರೂಡಿಸಿಕೊಳ್ಳೋಕಾ.......ಅಂತೂ blog ಮಾಡಬೇಕು ಅಂದುಕೊಂಡಿದ್ದು ನಿಜ. ಆದರೆ ಬಿಡದ ಸೋಮಾರಿತನದಿಂದಾಗಿ ಅಂದುಕೊಂಡದ್ದಕ್ಕಿಂತ ಹೆಚ್ಚು ಸಮಯ ತಗೊಂಡಿದ್ದೂ ನಿಜ। ಅಂತೂ ಈಗ ಕನವರಿಸೋಕೆ ರೆಡಿ ಆಗಿದ್ದೀನಿ. ಬಿಡದೆ ಕಾಡಿದ್ದನ್ನ...ಕಾಡುತ್ತಿದ್ದದ್ದನ್ನ ಹಂಚಿಕೊಳ್ಳೋಕೆ ಹೊರಟಿದ್ದೀನಿ. ಸ್ಪಂದಿಸುತ್ತೀರಾ????
.. ನಿಮ್ಮ ಕನಸು