Thursday, March 30, 2017

ಫೀನಿಕ್ಸ್ಇಲ್ಲದವರಿಂದಲೇ ಕಿತ್ತು ತಿನ್ನೋ ಈ ಜಗತ್ತನ್ನು ನೋಡಿದ ಮೇಲೂ ಕೂಡ ಜೀವನದಲ್ಲಿ ಒಂದು ಸರ್ತಿನಾದರೋ ಕಮ್ಯುನಿಸ್ಟ್ ಸಿದ್ಧಾಂತ ಆಕರ್ಷಿಸಲಿಲ್ಲ ಅಂದ್ರೆ ಅವನೂ ಒಬ್ಬ ಮನುಷ್ಯನಾ? ಅವನಿಗೆ ಭಾವನೆಗಳಿವೆ ಅನ್ನಬಹುದಾ?”
 
ಕಹಿ ತುಂಬಿಕೊಂಡ ದನಿಯಲ್ಲಿ ಹೇಳುತ್ತಿದ್ದ ಅವನ ತೋಳ ಮೇಲೆ ಮಲಗಿ, ಕುರುಚಲು ಗಡ್ಡದ ಅವನ ಕೆನ್ನೆಯನ್ನೇ ಸವರುತ್ತಾ ಮತ್ತಿನಲ್ಲಿದ್ದಂತೆ ಕಣ್ಣು ಮುಚ್ಚಿಕೊಂಡಿದ್ದ ಅವಳು ಕಣ್ಣುತೆರೆದಳು.ಅವನ ಮುಖವನ್ನೇ ನೋಡಿ ತುಟಿ ಕೊಂಕಿಸಿದಳು. ಮಾತನಾಡುತ್ತಲೇ ಇದ್ದವನ ಬಾಯಿಯನ್ನು ತನ್ನ ಕೈಗಳಿಂದ ಮುಚ್ಚಿ ಅವನದೇ ದ್ವನಿ ಅನುಕರಿಸುತ್ತಾ ಜೀವಮಾನದಲ್ಲಿ ಒಮ್ಮೆಯಾದರೋ, ಮುಟ್ಟಿದರೆ ಸುಡುವಂತಹ ಒಬ್ಬ ಬಿಸಿರಕ್ತದ ಕಮ್ಯುನಿಸ್ಟನನ್ನು ಪ್ರೀತಿಸಲಿಲ್ಲ ಅಂದರೆ, ಅವನ ಕೆಂಪು ಯೋಚನೆಗಳಿಗೆ ಉದ್ರೇಕಗೊಂಡು ಉರಿದುಹೋಗಲಿಲ್ಲ ಅಂದರೆ, ಅವಳೂ ಒಂದು ಹೆಣ್ಣಾ? ಅವಳಿಗೂ ಒಂದು ಹೃದಯ ಇದೆ ಅನ್ನಬಹುದಾ?” ಎಂದು ಕಿಸಕ್ಕನೆ ನಕ್ಕಳು.

ತನ್ನ ಲಹರಿಯಿಂದ ಹೊರ ಬಂದ ಅವನು ತನ್ನ ಬಾಯಿ ಮುಚ್ಚಿದ ಅವಳ ಬೆರಳುಗಳನ್ನು ಕಚ್ಚಿದ. ನೋವಿನಿಂದ ಕೈ ಎಳೆದುಕೊಂಡವಳು ಈಗ ಅವನೆದೆಯ ಕೂದಲುಗಳನ್ನು ಮೆಲುವಾಗಿ ಜಗ್ಗುತ್ತಾ, ಅವನ ಬೆವರಿನ ಘಮದೊಂದಿಗೇ, ಆ ಘಳಿಗೆಯನ್ನೂ ತನ್ನೊಳಗೆ ಹೀರಿಕೊಳ್ಳುವಂತೆ ಜೋರಾಗಿ ಉಸಿರೆಳೆದುಕೊಂಡಳು. ತೋಳಿನ ಮೇಲೆ ಮಲಗಿದ್ದವಳನ್ನು ಬಳಸಿ ಹಿಡಿದಿದ್ದ ಅವನ ಕೈಬೆರಳುಗಳು ಅಯಾಚಿತವಾಗಿ ಘಾಟಿರಸ್ತೆಯ ತಿರುವುಗಳಂತಿದ್ದ ಅವಳ ಕಿವಿಯೊಳಗೆ ಸಂಚರಿಸತೊಡಗಿತು. ಮತ್ತೆ ಇಬ್ಬರಿಗೂ ಮಾತಾಡಬೇಕೆನಿಸಲಿಲ್ಲ. ತಣ್ಣನೆ ಮೌನದ ಗುನುಗುನಿಸುವಿಕೆಯಂತಿದ್ದ ಅವರಿಬ್ಬರ ಬೆಚ್ಚನೆಯ ಉಸಿರಾಟ ಒಂದಕ್ಕೊಂದು ಪೂರಕವಾಗಿ ಲಯಬದ್ಧವಾಗಿ ಸಾಗುತ್ತಿತ್ತು. ಅದ್ಯಾವಾಗ ಮಧ್ಯಾಹ್ನದ ಮಂಪರು ನಿದ್ದೆ ಹತ್ತಿತೋ ಇಬ್ಬರಿಗೂ ಅರಿವಾಗಲಿಲ್ಲ.

********************

 “ಅದ್ಯಾಕಂಥಾ ಗಡಿಬಿಡಿ? ಇನ್ನೂ ಐದೂವರೆ....
ಮನೆಗೆ ಹೋಗಲು ತನಗೇಕೆ ಅವಸರ ಎಂಬುದನ್ನು ಅವನಿಗೆ ಹೇಳಬೇಕಿನಿಸಲಿಲ್ಲ ಅವಳಿಗೆ. ಹಾಗಂತ ಕಾರಣ ಅವನಿಗೆ ಗೊತ್ತಿಲ್ಲದ್ದೇನಲ್ಲ. ಆದರೂ ಅದನ್ನು ವಾಚ್ಯವಾಗಿಸಿ, ಮಧ್ಯಾಹ್ನದಿಂದ ಆವರಿಸಿದ್ದ ಆ ಉನ್ಮತ್ತತೆಯನ್ನು, ಧ್ಯಾನಸ್ಥತೆಯನ್ನು ಕದಡುವ ಮನಸ್ಸಾಗಲಿಲ್ಲ. ಯಾವಾಗಲೂ ಎದ್ದು ಬಟ್ಟೆ ಧರಿಸಬೇಕಾದರೆ ನಾಚಿ ಒದ್ದಾಡುತ್ತಾ ಅವನಿಗೆ ಬೇರೆಡೆ ತಿರುಗುವಂತೆ, ಕಣ್ಣು ಮುಚ್ಚುವಂತೆ ಕಾಡಿ ಬೇಡುವ, ಅವಳು ಇಂದು ಮಾತ್ರ ತನ್ನ ನಗ್ನತೆಯ ಪರಿವೇ ಇಲ್ಲದಂತೆ ದಡಬಡನೆ ಕೆಳಗೆ ಬಿದ್ದಿದ್ದ ಸೀರೆ ಎತ್ತಿಕೊಂಡಳು.  
 “ಕಣ್ಣು ಮುಚ್ಚಿಕೊಳ್ಳೋದು ಬೇಡ್ವಾ?” ಅವಳು ಬಟ್ಟೆ ಧರಿಸುವಾಗೆಲ್ಲಾ ಅರೆಬರೆ ಕಣ್ಣು ತೆರೆದು ಕಾಡುವ ಅವನು ಇಂದವಳ ಅವಸರ ಕಂಡು ಕಿಚಾಯಿಸಿದ. ಕೀಟಲೆಯ ಲಹರಿಯಲ್ಲಿಲ್ಲದ ಅವಳಿಗೆ ತನ್ನ ನಾಚಿಕೆಯ ಸಮಯಸಾಧಕತನ ಕಂಡು ಪೆಚ್ಚೆನ್ನಿಸಿತು. ಎಲ್ಲವನ್ನೂ ತೆರೆದಿಟ್ಟು ಖಾಲಿಯಾದ ಭಾವದಲ್ಲಿ, ಮತ್ತೇನೋ ಹೊಸತನ್ನು ತುಂಬಿಕೊಂಡ ಭ್ರಮೆಯಲ್ಲಿ ಪೇಲವ ನಗೆ ನಕ್ಕಳು.
ಮಂಚದ ಮೇಲೆ ಒರಗಿಯೇ ಅವಳನ್ನು ಗಮನಿಸುತ್ತಿದ್ದವನು ಲಗುಬಗೆಯಿಂದ ಹೊರಟವಳ ಕೈ ಗಟ್ಟಿಯಾಗಿ ಹಿಡಿದ. ಮತ್ಯಾವಾಗಾ?” ಎಂದ. ಆ ಕಣ್ಣ ಯಾಚನೆ, ದನಿಯ ಯಾತನೆ, ಕೈ ಹಿಡಿತದ ಬಿಗುಪು, ಎಲ್ಲಾ ಅವಳಲ್ಲೂ ಅನುರಣಿಸಿ ಫೋನ್ ಮಾಡ್ತೀನಿ ಎಂದಳು.
ಅವನು ಊರಿಗೆ ಹೊರಟಿದ್ದ. ಇನ್ನು ಒಂದು ತಿಂಗಳಂತೂ ಭೇಟಿ ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದ ಇಬ್ಬರ ಕಣ್ಣುಗಳು, ಕೆಲ ನಿಮಿಷಗಳ ಕಾಲ ಮಿಳಿತಗೊಂಡು, ಅವಳ ಕಣ್ಣಲ್ಲೊಂದು ತೆಳುಪೊರೆಯನ್ನೂ, ಇವನ ಕಣ್ಣಲ್ಲೇನೋ ಅತೃಪ್ತಿಯನ್ನು ಬಿಟ್ಟು ಬೇರೆಯಾದವು.

********************

ಲಿಫ್ಟ್ ಬಾಗಿಲು ತೆರೆದೊಡನೆ ಓಡುತ್ತಲೇ ಕಾರಿಡಾರ್ ಸವೆಸಿದವಳಿಗೆ, ಬಾಗಿಲಿಗೆ ಒರಗಿಕೊಂಡು ಸ್ಕೂಲ್ಬ್ಯಾಗ್ ಹಿಡಿದು, ಯೂನಿಫಾರ್ಮ್ನಲ್ಲೇ ಹೊರಗೆ ಕುಳಿತಿದ್ದ ಮಗಳನ್ನು ಕಂಡೊಡನೆ ಎದೆ ಧಸಕ್ಕೆಂದಿತು. ಅಯ್ಯೋಸರಳಾ ಇವತ್ತು ಕೆಲಸಕ್ಕೆ ಬಂದಿಲ್ಲ ಎಂಬ ಸಂಗತಿ ತನ್ನ ಮನಸ್ಸಿನಿಂದ ಸಂಪೂರ್ಣ ಮರೆಯಾಗಿದ್ದು ಹೇಗೆ ಎಂಬ ಆಘಾತದಿಂದ ಸಾರೀ ಪುಟ್ಟ....ಬರೋಕೆ ಚೂರು ಲೇಟ್ ಆಯ್ತು ಎಂದು ತೀವ್ರ ಅಪರಾಧಿ ಭಾವದೊಂದಿಗೆ ಹೇಳುತ್ತಲೇ ಕೀ ಹೊರತೆಗೆದಳು.
ಸರಳಾ ಆಂಟಿ ಎಲ್ಲಮ್ಮಾ?”
ಅವಳು ಇವತ್ತು ರಜಾ ಪುಟ್ಟಿ. ಎಷ್ಟು ಹೊತ್ತಿಂದ ಕಾಯ್ತಾ ಇದ್ದೀಯಾ ಕಂದಾ?” ಎಂದು ಕೇಳಿದವಳೇ ಮಗಳನ್ನು ಗಟ್ಟಿಯಾಗಿ ಹೊಟ್ಟೆಗೆ ಅಪ್ಪಿಕೊಂಡಳು.

***************
ರಾತ್ರಿ ಮಗಳನ್ನು ತಟ್ಟಿ ಮಲಗಿಸುವಾಗಲೂ ನಿಟ್ಟುಸಿರು ಒತ್ತೊತ್ತಿ ಬರುತ್ತಿತ್ತು. ತಾನು ಅವನ ತೋಳಲ್ಲಿ ಮೈ ಮರೆತು ಮಲಗಿದ್ದಾಗ ಪುಟ್ಟಿ ಇಲ್ಲಿ ಬಾಗಿಲ ಹೊರಗೆ ಕಾಯುತ್ತಿದ್ದಳೆಂಬ ನಿಜವನ್ನು ಜೀರ್ಣಿಸಿಕೊಳ್ಳಲಾಗದೆ ಸಂಜೆಯಿಂದಲೂ ಒಳಗೇ ಬೇಯತ್ತಿದ್ದಳು. ಒಂದು ವರ್ಷದ ಹಿಂದೆ ಈ ತೀವ್ರ ಬಂಡಾಯದಂತಹ ಸಂಬಂಧ ಅಂಕುರಿಸತೊಡಗಿದಾಗಲೇ ಆಗಲಿ ಅಥವಾ ಅವನ ಆ ಪುಟ್ಟ ರೂಮಿನಲ್ಲಿ ಮೊದಲ ಬಾರಿಗೆ ತಾನು ಅನಾವರಣಗೊಂಡು, ಅವನೊಳಗೆ ಸೇರಿಹೋದ ಆ ಉತ್ಕಟ ಕ್ಷಣದಲ್ಲಾಗಲೀ ಮೂಡದ ಈ ಅಪರಾಧ ಪ್ರಜ್ಞೆ ಈಗ ಮಾತ್ರ ಕಿತ್ತು ತಿನ್ನುತ್ತಿರುವ ರೀತಿಗೆ ಕಂಗಾಲಾದಳು
**************

ಯೂನಿವರ್ಸಿಟಿ ನಂತರ ಸುಮಾರು 15 ವರ್ಷಗಳ ಬಳಿಕ ಅವನನ್ನು ಒಂದು ಪೈಂಟಿಂಗ್ ಎಕ್ಸಿಬಿಷನ್ನಲ್ಲಿ ಭೇಟಿಯಾಗಿದ್ದಳು. ಹೊಸದಾಗಿ ಬಿಟ್ಟಿದ್ದ ಕುರುಚಲು ಗಡ್ಡದ ಹೊರತಾಗಿ ಅವನು ಬಹುತೇಕ ಹಾಗೇ ಇದ್ದ. ಕಾಲು ಭಾಗದಷ್ಟು ಬೆಳ್ಳಗಾಗಿದ್ದ ಅವನ ತಲೆ ಕೂದಲು ಅವನ ಆಕರ್ಷಣೆಯನ್ನು ಮತ್ತಷ್ಚು ಹೆಚ್ಚಿಸಿದಂತೆ ಕಂಡಿತ್ತವಳಿಗೆ. ಅವನೇ ಗುರುತಿಸಿ ಬಂದು ಮಾತನಾಡಿದಾಗ ಪುಳಕಗೊಂಡಿದ್ದಳು. ಆಗಲೇ ಅವಳು ಮೊತ್ತಮೊದಲ ಬಾರಿಗೆ ಒಪ್ಪಿಕೊಳ್ಳುವ ಧೈರ್ಯ ಮಾಡಿದ್ದು....ಕಾಲೇಜು ದಿನಗಳಿಂದಲೂ ತನಗೆ ಅವನ ಕುರಿತಂತೆ ಏನೋ ಆಕರ್ಷಣೆ ಇತ್ತು, ನಕ್ಸಲರ ಜೊತೆಗೆ ಅವನಿಗೆ ಸಂಪರ್ಕವಿದೆ ಎಂಬ ಗುಸುಗುಸುವಿನಿಂದ ಅವನೆಡೆಗೆ ಇದ್ದ ಸೆಳೆತ ಮತ್ತಷ್ಟು ಹೆಚ್ಚಿತ್ತು, ಆದರೆ, ಅದನ್ನು ಮುಚ್ಚಿಡುವ ಸಲುವಾಗಿಯೇ ಅವನೆಡೆಗೆ ಪ್ರಯತ್ನಪೂರ್ವಕವಾಗಿ ಏನೋ ಅಸಡ್ಡೆಯನ್ನು. ಅಸಹನೆಯನ್ನು ಬೆಳೆಸಿಕೊಳ್ಳುವ ಮತ್ತು ಅದನ್ನು ಸಾರ್ವಜನಿಕವಾಗಿ ತೋರಿಸುವ ಕಾರ್ಯ ನಡೆಸಿದ್ದೆ ಎಂಬ ಸತ್ಯವನ್ನು.

ಅಂದಿನ ಭೇಟಿಯ ನಂತರ ಅವನ ಕೆಲವು ಸಮುದಾಯದ ಕಾರ್ಯಕ್ರಮಗಳ ಭಾಗವಾದಳು. ಕಾಲೇಜು ದಿನಗಳಲ್ಲಿದ್ದಷ್ಟೇ ಉತ್ಸಾಹ ಮತ್ತು ಆಕ್ರೋಶದಲ್ಲಿ ಅವನು ಅನ್ಯಾಯ, ಅಕ್ರಮಗಳ ಬಗ್ಗೆ ಮಾತನಾಡುತ್ತಿದ್ದರೆ ಇವಳ ಒಳಗೊಂದು ಹೊಸ ಆವೇಶ. ಹೀಗೆ, ಸಣ್ಣದಾಗಿ ಮೊಳೆತ ಬಂಧ ದೊಡ್ಡ ಸೆಳೆತವಾಗಿ ಅವಳನ್ನು ಕೊಚ್ಚಿಕೊಂಡು ಹೋಗಿತ್ತು. ಅವನ ತಂಡದ ಜೊತೆ ಸೇರಿಕೊಂಡಾಗಲೇ ಇದು ಇಲ್ಲಿಗೆ ಮುಗಿಯುವ ಕಥೆಯಲ್ಲ ಎಂಬ ಅರಿವು ಅವಳಲ್ಲಿ ಇದ್ದಿರಲೇಬೇಕು...ಆ ಅರಿವು ಅವನಲ್ಲೂ ಇದ್ದಂತಿತ್ತು. ಅಂದು ಅವನ ರೂಮಿನೊಳಗೆ ಕಾಲಿಟ್ಟ ಘಳಿಗೆಯಲ್ಲೂ ಆ ಅರಿವು ಇಬ್ಬರಲ್ಲೂ ಇತ್ತು. ಹಾಗಾಗಿಯೇ ಅವರಿಬ್ಬರ ನಡುವೆ ಸ್ಪೋಟಿಸಿ ಸಿಡಿದೇ ಬಿಡುತ್ತದೆ ಎಂಬಷ್ಟರಮಟ್ಟಿಗೆ, ಅಸಹನೀಯವೆನಿಸುವಂತೆ ಬೆಳೆದು ಬಿಟ್ಟಿದ್ದ ಆ ದೈಹಿಕ ತುಡಿತ ತೀರಾ ಸಹಜವೆಂಬ ರೀತಿಯಲ್ಲಿ ಪರ್ಯಾವಸನದ ದಾರಿ ಕಂಡುಕೊಂಡಿತ್ತು. ಅವಳಿಗೆ ಈಗ ಎಷ್ಟೇ ನೆನಪಿಸಿಕೊಂಡರೂ ಅಂದು ಏನಾಯ್ತು ಎಂಬುದು ಜ್ಞಾಪಕಕ್ಕೇ ಬಾರದಷ್ಟು ಸಾಮಾನ್ಯವಾಗಿ ಎಲ್ಲಾ ನಡೆದುಬಿಟ್ಟಿತ್ತು. ಮತ್ತು ನಡೆಯುತ್ತಲೇ ಸಾಗಿತ್ತು.

*******************

ಮಗಳನ್ನು ಮಲಗಿಸಿ ತನ್ನ ಮೊಬೈಲ್ ಕೈಗೆತ್ತಿಕೊಂಡವಳಿಗೆ ಒಮ್ಮೆಲೆ ದೊಡ್ಡ ಎಂಎನ್ಸಿ ಕೆಂಪೆನಿಯಲ್ಲಿ ತನಗಿರುವ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆ, ತಾನು ಪಡೆಯವ ಸಂಬಳ, ತನ್ನ ಅಪಾರ್ಟ್ಮೆಂಟ್, ಐಷಾರಾಮಿ ಕಾರು – ಇವುಗಳೆಲ್ಲದರ ವಾಸ್ತವತೆ ಮತ್ತು ಅವುಗಳ ಮೇಲೆ ತನಗಿರುವ ಅವಲಂಬನೆ ಕಿಸ್ಸಕ್ಕನೆ ಅಣಕಿಸಿ ನಕ್ಕಂತಾಯ್ತು.
ಕ್ಯಾಪಿಟಲಿಸಂ ಸುಖವನ್ನೂ ಅನುಭವಿಸುತ್ತಾ, ಕಮ್ಯೂನಿಸಂ ಉನ್ಮಾದದಲ್ಲಿ ತೇಲುವ ತನ್ನ ಬಗ್ಗೆ ಅವಳಿಗೇ ಹೇಸಿಗೆ ಮೂಡಿಬಿಟ್ಟಿತು. ಎಲ್ಲಕ್ಕಿಂತ ಮುಖ್ಯವಾಗಿ ಹಠ ಹಿಡಿದು ಗಂಡನಿಂದ ವಿಚ್ಛೇದನ ಪಡೆಯಲು ಕಾರಣವಾದ ಸಂಗತಿ ಎಷ್ಟೇ ದೂರತಳ್ಳಿದರೂ ಒಳಹೊಕ್ಕಿರುವ ಮುಳ್ಳಿನಂತೆ ಸಂಜೆಯಿಂದ ಚುಚ್ಚುತ್ತಲೇ ಇತ್ತು. ತನ್ನ ಮಾಜಿ ಗಂಡನೊಂದಿಗೆ ಅವಳನ್ನು ಮೊದಲಬಾರಿ ನೋಡಿದಾಗ ಅಸಹ್ಯ, ನಿಕೃಷ್ಟ ಹಾಗು ಹೀನಾಯ ದೃಷ್ಟಿ ಬೀರಿಯೇ ಅವಳು ಅವಮಾನದಿಂದ ತಲೆ ತಗ್ಗಿಸುವಂತೆ ಮಾಡಿದ್ದಳು. ಈಗ ತಾನು ಅವಳ ಸ್ಥಾನದಲ್ಲಿ ನಿಲ್ಲಬೇಕಾಗಬಹುದಾದ ಸಾಧ್ಯತೆಯ ಬಗ್ಗೆ ಯೋಚಿಸಿಯೇ ಬೆವರಿದಳು. ಶನಿವಾರ ಮಾತ್ರ ಭೇಟಿಯಾಗುವ ಅಪ್ಪನಿಗೆ ಪುಟ್ಟಿ ಇಂದು ಮನೆಯ ಹೊರಗೆಯೇ ತನಗಾಗಿ ಕಾಯಬೇಕಾಗಿ ಬಂದ ಸಂಗತಿ ತಿಳಿಸಿದರೆ ಅದರ ಪರಿಣಾಮ ಏನಾಗಬಹುದೆಂಬುದನ್ನು ಊಹಿಸಿ ಬೆದರಿದಳು.          

ತಕ್ಷಣವೇ ನಿರ್ಧಾರಕ್ಕೆ ಬಂದವಳಂತೆ ಫೋನ್ ಕೈಗೆತ್ತಿಕೊಂಡು, ಅವನ ಎಲ್ಲ ಮೆಸೇಜ್ಗಳನ್ನು ಡಿಲಿಟ್ ಮಾಡಿ, ನಂಬರ್ ಬ್ಲಾಕ್ ಮಾಡಿ, ಕೊನೆಗೆ ತನ್ನ ಪೋನಿನಿಂದ ಅವನ ಹೆಸರನ್ನು ಅಳಿಸಿಹಾಕಿ, ಮನಸ್ಸಿನಿಂದಲೇ ಒರಸಿಬಿಟ್ಟಂತೆ ಸೂತಕದ ಭಾವದಲ್ಲಿ ಮಗಳನ್ನು ತಬ್ಬಿ ಮಲಗಿಬಿಟ್ಟಳು.  .            

*************

ಇನ್ನೂ ಅವಳ ಮಂಪರಲ್ಲೇ ಇದ್ದವನಿಗೆ ಹೆಂಡತಿಯ ಫೋನ್ ಬಂದಾಗ ಯಾಕೋ ರಿಸೀವ್ ಮಾಡುವ ಮನಸ್ಸಾಗಲಿಲ್ಲ. ಮತ್ತೆ ಕರೆ ಮಾಡಿದಾಗ ಬೇಸರದಿಂದಲೇ ಫೋನ್ ತೆಗೆದುಕೊಂಡವ ಮಾತನಾಡುವ ಮೂಡ್ ಇಲ್ಲದೆ, ಅವಳು ಹೇಳಿದ್ದಕ್ಕೆಲ್ಲಾ ಹೂಂಗುಟ್ಚತೊಡಗಿದ. ಈ ಬಾರಿ ಬಂದವನು ನನ್ನ ಡೆಲಿವರಿಯಾಗಿ ಎರಡು ತಿಂಗಳಾಗುವವರೆಗಾದರೋ ಇಲ್ಲೇ ಜೊತೆಯಲ್ಲಿ ಇದ್ದು ಬಿಡು ಅವಳ ಬೇಡಿಕೆಯ ದನಿ ಕೇಳಿ ಎಚ್ಚೆತ್ತು ಹೇಳಿದ
ನೋಡೋಣ..ಇಲ್ಲಿನ ಪರಿಸ್ಥಿತಿ ಹೇಗಿರುತ್ತೋ ಹೇಳೋಕೆ ಆಗಲ್ಲ
ದೇಶದ ಪರಿಸ್ಥಿತಿ ಬಗ್ಗೆ ಅಷ್ಟೊಂದು ಯೋಚಿಸೋ ನಿನಗೆ, ತಿಂಗಳು ತುಂಬಿರೋ ನಾನು ಕೆಲಸಕ್ಕೂ ಹೋಗುತ್ತಾ, ಮೂರು ವರ್ಷದ ಮಗುವನ್ನೂ ಸಂಬಾಳಿಸುತ್ತಾ ಹೇಗೆ ಒಂಟಿಯಾಗಿದ್ದೇನೆ ಅನ್ನುವ ಬಗ್ಗೆ ಮಾತ್ರ ಯಾವ ಕಾಳಜಿಯೂ ಮೂಡಲ್ಲ ಅಲ್ವಾ ಕಾಮ್ರೇಡ್?” ಅವಳ ಮಾತಿನಲ್ಲಿದ್ದ ವ್ಯಂಗ್ಯವನ್ನು ಮೀರಿದ ವಿಷಾದ ಅವನನ್ನು ತಟ್ಟಿತು.
ಮದುವೆಗೆ ಮೊದಲೇ ಇದೆಲ್ಲದರ ಬಗ್ಗೆ ಮಾತಾಡಿದ್ವಿ ಅಲ್ವಾ? ನನಗೆ ಸಿದ್ದಾಂತಗಳೇ ಮುಖ್ಯ...ಮದುವೆ ಬೇಡ... ಅಂದಾಗ ರಿಜಿಸ್ಚ್ರಾರ್ ಆಫೀಸಿಗೆ ಬಂದು ಸಹಿ ಹಾಕು ಸಾಕು....ನಿನ್ನ ಯಾವುದೇ ಕೆಲಸಕ್ಕೂ ನಾನು ಅಡ್ಡ ಬರೋಲ್ಲ, ಹೆಂಡತಿಯಾದೆ ಅಂದ ತಕ್ಷಣ ನನ್ನ ಜವಾಬ್ದಾರಿ ನಿನ್ನದಲ್ಲ ಅಂದಿದ್ದು ಯಾರು? ನಾನು ಮದುವೆಗೆ ಒಪ್ಪಿದ್ದೇ ನಿನ್ನ ಆ ಮಾತು ನಂಬಿ.” ಅವನಿಗೆ ತನ್ನ ಸಮರ್ಥನೆ ತೀರಾ ಸವಕಲೆನ್ನಿಸಿತು.
ಪ್ರೇಮದ ಉನ್ಮಾದದಲ್ಲಿದೆ ನಾನು. ನನ್ನೆಲ್ಲಾ ಹೋರಾಟ, ಸಿದ್ಧಾಂತಗಳಿಗಿಂತ ನಿನಗೆ ಹೆಂಡತಿಯಾಗುವುದೇ ತೀರಾ ಮುಖ್ಯ...ಅದರಲ್ಲೇ ನನ್ನ ಮೋಕ್ಷ ಅನ್ನಿಸಿಬಿಟ್ಟಿತ್ತು. ಈಗ ಆ ಪ್ರೇಮ ಪಕ್ವವಾಗಿದೆ. ಆದ್ರೂ ನಾನು ಅವತ್ತು ಹೇಳಿದ ಮಾತನ್ನು ಮರೆತಿಲ್ಲ ಬಿಡು. ಇವತ್ತ್ಯಾಕೋ ಬೆಳಗ್ಗೆಯಿಂದ ಒಂಥರಾ ಭಯ...ನೀನು ಪಕ್ಕ ಇರಲೇಬೇಕು ಅನ್ನಿಸ್ತು. ಅದಕ್ಕೆ ಹಂಗಂದೆ...ಅಷ್ಟೆ ಅವಳ ದನಿ ಅಳುವಿನ ಅಂಚಿನಲ್ಲಿತ್ತು.
ಅದ್ಸರಿ....ನೀನು ಯಾಕೆ ಇನ್ನೂ ಕೆಲಸಕ್ಕೆ ಹೋಗ್ತಿದೀಯಾ? ಒಂದು ಕಾಲದಲ್ಲಿ ಮಹಿಳಾ ಹಕ್ಕುಗಳಿಗಾಗಿ ಹೋರಾಡಿದ್ದು ನೀನೇನಾ? ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಿರುವವನ ಹೆಂಡತಿ ನೀನು. ಕಾರ್ಪೊರೇಟ್ ವಲಯ ಸೇರಿಕೊಂಡ ಮೇಲೆ ಎಲ್ಲಾ ಬದಲಾಯ್ತಾ? ಮೆಟರ್ನಿಟಿ ರಜೆ ತಗೋ...ಅದು ನಿನ್ನ ಹಕ್ಕು. ಇನ್ನೂ ಏನೇನೋ ಉಪದೇಶ ಮಾಡುವನಿದ್ದನೇನೋ ಅವಳು ಅಲ್ಲಿಗೆ ತಡೆದು,
ಹೆಂಡತಿ ಈ ಪರಿಸ್ಥಿತಿಯಲ್ಲಿ ಇನ್ನೂ ದುಡೀತಾ ಇದಾಳಲ್ಲ ಅಂತ ನಿಂಗೆ ಅನಿಸಿದ್ದೆ ಇವತ್ತು...ನಾ ಹೇಳಿದ ಮೇಲೆ, ಇನ್ನು ಸಂಬಳ ಕೊಡೋ ಅವರಿಗೆ ಅದೆಲ್ಲಾ ಕಾಣುತ್ತಾ? ಹೋಗ್ಲಿ...ಆ ಮಾತು ಬಿಡು.. ದುಡ್ಡು ಏನಾದ್ರೋ ಬೇಕಾ? ಅಕೌಂಟಿಗೆ ಹಾಕ್ಲಾ?” ಎಂದಳು. ಅವನಿಗೆ ಎದೆಗೆ ಗುರಿ ಇಟ್ಟು ಇರಿದಂತಾಗಿ ಬೇಡ ಎಂದವನೇ ಪೋನಿಟ್ಟ.
ಯಾಕೆ ಸಡನ್ ಆಗಿ ದುಡ್ಡು ಬೇಕಾ ಅಂತ ಕೇಳಿದಳು, ನಿಜ....ಹೊಸದೇನು ಅಲ್ಲ ಅದರಲ್ಲಿ. ಅವಳೇ ಕೇಳುತ್ತಾಳೆ ಅಥವಾ ನಾನೇ ದುಡ್ಡು ಹಾಕು ಅನ್ನುತ್ತೇನೆ. ಆದರೆ ಇವತ್ಯಾಕೋ ಅವಳ ದನಿ, ಕೇಳಿದ ಸಂದರ್ಭ ಎಲ್ಲಾ ಮತ್ತೇನನ್ನೋ ಹೇಳಿತು. ನನ್ನ ಅನ್ನ ತಿಂತಾ ಇದೀಯಾ ಅಂದಳಾ? ನಿನ್ನ ಸಿದ್ದಾಂತ ಉಳಿದಿರೋದು ನನ್ನ ರುಣದ ಭಿಕ್ಷೆ ಅಂದಳಾ?’
ಹೆಂಡತಿಗಷ್ಟೇ ಅಲ್ಲ ನಾನು ನಂಬಿದ ಸಿದ್ಧಾತಕ್ಕೂ ವಂಚಿಸುತ್ತಿದ್ದೇನೆ. ನಂದೆಲ್ಲಾ ಬರೀ ಬೂಟಾಟಿಕೆಯ ಹೋರಾಟ. ಪರಾವಲಂಬಿ ಜೀವನ ಎಂಬ ಭಾವ ಅವನಲ್ಲಿ ಮೊದಲ ಬಾರಿಗೆ ಮೂಡಿತು....ನಾಚಿಕೆಯಾಯಿತು. ಇದೆಲ್ಲಾ ಇಲ್ಲಿಗೇ ನಿಲ್ಲಬೇಕು….ಎಲ್ಲಕ್ಕಿಂತ ಮೊದಲು ಅವಳ ಜೊತೆಗಿನ ಬೆಂಕಿಯಂತಹ ಸಂಬಂಧ ಕಡಿದುಕೊಳ್ಳಬೇಕು. ಮೂಡಿದ ಗಟ್ಟಿ ನಿರ್ಧಾರದೊಂದಿಗೆ ಹೊರಬಿದ್ದ ನಿಟ್ಟುಸಿರು ಬಿಸಿಯಾಗಿತ್ತು

*************

ಬಾಗಿಲ ಹೊರಗೆ ನಿಂತಿದ್ದ ಅವಳನ್ನು ಅವಸರ ಅವಸರವಾಗಿ ಒಳಗೆಳೆದುಕೊಂಡವನೇ, ಬಾಗಿಲನ್ನು ಧಡಾರನೇ ಮುಚ್ಚಿ ಉಸಿರುಗಟ್ಟುವಂತೆ ತಬ್ಬಿ ಹಿಡಿದ. ಮೂರು ತಿಂಗಳು....!!ಅಬ್ಬಾ ನಿನ್ನ ನೋಡದೆ ಹೇಗೆ ಕಳೆದೆ ಅಂತಾನೇ ಅರ್ಥವಾಗ್ತಾಯಿಲ್ಲ!!!” ಉಸುರಿದ.
ಮೂರು ತಿಂಗಳ ಯಾತನೆಯ ಮುಂದೆ, ಅವನ ಅಪ್ಪುಗೆಯಲ್ಲಿನ ಹಿಂಡುವಂತಹ ನೋವು ನೋವೆನಿಸಲೇ ಇಲ್ಲ ಅವಳಿಗೆ. ಅಥವಾ ಆ ಕ್ಷಣದ ಆ ನೋವೇ, ದೀರ್ಘ ಯಾತನೆಯೊಂದನ್ನು ತೊಡೆದುಹಾಕಿತ್ತು. ಜ್ವರ ಬಂದಂತಿದ್ದವನನ್ನು ತಬ್ಬಿದವಳೇ ಅರ್ಥಗಳ ಬಗ್ಗೆ ಯೋಚಿಸುವ ಅನರ್ಥ ಮಾಡೋದು ಬೇಡ ಎಂದಳು.
ಅವರಿಬ್ಬರ ಬಿಸಿಯುಸಿರಿನಿಂದಾಗಿ ಆರಿಯೇ ಇರದ ಬೆಂಕಿ, ಬೂದಿ ಕೊಡವಿ ಮತ್ತೆ ಧಗ್ಗನೆ ಹೊತ್ತಿತು. ಆ ಉರಿಯಲ್ಲಿ ಮತ್ತೇನೋ ಸುಟ್ಟ ವಾಸನೆ ದಟ್ಟವಾಗಿತ್ತು...   


(ವಿಜಯಕರ್ನಾಟಕ ಯುಗಾದಿ ವಿಶೇಷಾಂಕ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ) 


                   

Saturday, November 5, 2016

ಮನಸ್ಸು, ಮೋಹ ಮತ್ತು ಮಾಯೆಯ ಜಾಲ


“ಗಂಡ ತನ್ನ ಜೊತೆ ಸಮಯ ಕಳೆಯುತ್ತಿಲ್ಲ ಅನ್ನೋದು ಅಷ್ಟೊಂದು ದೊಡ್ಡ ಸಮಸ್ಯೇನಾ?” ಅವಳು ಸಮುದ್ರವನ್ನೇ ನೋಡುತ್ತಾ ಕೇಳಿದಳು. ಈ ಪ್ರಶ್ನೆ ನನ್ನನ್ನು ಉದ್ದೇಶಿಸಿಯೇ ಕೇಳಿದ್ದಾದರೂ, ಉತ್ತರದ ನಿರೀಕ್ಷೆಯಲ್ಲಿ ಕೇಳಲಿಲ್ಲ ಎಂಬ ಅರಿವಿನಿಂದ ನಾನು ಏನೂ ಬದಲು ಹೇಳುವ ಗೋಜಿಗೆ ಹೋಗಲಿಲ್ಲ. ಮಸುಕಾಗುತ್ತಿದ್ದ ಸಂಜೆ ಬೆಳಕಲ್ಲಿ ಬಲ ಪಾರ್ಶ್ವದ ಅವಳ ಮುಖ ಸ್ಪಷ್ಟವಾಗಿ ಕಾಣದಿದ್ದರೂ, ಎದೆ ಹಿಂಡುವಂತಹ ಅವ್ಯಕ್ತ ನೋವಿನಿಂದ ಕಳೆಗುಂದಿದಂತೆ ಗೋಚರಿಸುತ್ತಿತ್ತು. ಅಥವಾ ನನಗಂತೂ ಹಾಗೆನ್ನಿಸಿತು. “ಬಹುಶ: ಹೊಟ್ಟೆ ತುಂಬಿ, ಬೇರೆ ಯಾವುದೇ ಗಂಭೀರ ಸಮಸ್ಯೆಗಳೇ ಇಲ್ಲದಾಗ ಗಂಡನ ಬಳಿ ನನಗಾಗಿ ಸಮಯ ಇಲ್ಲ ಎಂಬುದೇ ಅತ್ಯಂತ ದೊಡ್ಡ ದುರಂತದ ಸಂಗತಿ ಅನಿಸುತ್ತೇನೋ.” ನಾನು ನಿರೀಕ್ಷಿಸಿದಂತೆ ಅವಳ ಪ್ರಶ್ನೆಗೆ ಅವಳೇ ಉತ್ತರ ಕೊಟ್ಟು ನನ್ನ ಕಡೆ ನಿಧಾನವಾಗಿ ತಿರುಗಿ ನಕ್ಕಳು. ಅವಳ ಹಲ್ಲುಗಳು ಫಳಕ್ಕನೆ ಹೊಳೆದು ಮುದ್ದಾದ ಆ ಭಾವಪೂರ್ಣ ಮುಖಕ್ಕೆ ಮತ್ತಷ್ಟು ಮೆರುಗು ನೀಡಿ, ನಾನು ಅಲ್ಲಿಂದ ಕಣ್ಣು ಕೀಳಲಾರದಂತೆ ಮಾಡಿತು.
“ಹೊರಡೋಣವಾ? ಕತ್ತಲಾಯಿತು.” ನನ್ನ ದಿಟ್ಟಿಸುವ ನೇರ ನೋಟವನ್ನು ತಪ್ಪಿಸುತ್ತಾ ಅವಳು ಕೇಳಿದಾಗ ಮುಜುಗರವಾಗಿ ಅವಳಿಂದ ಕಣ್ಣು ಕಿತ್ತು ಮೇಲೆದ್ದೆ. ಅವಳೂ ನಿಧಾನವಾಗಿ ಮೇಲೆದ್ದು ತನ್ನ ಸೀರೆಯಲ್ಲಿ ಅಂಟಿದ್ದ ಮರಳನ್ನು ನವಿರಾಗಿ ಕೊಡವಿಕೊಂಡಳು. ಅವಳ ಪ್ರತಿಯೊಂದು ನಡೆ, ಭಾವಭಂಗಿಗಳೆಲ್ಲಾ ಅತ್ಯಂತ ಆಕರ್ಷಕ ಮತ್ತು ಮನೋಹರವಾಗಿ ಕಂಡಾಗ ಯಾಕೋ ಕೊಂಚ ಕಸಿವಿಸಿಯಾಯಿತು. ಜೊತೆಗೆ ತಾನು ಅವಳನ್ನು ಹೆಚ್ಚು ಗಮನಿಸುತ್ತಿದ್ದೇನೆ ಎಂಬುದು ಅವಳಿಗೆ ತಿಳಿದಿದೆ ಎಂಬ ಅರಿವಾಗಿ ನಾಚಿಕೆ ತಳಮಳ ಎರಡೂ ಉಂಟಾಯಿತು. ಮಾತನಾಡದೆ ಆಟೋ ನಿಂತಿದ್ದ ಕಡೆ ಹೆಜ್ಜೆ ಹಾಕತೊಡಗಿದೆವು. ಏನೋ, ಯಾವುದೋ ಸರಿಯಿಲ್ಲ ಎಂಬಂತೆ ನಮ್ಮಿಬ್ಬರ ನಡುವೆ ಮಲಗಿದ್ದ ಮೌನವನ್ನು ಮುರಿದು ಏನಾದರೋ ಮಾತನಾಡಬೇಕೆಂಬ ನನ್ನ ಪ್ರಯತ್ನ ಫಲಿಸಲಿಲ್ಲ. ನಾಳೆ ಒಂದೇ ದಿನ ಅಲ್ಲಿಗೆ ಮುಗಿಯಿತಲ್ಲ ಎಂಬ ನೆನಪು ಬಂದು ಒಂದು ಕಡೆ ಸಮಾಧಾನವೆನಿಸಿದರೂ, ಅದಕ್ಕಿಂತ ಹೆಚ್ಚಿನ ನೋವು ಕಾಡಿತು.
ವಿದೇಶಿ ಸಂಸ್ಥೆಯೊಂದು ಏರ್ಪಡಿಸಿದ್ದ ಈ ಸೆಮಿನಾರಿಗೆ ಬಂದು ಆಗಲೇ ನಾಲ್ಕು ದಿನವಾಗಿತ್ತು. ಸೆಮಿನಾರಿನ ಮೊದಲ ದಿನವೇ ಅವಳ ಪರಿಚಯವಾಗಿತ್ತು. ಆಕಸ್ಮಿಕವಾಗಿ ಅಕ್ಕಪಕ್ಕದಲ್ಲಿ ಕುಳಿತಿದ್ದ ನಮಗೆ ಇಬ್ಬರೂ ಕನ್ನಡದವರೇ ಎಂಬುದು ತಿಳಿದಾಗ ಪರಿಚಯ ಬೆಳೆಯಿತು. ಇನ್ಯಾರೂ ಪರಿಚಿತರಿಲ್ಲದ ಕಾರಣ ಇಬ್ಬರೂ ಜೊತೆಯಲ್ಲೇ ಇರತೊಡಗಿದೆವು. ಅವಳು ಸೆಮಿನಾರಿನ ಹೆಚ್ಚಿನ ಸಮಯವನ್ನು ಬೇರೆನೋ ಯೋಚಿಸುತ್ತಲೋ ಆಕಳಿಸುತ್ತಲೋ ಕಳೆದಾಗ ಇಷ್ಪಪಟ್ಟು ಇಲ್ಲಿಗೆ ಬಂದಿಲ್ಲ ಅನ್ನಿಸಿತು. ಆದರೆ, ನಾನು ವಾಲಂಟೀರ್ ಆಗಿರುವ ಸಂಸ್ಥೆಗೆ ಸಾಕಷ್ಟು ಮನವಿ ಮಾಡಿಕೊಂಡಾಗ ಇಲ್ಲಿಗೆ ಬರುವ ಅವಕಾಶ ಸಿಕ್ಕಿತು ಎಂದು ಅವಳು ನಂತರ ಮಾತಿನ ನಡುವೆ ಹೇಳಿದಾಗ ವಿಚಿತ್ರ ಎನಿಸಿತು. ಆದರೆ, ಏಕೆ, ಏನು ಎಂದು ಕೇಳುವ ಸಲುಗೆ ಇನ್ನೂ ಬೆಳದಿರಲಿಲ್ಲವಾಗಿ ನಾನು ಸುಮ್ಮನೆ ಹೌದಾ ಎಂದಿದ್ದೆ, ಎರಡನೇ ದಿನ ಕೊನೆಯ ಸಾಲಿನಲ್ಲಿ ಕುಳಿತುಕೊಳ್ಳೋಣ ಎಂದಳಲ್ಲದೆ, ಬೇಸರವೆನಿಸಿದಾಗಲೆಲ್ಲಾ ಎದ್ದು ಹೊರಗೆ ಹೋಗತೊಡಗಿದಳು, ಅವಳು ಮೂರನೇ ಬಾರಿ ಎದ್ದು ಹೊರಟಾಗ ನಾನು ಅವಳನ್ನು ಹಿಂಬಾಲಿಸಿದೆ. ಮುದ್ದಾಗಿ ನಕ್ಕು “ನಿದ್ದೆ ಬರ್ತಾ ಇತ್ತು” ಎಂದಳು.
“ಮತ್ಯಾಕೇ ಅಷ್ಟೊಂದು ಇಷ್ಟಪಟ್ಟು ಮನವಿ ಮಾಡಿಕೊಂಡು ಸೆಮಿನಾರಿಗೆ ಬಂದ್ರಿ?”
“ಬದಲಾವಣೆ ಬೇಕಿತ್ತು” ಅಂದಳು. ನಾನು ಹೆಚ್ಚು ಕೆದಕಲಿಲ್ಲ.
ನಾನು ಹೊಟ್ಟೆಪಾಡಿಗಾಗಿ ಎನ್ ಜಿ ಒ ನೌಕರಿ ಹಿಡಿದಿದ್ದರೆ, ಅವಳು ಸಮಯ ಕಳೆಯುವುದಕ್ಕಾಗಿ ಒಂದು ಸಂಸ್ಥೆಯಲ್ಲಿ ಸ್ವಯಂ ಸೇವಕಿಯಾಗಿ ಕೆಲಸ ಮಾಡುತ್ತಿದ್ದಳು. ದೊಡ್ಡ ಮಗನಿದ್ದ ಎಂಬ ಕಾರಣಕ್ಕೆ ವಯಸ್ಸು 40ರ ಹತ್ತಿರ ಇರಬಹುದು ಎನಿಸಿದರೂ, ದುಂಡನೆ ಮುಖ, ನೀಳ ಜಡೆ, ಸರಳವಾದ ಕಾಟನ್ ಸೀರೆಗಳಲ್ಲಿ, ಕೊಂಚ ತುಂಬಿಕೊಂಡ ಮೈಮಾಟದ ಆಕೆ ನನ್ನ ಕಣ್ಣಿಗೆ ಅಗತ್ಯಕ್ಕಿಂತ ಹೆಚ್ಚೇ ಆಕರ್ಷಕಳಾಗಿ ಕಾಣಿಸಿದ್ದಳು. ನನ್ನ ಹೆಸರು, ಊರು ಬಿಟ್ಟರೇ ಅವಳು ಮತ್ತೇನೂ ಕೇಳದ ಕಾರಣ ಅವಳ ಬಗ್ಗೆಯೂ ಹೆಚ್ಚು ಕೆದಕುವ ಧೈರ್ಯ ನನಗೆ ಬರಲಿಲ್ಲ. ಆದರೆ, ಅವಳ ಮಾತಿನಿಂದ ತಿಳಿದಂತೆ ಒಬ್ಬನೇ ಮಗ ಹತ್ತನೇ ತರಗತಿ ಓದುತ್ತಿದ್ದಾನೆ. ಯಾವುದೋ ಖಾಸಗಿ ಸಂಸ್ಥೆಯಲ್ಲಿ ಗಂಡ ಒಳ್ಳೆಯ ಸ್ಥಾನದಲ್ಲಿದ್ದಾನೆ. ಮನೆಯಲ್ಲಿ ಏನೂ ಮಾಡಲು ಕೆಲಸವಿಲ್ಲ. ಹೀಗಾಗಿ, ಸಮಯ ಸರಾಗವಾಗಿ ಸಾಗುತ್ತಿಲ್ಲ. ಅದಕ್ಕೆ ಈ ಎನ್ ಜಿ ಒ ಕೆಲಸ.
ಮತ್ತೆರಡು ದಿನಗಳನ್ನು ಬಹುತೇಕ ಸೆಮಿನಾರ್ ಹಾಲಿನ ಹೊರಗೇ ಕಳೆದಿದ್ದೆವು. ನನಗೇನೋ ಸೆಮಿನಾರಿನ ಬಗ್ಗೆ ಆಸಕ್ತಿ ಇತ್ತಾದರೂ, ಅದಕ್ಕಿಂತ ಅವಳ ಜೊತೆ ಸುಮ್ಮನೆ ಕೂರುವುದು ಅಥವಾ ಕೆಲಸಕ್ಕೆ ಬಾರದ್ದನ್ನು ಹರಟುವುದು ಹೆಚ್ಚು ಇಷ್ಚವಾಗತೊಡಗಿತು. ನನ್ನ ನೆಚ್ಚಿನ ನರೇಶ್ ಶರ್ಮಾ ಮಾತನಾಡುವಾಗಲೂ ನಾನು ಅವಳ ಜೊತೆ ಹೊರಗೆ ಕೂತಿದ್ದೆ ಎಂಬ ಅರಿವಾದಾಗ ಮಾತ್ರ ಒಮ್ಮೆ ಗಾಬರಿಯಾಗಿತ್ತು. ಬೆಳಗ್ಗೆ ತಿಂಡಿಯ ವೇಳೆ ಸಿಕ್ಕಿ ಜೊತೆಯಾದರೆ, ರಾತ್ರಿ ಊಟದ ನಂತರವೂ ಸಾಕಷ್ಟು ಸಮಯ ಒಟ್ಟಿಗೆ ಕಳೆದು ನಂತರ ನಮ್ಮ ನಮ್ಮ ರೂಮಿಗೆ ತೆರಳುತ್ತಿದ್ದೆವು. ಇಡೀ ಸೆಮಿನಾರಿನಲ್ಲಿ ಇನ್ಯಾರನ್ನೂ ಮಾತನಾಡಿಸುವ ಅಥವಾ ಪರಿಚಯಿಸಿಕೊಳ್ಳುವ ಪ್ರಯತ್ನವನ್ನೇ ಮಾಡದೆ ನಾವಿಬ್ಬರೇ ಇದ್ದೇವೇನೋ ಎಂಬಂತೆ ಉಳಿದುಬಿಟ್ಟಿದ್ದೆವು. ಕೊನೆಯ ದಿನವಾದ ಇಂದು ಸಂಜೆ ಸಮಾರೋಪ ಮುಗಿಯುತ್ತಿದ್ದಂತೆ ಕಡಲತೀರ ಅರಸಿ ಬಂದಿದ್ದೆವು. ಅಲ್ಲಿ ಕುಳಿತಿದ್ದ ಸುಮಾರು ಒಂದೂವರೆ ಗಂಟೆಗಳ ಕಾಲವೂ ಏನೂ ಮಾತನಾಡದೆ, ನನಗೂ ಮಾತನಾಡುವ ಧೈರ್ಯವಾಗದಂತೆ, ಇಡಿಯಾಗಿ ನುಂಗಿ ಬಿಡುವಂತೆ ಸಮುದ್ರವನ್ನೇ ಬಿರುಗಣ್ಣಿನಿಂದ ನೋಡುತ್ತಾ ಕುಳಿತಿದ್ದವಳು, ಕೊನೆಗೆ, ಎದ್ದು ಬರುವ ಮೊದಲು ಮೇಲಿನ ಪ್ರಶ್ನೆ ಕೇಳಿ ನನ್ನಲ್ಲಿ ಹಲವು ಸಂದೇಹ ಹುಟ್ಟು ಹಾಕಿದ್ದಳು,
ನಾಲ್ಕು ದಿನಗಳಲ್ಲಿ ಒಂದಂತೂ ನನಗೆ ಅರಿವಾಗಿತ್ತು. ಅವಳು ಸಂಸಾರದಲ್ಲಿ ಸುಖಿಯಲ್ಲ, ಏನೋ ನೋವಿದೆ. ಯಾವುದರಿಂದಲೋ ತಪ್ಪಿಸಿಕೊಳ್ಳಲು ಇಲ್ಲಿಗೆ ಬಂದಿದ್ದಾಳೆ. ನನ್ನ ಎಲ್ಲಾ ಸಂದೇಹಗಳಿಗೆ ಪುಷ್ಟಿ ನೀಡುವಂತೆ ಅವಳು ಇಡೀ ದಿನ ನನ್ನ ಜೊತೆ ಇದ್ದರೂ, ಅವಳಿಗೆ ಅವಳ ಗಂಡನ ಅಥವಾ ಮಗನ ಫೋನು ಒಂದು ಬಾರಿಯೂ ಬಂದಿರಲಿಲ್ಲ. ಏನೇನೋ ಕಾರಣಕ್ಕೆ ಮದುವೆಯಾಗದೇ ಉಳಿದ ನನಗಿಂತಲೂ ಅವಳು ತೀರಾ ಏಕಾಂಗಿ ಎನಿಸಿತ್ತು. ಅವಳ ಗಂಡ ಇವಳಿಗೇನೋ ಹಿಂಸೆ ನೀಡುತ್ತಿರಬೇಕು, ಅಥವಾ ಮತ್ತೆಲ್ಲೋ ಸಂಬಂಧ ಇಟ್ಟುಕೊಂಡಿರಬೇಕು, ಅಥವಾ ಇನ್ಯಾರನ್ನೋ ಪ್ರೀತಿಸಿ ಮತ್ಯಾರನ್ನೋ ಕೈಹಿಡಿದು ಪ್ರೇಮರಾಹಿತ್ಯ ಸಂಬಂಧದಲ್ಲಿ ಅವಳು ಸಿಕ್ಕಿಕೊಂಡಿರಬೇಕು. ಹೀಗೇ ಅವಳ ಒಂಟಿತನದ ಸುತ್ತ ನನ್ನಲ್ಲಿ ಬೆಳೆದ ಊಹಾಪೋಹಗಳು ಲೆಕ್ಕವಿಲ್ಲದಷ್ಟು. ಆದರೆ, ಇಂತದ್ದನ್ನೆಲ್ಲಾ ಸಹಿಸಿಕೊಂಡು ಅದೇ ಸಂಸಾರದಲ್ಲಿ ಒದ್ದಾಡುವ ಹೆಣ್ಣಾಗಿ ಅವಳು ಕಂಡಿರಲಿಲ್ಲ. ಮಗನ ಕಾರಣಕ್ಕೆ ಇನ್ನೂ ಆ ದಾಂಪತ್ಯ ಉಳಿಸಿಕೊಂಡಿದ್ದಾಳೆ ಎಂಬ ಅನುಕೂಲಕರ ಕಾರಣ ಕಂಡು ಬಂದರೂ, ಆ ಮಗನೂ ಒಮ್ಮೆಯೂ ಅವಳಿಗೆ ಫೋನ್ ಮಾಡಿಲ್ಲ ಎಂಬುದು ಒಗಟಾಗಿ ಕಾಡಿತ್ತು.
ಹೊಟೇಲ್ ಗೆ ತೆರಳಿ ತಟ್ಟೆ ಕೈಯಲ್ಲಿ ಹಿಡಿದು ಬಫೆ ಸಾಲಲ್ಲಿ ನಿಂತಾಗ, ಏಕಾಏಕಿ ಹಿಂದೆ ನಿಂತಿದ್ದ ನನ್ನ ಕಡೆ ತಿರುಗಿದವಳೇ “ನಾಳೆ ಒಂದು ದಿನ ಈ ಊರಲ್ಲೇ ಉಳಿದುಕೊಳ್ಳೋಣ್ವಾ?" ಎಂದಳು. ಅವಳ ಈ ದಿಡೀರ್ ಪ್ರಸ್ತಾವಕ್ಕೆ, ಮತ್ತು ಅದು ಸೃಷ್ಟಿಸಿದ ಹೊಸ ಸಾಧ್ಯತೆಗಳ ಅಗಾಧಕ್ಕೆ ನನ್ನ ಎದೆ ಒಮ್ಮೆ ಢವಗುಟ್ಟಿತು. ಏನೂ ಉತ್ತರಿಸದೆ, ಪಾತ್ರೆಯಲ್ಲಿ ಏನಿದೆ, ಏನು ಹಾಕಿಕೊಳ್ಳುತ್ತಿದ್ದೇನೆ ಎಂಬ ಕಬರೇ ಇಲ್ಲದಂತೆ ತಟ್ಟೆಯಲ್ಲಿ ಏನೋ ಒಂದಿಷ್ಟು ತುಂಬಿಕೊಂಡು ಬಂದು ಖಾಲಿ ಕುರ್ಚಿ ಹಿಡಿದು ಕುಳಿತುಕೊಳ್ಳುವ ತನಕ ನನ್ನೊಳಗಿನ ನಡುಕ ಕಡಿಮೆಯಾಗಲೇ ಇಲ್ಲ. ಅವಳು ಮಾತ್ರ ಅರಾಮವಾಗಿ ಇದೇನು ಅದೇನು ಎಂದು ವಿಚಾರಿಸುತ್ತಾ ‘ವೆಜ್ ತಾನೇ?’ ಎಂದು ಮತ್ತೊಮ್ಮೆ ದೃಢಪಡಿಸಿಕೊಳ್ಳುತ್ತಾ ನಿಧಾನವಾಗಿ ತನ್ನ ತಟ್ಟೆ ತುಂಬಿಕೊಂಡು ನಾನು ಕೂತೆಡೆಗೆ ನಡೆದು ಬಂದಳು. ನಾನು ತಲೆತಗ್ಗಿಸಿ ಊಟ ಮಾಡುವ ನಟನೆಯಲ್ಲಿ ತೊಡಗಿಕೊಳ್ಳಬೇಕು ಎಂದುಕೊಂಡರೂ ಸಫಲನಾಗದೆ, ತಲೆ ಎತ್ತಿ ಅವಳೆಡೆಗೆ ನೋಡಿದೆ. ಅವಳು ಉತ್ತರಕ್ಕೆ ನಿರೀಕ್ಷಿಸುತ್ತಿರುವಂತೆ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಳು. ನಾನು ಏನೂ ಉತ್ತರಿಸದೇ ಹೋದಾಗ “ನಿಮಗೇನಾದರೋ ಕೆಲಸ ಇದ್ದರೆ ಬೇಡ ಬಿಡಿ. ನೀವೇನೂ ನನ್ನ ಹಾಗೆ ಬೇಕಾರ್ ಕುಳಿತಿದ್ದೀರಾ?” ಎಂದು ಸಣ್ಣದಾಗಿ ನಕ್ಕವಳೇ “ನಾಲ್ಕು ದಿನ ಇದ್ದರೂ ಊರು ನೋಡೇ ಇಲ್ಲವಲ್ಲ ಅನಿಸಿತು. ಅದಕ್ಕೆ ಕೇಳಿದೆ ಅಷ್ಟೆ.” ಎಂದಳು. ನನಗೆ ಹೌದಲ್ಲ ಅವಳು ಸರಳವಾಗಿ ಕೇಳಿದ ಪ್ರಶ್ನೆಗೆ ನಾನು ಏಕೆ ವಿಪರೀತ ಅರ್ಥ ಕಲ್ಪಿಸಿದೆ ಎನಿಸಿ, ನನ್ನ ಮನದೊಳಗಿನ ಮತ್ತೇನನ್ನೋ, ಯಾವುದೋ ಬಯಕೆ, ಭಾವನೆಯನ್ನೋ ಅವಳ ಪ್ರಶ್ನೆ ಕೆದಕಿ ತೆಗೆಯಿತು ಎಂಬುದರ ಅರಿವಾಗಿ ನಾಚಿಕೆ ಎನಿಸಿ ಅದನ್ನು ಮುಚ್ಚಿಡುವ ಭರದಲ್ಲಿ “ಅದಕ್ಕೇನಂತೆ: ಇನ್ನೊಂದು ದಿನ ಇರೋಣ ಬಿಡಿ.” ಎಂದೆ ಅವಸರದಲ್ಲಿ. ಅವಳ ಕಣ್ಣುಗಳು ಮಿನುಗಿದ ರೀತಿಯಲ್ಲಿ ನನಗೇಕೋ ಇದು ಕೇವಲ ಸೈಟ್ ಸೀಯಿಂಗ್ ಪ್ರಸ್ತಾವನೆ ಅಲ್ಲ ಎನಿಸಿ ಎಂತದ್ದೋ ತಳಮಳ ಆರಂಭವಾಯಿತು.
ಊಟದ ಬಳಿಕ ಹೊಟೇಲ್ ಹೊರಗಿನ ಬೆಂಚ್ ಮೇಲೆ ಕುಳಿತೆವು. ನಾಳೆ ಬೆಳಗಿನವರೆಗೆ ಇರಲು ಅವಕಾಶವಿದ್ದರೂ, ಸೆಮಿನಾರ್ ಗೆ ಬಂದ ಬಹುತೇಕ ಮಂದಿ ಇಂದು ರಾತ್ರಿಯೇ ರೂಮ್ ಖಾಲಿ ಮಾಡಿ ಊರಿಗೆ ಹೊರಡುವ ಗಡಿಬಿಡಿಯಲ್ಲಿದ್ದರು. ನಾವು ನಾಳೆ ಇದೇ ಹೊಟೇಲ್ ನಲ್ಲಿ ನಮ್ಮ ವಾಸ್ತವ್ಯವನ್ನು ನಮ್ಮ ಖರ್ಚಿನಲ್ಲಿ ಮುಂದುವರಿಸುವ ಅವಕಾಶವಿತ್ತು ಮತ್ತು ಅದು ಅನುಕೂಲಕರವಾಗಿತ್ತಾದರೂ, ಎಲ್ಲರೂ ಹೋದ ಮೇಲೆ ನಾವಿಬ್ಬರೇ, ಅದೂ ನಾಲ್ಕೂ ದಿನವಿಡೀ ಒಟ್ಟಿಗೆ ಸುತ್ತಿದ ನಾವಿಬ್ಬರು ಈ ಹೊಟೇಲ್ ನಲ್ಲಿಯೇ ಉಳಿಯುವುದು, ಹೊಟೇಲ್ ಸಿಬ್ಬಂದಿಯ ಅನಗತ್ಯ ಕುತೂಹಲಕ್ಕೆ ಕಾರಣವಾಗಬಹುದು ಎನಿಸಿ ಯಾಕೋ ಸರಿಯೆನಿಸಲಿಲ್ಲ. “ಬೆಳಗ್ಗೆ ಯಾವುದಾದಾರೋ ಬೇರೆ ಹೋಟೇಲ್ ಗೆ ಶಿಫ್ಟ್ ಆಗೋಣ” ಎಂದೆ. “ಯಾಕೆ? ಇದೇ ಚೆನ್ನಾಗಿದೆಯಲ್ಲ. ಇನ್ನು ಒಂದು ದಿನಕ್ಕೋಸ್ಕರ ಬೇರೆ ಕಡೆ ಹೋಗೋದು ಯಾಕೆ?” ಎಂದು ಅವಳು ಖಚಿತವಾಗಿ ನುಡಿದಾಗ ಒಂದು ರೀತಿಯ ಅಚ್ಚರಿಮೂಡಿತು. ಹೊಟೇಲ್ ನವರು ಅನ್ಯಥಾ ಭಾವಿಸಿದರೆ ಎನ್ನಲು ಹೊರಟವನು, ಮನದಲ್ಲಿ ಯಾವುದೇ ಕಲ್ಮಶ ಇಲ್ಲದಾಗ ಮಾತ್ರ ಈ ರೀತಿಯ ಮುಗ್ದತೆ ಸಾಧ್ಯ ಎನಿಸಿ ಸುಮ್ಮನಾದೆ.
ನಂತರ ಮತ್ತೇನೂ ಮಾತನಾಡದೆ ಅವಳು ಹೊಟೇಲ್ ಮುಂದೆ ಕುಣಿಯುತ್ತಿದ್ದ ಬಣ್ಣದ ಕಾರಂಜಿಯನ್ನೇ ನೋಡುತ್ತಾ ಕುಳಿತಳು. ಅದರ ಬಣ್ಣಗಳು ಅವಳ ಕಣ್ಣಲ್ಲಿ ಪ್ರತಿಫಲಿಸುತ್ತಿದ್ದವು. ಹೀಗಾಗಿ, ಆ ಕಣ್ಣುಗಳಲ್ಲಿ ಯಾವ ಭಾವವಿದೆ ಎಂಬುದು ತಿಳಿಯದೆ, ಏನಾದರೋ ಮಾತನಾಡಬೇಕು ಬೇಡವೋ ಎಂಬುದೂ ಅರಿಯದೆ ಅವಳನ್ನೇ ಕಕಮಕ ನೋಡುತ್ತಾ ಕುಳಿತೆ. ಅವಳು ತನ್ನ ಎಂದಿನ ಪರಿಯಲ್ಲಿ ಏಕಾಏಕಿ ಯಾವುದೇ ಪೀಠಿಕೆ ಇಲ್ಲದೆ ಮಾತನಾಡಲಾರಂಭಿಸಿದಳು. “ಅವನನ್ನ ತುಂಬಾ ಪ್ರೀತಿಸಿ ಮದುವೆ ಆದೆ. ಇಬ್ಬರ ಮನೆಯಲ್ಲೂ ನಮ್ಮ ಪ್ರೀತಿಗೆ ವಿರೋಧ ಇತ್ತು. ಹೀಗಾಗಿ, ಮದುವೆ ಆದ ಮೇಲೆ ಕೆಲ ಸ್ನೇಹಿತರನ್ನ ಹೊರತುಪಡಿಸಿದರೆ ಅವನಿಗೆ ನಾನು, ನನಗೆ ಅವನು ಅಷ್ಟೇ ಆಗಿ ಉಳಿದು ಬಿಟ್ಟೆವು. ಮಗ ಹುಟ್ಟಿದಾಗ ಕೆಲಸ ಬಿಟ್ಟೆ. ಅವನು ತುಂಬಾ ಬುದ್ದಿವಂತ ಕೆಲಸದಲ್ಲಿ ಮೇಲೇರುತ್ತಾ, ಮನೆಯಿಂದ ದೂರವಾಗುತ್ತಾ ಹೋದ. ನಾನು ಮನೆಯಲ್ಲೇ ಉಳಿದೆ. ಮಗನಿಗೆ 5 ವರ್ಷ ಇದ್ದಾಗ ದೆಹಲಿಗೆ ಶಿಫ್ಟ್ ಆದ್ವಿ. ನನಗೆ ದೆಹಲಿಯಲ್ಲಿ ಯಾರೂ ಒಳ್ಳೇ ಸ್ನೇಹಿತರು ಸಿಗಲಿಲ್ಲ. ಅಥವಾ ನಾನೇ ಸ್ನೇಹಿತರನ್ನ ಹುಡುಕಲಿಲ್ಲ. ಅವನಿಗೂ ಅಲ್ಲಿ ಸ್ನೇಹಿತರೇನೂ ಇರಲಿಲ್ಲ. ಆದರೆ ಅವನಿಗೆ ಇದ್ಯಾವುದನ್ನೂ ಯೋಚಿಸಲೂ ಸಾಧ್ಯವಿಲ್ಲದಷ್ಟು ಕೆಲಸವಿತ್ತು. ಅವನಿಗೆ ನನ್ನ ಹೊರತಾಗಿ ಒಂದು ಹೊರ ಪ್ರಪಂಚವಿತ್ತು. ಅದು ನನ್ನ ಇರುವಿಕೆಯನ್ನು ಮರೆಸುವಷ್ಟು ದೊಡ್ಡ ಪ್ರಪಂಚವಾಗಿತ್ತು. ಆದರೆ, ನನ್ನ ಜಗತ್ತು ಮಾತ್ರ ತೀರಾ ಸಣ್ಣದಾಗಿ ಬಿಟ್ಟಿತ್ತು. ಅವನಿಗೇ ಸೀಮಿತವಾಗಿ ಉಳಿದುಬಿಟ್ಟಿತ್ತು. ಅದರೊಳಗೆ ಬಂದ ಮತ್ತೊಂದು ಪುಟ್ಟ ಜೀವವೆಂದರೆ ನನ್ನ ಮಗ ಮಾತ್ರ. ನಾನು ನನ್ನ ಮಿತಿ ದಾಟಲು ತುಂಬಾ ಪ್ರಯತ್ನಿಸಿದೆ. ಅವನಿಲ್ಲದ ಒಂದು ಪರ್ಯಾಯ ಜಗತ್ತನ್ನು ಸೃಷ್ಟಿಸಿಕೊಳ್ಳುವ ಯತ್ನ ಮಾಡಿದೆ. ಆದರೆ, ಯಾಕೋ ಆ ಪರ್ಯಾಯ ಪ್ರಪಂಚಕ್ಕೆ ಜೀವ ಬರಲೇ ಇಲ್ಲ. ಈ ಎನ್ ಜಿ ಒ ಕೆಲಸವೂ ಈ ಪ್ರಯತ್ನದ ಒಂದು ಭಾಗ ಅಷ್ಟೇ.”
ಅವಳ ಕಣ್ಣಂಚಿನಲ್ಲಿ ನೀರಿತ್ತು. ನನಗೆ ಏನು ಹೇಳಬೇಕು, ಯಾವ ರೀತಿ ಸಮಾಧಾನ ಮಾಡಬೇಕೋ ತಿಳಿಯಲಿಲ್ಲ. “ ಈಗ ಯಾರಿಗೂ ನನ್ನ ಅಗತ್ಯವಿಲ್ಲ ತನ್ನ ಇರುವಿಕೆ ಅಥವಾ ಇಲ್ಲದಿರುವಿಕೆಯಿಂದ ಯಾವುದೇ ವ್ಯತ್ಯಾಸವಾಗಲ್ಲ.” ಅವಳ ಕಣ್ಣಲ್ಲಿ ನೀರು ಧಾರಾಕಾರವಾಗಿ ಸುರಿಯಲಾರಂಭಿಸಿತು. ನಾನು ಅಯಾಚಿತವಾಗಿ ಅವಳ ಕೈ ಹಿಡಿದೆ. ಅವಳು ತನ್ನ ಕೈ ಹಿಡಿತ ಬಿಗಿಗೊಳಿಸಿದವಳೇ ಅಳು ಮುಂದುವರಿಸಿದಳು. ಸುಮಾರು ಹೊತ್ತಿನ ಮೇಲೆ ಕಣ್ಣೊರೆಸಿಕೊಂಡು ಒದ್ದೆ ನಗು ನಗುತ್ತಾ ಹೇಳಿದಳು “ಏನೂ ತಿಳ್ಕೋಬೇಡಿ. ಎಷ್ಟೋ ವರ್ಷಗಳ ಮೇಲೆ ಯಾರೋ ಒಬ್ಬರ ಹತ್ತಿರ ಮನ ಬಿಚ್ಚಿ ಮಾತಾಡಿದೆ, ಅದಕ್ಕೆ ಅಳು ಬಂತು. ಈಗಲೂ ಫೋನ್ ಮಾಡಿ ಮಾತಾಡೋ ಹಳೆ ಸ್ನೇಹಿತರಿದ್ದಾರೆ. ದೆಹಲಿಗೆ ಬಂದಾಗ ಭೇಟಿ ಮಾಡ್ತಾರೆ. ಆದರೆ, ಅವರ ಹತ್ರ ಇದೆಲ್ಲಾ ಹೇಳೋಕೆ ಇಷ್ಟ ಆಗಲ್ಲ. ಅವರ ಕಣ್ಣಲ್ಲಿ ನಾನು ತುಂಬಾ ಸುಖಿ. ಆ ಇಮೇಜ್ ಹಾಳು ಮಾಡೋ ಇಷ್ಟ ಇಲ್ಲ. ನಿಮ್ಮ ಹತ್ರ ಮಾತ್ರ ಯಾಕೋ ಹೇಳ್ಕೋಬೇಕು ಅನ್ನಿಸ್ತು. ನಮ್ಮಿಬ್ಬರ ಮಧ್ಯೆ ಇರೋ ಒಂದು ರೀತಿಯ ಅಪರಿಚಿತತೆಯಿಂದಾಗಿ ಇದೆಲ್ಲಾ ಇಷ್ಟು ಸರಾಗವಾಗಿ ಹೇಳೋದಕ್ಕೆ ಸಾದ್ಯವಾಯ್ತು. ನನ್ನ ಗಂಡನ ಹತ್ತಿರಾನೂ ನಾನು ಇಷ್ಟು ಮನಸ್ಸು ಬಿಚ್ಚಿ ಹೇಳಿಕೊಂಡು ಅತ್ತಿಲ್ಲ.” ಎಂದು ನಕ್ಕಳು. ತುಂಬಾ ಅಹಂ ಇರೋ ಹೆಣ್ಣಿನಂತೆ ಕಂಡಳು. ಮತ್ತಷ್ಟು ಇಷ್ಟವಾದಳು.
ಸಮಯ ಜಾರುತ್ತಿತ್ತು. ನನ್ನ ಕೈ ಅವಳ ಕೈಯಲ್ಲಿ ಹಾಗೇ ಇತ್ತು. ಕೈ ಹಿಡಿದುಕೊಂಡೇ ನಿಧಾನವಾಗಿ ಎದ್ದಳು. ಇಬ್ಬರೂ ರೂಮಿನ ಕಡೆ ಹೊರಟೆವು. ಕತ್ತಲಿನ ಖಾಸಗೀತನದಿಂದ, ಹೊಟೇಲ್ ಲಾಬಿಯ ಬೆಳಕಿನ ಬೆತ್ತಲಿಗೆ ಬಂದಾಗ ಕೈ ಬಿಡಿಸಿಕೊಳ್ಳುವ ಅನೈಚ್ಛಿಕ ಒತ್ತಡವನ್ನು ತಡೆ ಹಿಡಿದು ಅವಳ ಜೊತೆ ಹಾಗೇ ಮುಂದುವರಿದೆ. ಅವಳ ರೂಮು ಸಮೀಪಿಸಿದಾಗ ಮೃದುವಾಗಿ ಕೈ ಅದುಮಿ ಬಿಟ್ಟು ಗುಡ್ ನೈಟ್ ಹೇಳಿ ಒಳ ಹೋದಳು. ಇಬ್ಬರೂ ಕೈ ಹಿಡಿದು ನಡೆದ ಈ ಪ್ರಯಾಣ ಇಲ್ಲಿಗೇ ಕೊನೆಗೊಳ್ಳುತ್ತದೆಂಬ ಅರಿವಿದ್ದರೂ ಮೂಡಿದ ಬೇಸರದ ಭಾವದೊಂದಿಗೆ ನನ್ನ ರೂಮಿನೆಡೆಗೆ ಹೆಜ್ಜೆ ಹಾಕಿದೆ. ಅವಳ ಒಂಟಿತನ, ಅಳು, ಮಾತುಗಳು ರಾತ್ರಿ ಇಡೀ ಕಾಡಿದವಲ್ಲದೆ, ಇದು ಇಲ್ಲಿಗೇ ಮುಗಿಯುವ ಕಥೆಯಲ್ಲ ಎಂಬ ಭಾವ ಅಕಾರಣವಾಗಿ ಆದರೆ ಧೃಢವಾಗಿ ನನ್ನ ಮನದಲ್ಲಿ ಮೂಡಿತು. ಮನಸ್ಸು ಅರ್ಥವಾಗದ ಅಥವಾ ನಾನು ಅರ್ಥೈಸಿಕೊಳ್ಳಲು ಇಚ್ಛಿಸದ ಯಾವುದೋ ಭಾವಲಹರಿಯಲ್ಲಿ ಮುಳುಗಿತ್ತು.
ಅರೆಬರೆ ನಿದ್ದೆಯಲ್ಲೇ ರಾತ್ರಿ ಕಳೆದ ನಾನು ಬೆಳಗ್ಗೆ ಸಿದ್ದಗೊಂಡು ಅವಳ ರೂಮಿನ ಬಾಗಿಲು ತಟ್ಟಿದರೆ, ಅವಳು ಮಾತ್ರ ಚೆನ್ನಾಗಿ ನಿದ್ದೆ ಮಾಡಿ ಎದ್ದಂತೆ ಫ್ರೆಶ್ ಆಗಿ ಕಂಡಳು. ಯಾವುದೋ ಹೊರೆ ಕಳೆದಂತೆ ಕಾಣುತ್ತಿದ್ದ ಅವಳ ಸ್ವಚ್ಛ ಮುಖದಲ್ಲಿ ಮೊದಲಿದ್ದ ಮ್ಲಾನತೆ ಇಲ್ಲದಿರುವುದನ್ನು ಗುರುತಿಸಿದೆ. ಅದಕ್ಕೆ ನಾನೇ ಕಾರಣ ಎನಿಸಿ ಖುಶಿಯಾಯ್ತು. ತಿಂಡಿ ತಿನ್ನಲು ಕುಳಿತಾಗ ಅವಳು ಇವತ್ತು ಏನೇನು ನೋಡಬೇಕು ಎಂಬ ಬಗ್ಗೆ ತುಂಬು ಉತ್ಸಾಹದಿಂದ ಮಾತನಾಡುತ್ತಿದ್ದಳು.
ಅಗಲೇ, ಅಷ್ಟೂ ದಿನ ನಡೆಯದ ಒಂದು ಘಟನೆ ನಡೆಯಿತು. ಅವಳ ಪರ್ಸ್ ಒಳಗೆಲ್ಲೋ ಬೆಚ್ಚಗೆ ಕುಳಿತಿದ್ದ ಮೊಬೈಲ್ ಧಿಡೀರನೆ ಜೀವತಳೆದು ಮೈಕೊಡವಿ ಕೂಗತೊಡಗಿತು. ಮೊಬೈಲ್ ಹೊರತೆಗೆದ ಅವಳು ಅಲ್ಲಿದ್ದ ಹೆಸರು ಓದಿದರೆ, ನಾನು ಅವಳ ಮುಖ ಓದಲು ಯತ್ನಿಸಿದೆ. ‘ಈಗ ಬಂದೆ’ ಎಂಬಂತೆ ನನ್ನ ಕಡೆ ನೋಡಿ ಎದ್ದು ಹೋದಳು. ‘ಯಾರೂ ಡಿಸ್ಚರ್ಬ್ ಮಾಡಬಾರದು ಅಂತಾನೇ ಸ್ವಿಚ್ ಆಫ್ ಮಾಡಿದ್ದೆ. ನಿನಗೆ ಹೇಳಿದ್ದೆನಲ್ಲಾ..’ಎಂಬ ಮಾತುಗಳು ಅಸ್ಪಷ್ಚವಾಗಿ ಕೇಳಿಸುತ್ತಾ ನಂತರ ಏನೂ ಕೇಳದಂತಾಯಿತು. ಎದೆಯೊಳಗೆ ಆರಂಭವಾಗಿದ್ದ ಹೊಸ ಕಸಿವಿಸಿಯೊಂದಿಗೆ ದೂರದ ಟೇಬಲ್ ಮೇಲೆ ಕುಳಿತು ಮಾತನಾಡುತ್ತಿದ್ದ ಅವಳ ಮುಖವನ್ನೇ ನೋಡುತ್ತಾ ನಾನು ಕುಳಿತೇ ಇದ್ದೆ.
ಹತ್ತು ನಿಮಿಷಗಳ ನಂತರ ಅತುರವಾಗಿ ಬಂದವಳು “ಸಾರೀ, ನಾನು ಅರ್ಜೆಂಟಾಗಿ ಹೊರಡಬೇಕು, ಇನ್ನೆರಡು ಗಂಟೆ ಒಳಗೆ ದೆಹಲಿಗೆ ಫ್ಲೈಟ್ ಇದೆಯಂತೆ. ಅವರು ಆಗ್ಲೇ ಬುಕ್ ಮಾಡಿದ್ದಾರೆ” ಎಂದಳು.
“ಏನಾಯ್ತು? ಎನಿಥಿಂಗ್ ಸೀರಿಯಸ್?”
“ಅಯ್ಯೋ ಅಂತದ್ದೇನೂ ಇಲ್ಲ, ನಿನ್ನೇನೇ ಹೊರಟು ಬರ್ತೀನಿ ಅಂದಿದ್ದೆ. ಫೋನ್ ಬೇರೆ ಆಫ್ ಮಾಡಿದ್ದೆ. ಅದಕ್ಕೆ ಗಾಬರಿಯಾಗಿ ಫೋನ್ ಮಾಡಿದ್ದಾರೆ. ಈಗಲೇ ಹೊರಡು. ಇಲ್ಲ ಅಂದ್ರೆ ನಾನೇ ಹೊರಟು ಅಲ್ಲಿಗೆ ಬರ್ತೀನಿ ಅಂತಿದ್ದಾರೆ. ನಾನಿಲ್ಲದೆ ಒಂದು ನಾಲ್ಕು ದಿನಾನೂ ಸುಧಾರಿಸಕ್ಕೆ ಆಗಲ್ಲ ಅವರಿಗೆ" ಎನ್ನುತ್ತಾ ಹುಸಿಕೋಪದಿಂದ ನಕ್ಕಳು. “ಸಾರೀ ಎಗೈನ್, ತಿಂಡಿ ತಿನ್ನೋಕೂ ಟೈಮ್ ಇಲ್ಲ. ನಿಮ್ಮನ್ನು ಮೀಟ್ ಮಾಡಿದ್ದು ತುಂಬಾ ಖುಷಿ ಆಯ್ತು.” ಎಂದವಳೇ ಓಡು ನಡಿಗೆಯಲ್ಲಿ ರೂಮಿನ ಕಡೆ ನಡೆದಳು. ಕಳೆದ ನಾಲ್ಕು ದಿನ ನನ್ನ ಜೊತೆ ಇದ್ದವಳು ಇವಳೇಯೇನು ಎಂಬಂತೆ ಮಾರ್ಪಾಡಾದ ಅವಳ ಪರಿಯನ್ನು ಅರಗಿಸಿಕೊಳ್ಳಲಾಗದ ಆಘಾತದಲ್ಲಿ ನಾನಿದ್ದೆ. ಅವಳು ಮಾತ್ರ ಇದುವರೆಗಿನದೆಲ್ಲಾ ಕನಸೇನೋ ಎಂಬಂತೆ, ಅವಳ ಅಸ್ತಿತ್ವವನ್ನೇ ಪ್ರಶ್ನಿಸುವಂತೆ, ಚೂರೂ ಕುರುಹಿಲ್ಲದಂತೆ ಕರಗಿಹೋಗಿದ್ದಳು. 


 
ಕರ್ಮವೀರ ದೀಪಾವಳಿ ಕಥಾಸ್ಪರ್ಧೆಯಲ್ಲಿ(2016) ಎರಡನೇ ಬಹುಮಾನ ಪಡೆದ ಕಥೆ

Saturday, July 30, 2016

ದಸ್ತಕ್ - The knock

ಈ ಚಿತ್ರದ ಬಗ್ಗೆ ಬರೀಬೇಕು ಅಂತ ಅಂದುಕೊಂಡು ಬಹಳ ದಿನವೇ ಆಯ್ತು. ವಿಭಿನ್ನ ಕಥೆ, 1970ರ ಕಾಲಕ್ಕೆ ತೀರಾ ಕ್ರಾಂತಿಕಾರಿ ಎನ್ನಬಹುದಾದ ನಿರೂಪಣೆ, ಈಗಿನ ಕಾಲಕ್ಕೂ ಬೋಲ್ಡ್ ಎನಿಸಬಹುದಾದ ನಟನೆ, ಕಪ್ಪು ಬಿಳುಪು ಛಾಯಾಗ್ರಹಣದ ಎಲ್ಲಾ ಸೌಂದರ್ಯ ಸಾಧ್ಯತೆಗಳನ್ನು ಬಳಸಿಕೊಂಡಿರುವ ಸಿನಿಮಟೋಗ್ರಫಿ. ಮತ್ತು ಶಾಸ್ತ್ರೀಯ ರಾಗಗಳನ್ನು ಆಧರಿಸಿ ಮದನ್ ಮೋಹನ್ ನೀಡಿರುವ ಅತ್ಯುತ್ತಮ ಸಂಗೀತವನ್ನು ಹೊಂದಿದ್ದ ಒಂದು ಒಳ್ಳೆಯ ಚಿತ್ರ ದಸ್ತಕ್ – The Knock.  ಆದರೆ, ಇದರ ಬಗ್ಗೆ ಬರೆಯಲೇಬೇಕು ಅನಿಸಿದ್ದಕ್ಕೆ ಕಾರಣ ಮಾತ್ರ ಬೇರೆ. ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಬಾಚಿಕೊಂಡರೂ ಭಾರತೀಯ ಕಲಾತ್ಮಕ ಚಿತ್ರಗಳ ಸಾಲಿನಲ್ಲಿ ಇದಕ್ಕೆ ಸರಿಯಾದ ಸ್ಥಾನಮಾನ ದೊರೆತಿಲ್ಲ ಮತ್ತು ಹಲವರಿಗೆ ದಸ್ತಕ್ ಅಪರಿಚಿತವಾಗಿಯೇ ಉಳಿದುಬಿಟ್ಟಿದೆ ಎಂಬುದು.

ಖ್ಯಾತ ಉರ್ದು ಸಾಹಿತಿ ರಾಜೇಂದ್ರ ಸಿಂಗ್ ಬೇಡಿ ತಮ್ಮ ಸಣ್ಣ ರೇಡಿಯೋ ನಾಟಕ ಆಧರಿಸಿ ತಗೆದ ದಸ್ತಕ್ ಅವರ ನಿರ್ದೇಶನದ ಚೊಚ್ಚಲ ಚಿತ್ರ. ಹರಸಾಹಸ ಪಟ್ಟು ಮುಂಬೈನಲ್ಲಿ ಅಂತೂ ಒಂದು ಮನೆ ಬಾಡಿಗೆಗೆ ಪಡೆದು ಇನ್ನೇನೋ ತಮ್ಮ ದಾಂಪತ್ಯ ಜೀವನ ಆರಂಭಿಸಬೇಕು ಎಂದುಕೊಳ್ಳುವ ನವದಂಪತಿ ಹಮೀದ್ ಮತ್ತು ಸಲ್ಮಾ ಅವರಿಗೆ ರಾತ್ರಿ ಮನೆ ಬಾಗಿಲು ತಟ್ಟುವವವರ ಕಾಟ ಆರಂಭವಾಗುತ್ತದೆ. ತಮ್ಮ ಈ ಕನಸಿನ ಗೂಡಿನಲ್ಲಿ ಈ ಹಿಂದೆ ಬಾಡಿಗೆಗೆ ಇದ್ದವಳು ಒಬ್ಬಳು ನಾಚ್ ವಾಲೀ, ವೇಶ್ಯೆ ಎಂಬ ಸತ್ಯದ ಅರಿವಾಗುವ ವೇಳೆಗೆ ಯಾರದ್ದೂ ಸ್ವಂತ ಎನಿಸದ ಮುಂಬೈ ತನ್ನ ಕರಾಳತೆಯ ಮುಖವನ್ನ ತೋರಿಸಲು ಆರಂಭಿಸಿರುತ್ತದೆ. ಸಲ್ಮಾ ಳ ಮಧುರ ಕಂಠವೇ ಅವಳಿಗೆ ಮುಳುವಾಗಿ, ಆಕೆಯೂ ನಾಚ್ ವಾಲಿಯೇ ಇರಬೇಕು ಎಂಬ ಸುತ್ತಮುತ್ತಲಿನವರಲ್ಲಿ ಹುಟ್ಟುವ ಅನುಮಾನ ಮತ್ತು ನಂತರ ಆ ಅನುಮಾನವನ್ನು ನಿಜವಾಗಿಸಲೇಬೇಕೆನ್ನುವ ಅವರೆಲ್ಲರ ಆರ್ಥಿಕ, ಸಾಮಾಜಿಕ ಮತ್ತು ನೈತಿಕ ಒಳ ಉದ್ದೇಶಗಳು...ಹಮೀದ್ ಮತ್ತು ಸಲ್ಮಾರ ಕನಸನ್ನು ತಮ್ಮ ತಣ್ಣನೆಯ ಕ್ರೌರ್ಯದಿಂದ ಕೊಲ್ಲುತ್ತಾ ಬರುವ ನೆರೆಹೊರೆ...ಒಂದು ಅಮಾಯಕ ಹಾಗು ಭಾವನಾತ್ಮಕ ಮನಸ್ಸುಗಳೆರಡು ಬದಲಾಗುತ್ತಾ, ಬರಡಾಗುತ್ತಾ ಹೋಗುವ ರೀತಿ...ಇವೆಲ್ಲವನ್ನೂ ಅತ್ಯಂತ ಶಕ್ತಿಯುತವಾಗಿ ಮೆಟಾಫರ್ ಗಳ ಸಹಿತ ನಿರೂಪಿಸುವ ಬೇಡಿ ಆಗಿನ ಕಾಲದ ಆದರೆ ಈಗಲೂ ಪ್ರಸ್ತುತ ಎನಿಸುವ ಹಲವು ವಿಷಯಗಳನ್ನು ಕೇವಲ ಒಂದೇ ಮಾತುಗಳಲ್ಲೇ ಚೂರಿ ಇರಿದಷ್ಟೇ ಹರಿತವಾಗಿ ಹೇಳಿಬಿಡುತ್ತಾರೆ.

ಮನೆಗೆ ಮುಂಗಡ ಕೊಡಲು ಹೋಗುವ ಹಮೀದ್ ಹೆಸರೇನು ಎಂಬ ಪ್ರಶ್ನೆಗೆ ಎರಡು ಕ್ಷಣದ ಮೌನದ ಬಳಿಕ ತಡವರಿಸಿ ನಂದಕಿಶೋರ್ ಎನ್ನುವುದು ಅಂತಹ ದೃಶ್ಯಕ್ಕೆ ಒಂದು ಉದಾಹರಣೆ ಅಷ್ಟೇ. ಚಿತ್ರದಲ್ಲಿ ಮತ್ತೆಲ್ಲೂ ಜಾತಿ ಧರ್ಮದ ಬಗ್ಗೆ ಮಾತನಾಡದ ಬೇಡಿ ಆ ಒಂದೇ ಒಂದು ಡೈಲಾಗ್ ಮೂಲಕ  ಮುಂಬೈನಂತಹ ಕಾಸ್ಮೋಪಾಲಿಟನ್ ನಗರದ ಹಿಪೋಕ್ರಸಿಯನ್ನ ಬಟಾಬಯಲು ಮಾಡುತ್ತಾರೆ.               

ಹಗಲಿಡೀ ಮನೆಯಲ್ಲಿ ಬಂಧಿಯಾಗಿ ಉಳಿಯುವ, ಹಾಡುವ ಅನುಮತಿಯೂ ಇಲ್ಲದ  ಸಲ್ಮಾ ನಿಧಾನವಾಗಿ ಬೇಯತೊಡಗುತ್ತಾಳೆ. ರಕ್ಷಣೆ ನೀಡಬೇಕಾಗಿದ್ದ ಮನೆಯಿಂದಲೇ ತಪ್ಪಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಿ   ಮಧ್ಯರಾತ್ರಿವರೆಗೆ ಊರು ಸುತ್ತಿ ನಂತರ ಮನೆಗೆ ಮರಳತೊಡಗುತ್ತಾರೆ ಗಂಡ ಹೆಂಡತಿ. ಇದೆಲ್ಲದರ ಮಧ್ಯೆ ಸಾಮಾನ್ಯ ಪರಿಸ್ಥಿತಿಯಲ್ಲಿ ಒಳ್ಳೆಯವನಾಗಿರುವ ಮನುಷ್ಯ ಒತ್ತಡ, ಹತಾಶೆ ಮತ್ತು ಮಾನಸಿಕ ಹಿಂಸೆ ಹೆಚ್ಚಾದಾಗ ಹೇಗೆ ನಿಧಾನವಾಗಿ ತನ್ನೊಳಗೆ ಎಲ್ಲೋ ಅಡಗಿದ್ದ ರಾಕ್ಷಸೀ ಗುಣ ತೋರಿಸಲು ಆರಂಭಿಸುತ್ತಾನೆ ಮತ್ತು ಅದನ್ನು ತನಗಿಂತ ದುರ್ಬಲರ ಮೇಲೆಯೇ( ಇಲ್ಲಿ ಹಂಡತಿ) ಪ್ರದರ್ಶಿಸುತ್ತಾನೆ ಎಂಬುದಕ್ಕೆ ಹಮೀದ್ ಸಾಕ್ಷಿಯಾಗುತ್ತಾನೆ. ಅತ್ಯಂತ ಮೃದು ಸ್ವಭಾವದ, ಭಾವಜೀವಿ, ಪ್ರಾಮಾಣಿಕ ಹಮೀದ್ ನ ಒಳಗಿನ ರಾಕ್ಷಸ ಆಗಾಗ ಕಾಣಿಸಿಕೊಳ್ಳತೊಡಗುತ್ತಾನೆ. ಒಂದು ಕಡೆ ಸಲ್ಮಾ ತನ್ನ  ಚಾರಿತ್ತ್ರ್ಯದ ಬಗ್ಗೆ  ನಂಬಿಕೆ  ಕಳೆದುಕೊಳ್ಳುತ್ತಾ ಹೋದರೆ ಹಮೀದ್ ತನ್ನ ಪ್ರಾಮಾಣಿಕತೆಗೆ ಎಳ್ಳು ನೀರು ಬಿಡುತ್ತಾನೆ. 

ಸಂಸ್ಕಾರ ಚಿತ್ರದ ಮೂಲಕ, ಕನ್ನಡ ಚಲನಚಿತ್ರರಂಗ ದೇಶದ ಗಮನ ಸೆಳೆದ ವರ್ಷವೇ (1970) ದಸ್ತಕ್ ಕೂಡ ತೆರೆಕಂಡಿತು. ರಾಷ್ಚ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮೂರು ಪ್ರಶಸ್ತಿ ಬಾಚಿಕೊಂಡು ಗಮನ ಸೆಳೆಯಿತು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ನಾಯಕ ಸಂಜೀವ್ ಕುಮಾರ್, ನಾಯಕಿ ರೆಹನಾ ಸುಲ್ತಾನ್ ಮತ್ತು ಸಂಗೀತಕ್ಕಾಗಿ ಮದನ್ ಮೋಹನ್ ಪ್ರಶಸ್ತಿ ಪಡೆದರು. ತೀರಾ ತಡವಾಗಿ ಬಂತು ಎಂಬ ಕಾರಣಕ್ಕೆ ಪ್ರಶಸ್ತಿ ನಿರಾಕರಿಸಲಿದ್ದ ಮದನ್ ಮೋಹನ್ ಅವರ ಮನವೊಲಿಸಿ ಸಮಾರಂಭಕ್ಕೆ ಕರೆದೊಯ್ದರಂತೆ ಸಂಜೀವ್ ಕುಮಾರ್.


ದಸ್ತಕ್ ಆಗ ಬರುತ್ತಿದ್ದ ಕಲಾತ್ಮಕ ಚಿತ್ರಗಳ ಹಲವು ಅಲಿಖಿತ ನಿಯಮಗಳನ್ನು ತನ್ನ ಸಂಭಾಷಣೆ, ಹಾಡುಗಳಿಂದ ಮುರಿಯುತ್ತದೆ. ಮತ್ತು ಅದೇ ಚಿತ್ರದ ಶಕ್ತಿಯೂ ಅಗಿದೆ. ಮಜ್ರೂಹ್ ಸುಲ್ತಾಪುರಿ ಬರೆದಿರುವ ಉರ್ದು ಪ್ರಭಾವ ಹೆಚ್ಚಿರುವ ಕಾವ್ಯಾತ್ಮಕ ಗೀತೆಗಳು ಲತಾ ಮಂಗೇಷ್ಕರ್ ಹಾಡಿನ ಬದುಕಲ್ಲಿ ನಿಸ್ಸಂದೇಹವಾಗಿ ಒಂದು ಮೈಲುಗಲ್ಲು.

Monday, January 4, 2016

ಸಾವು ಸತ್ತ ಸಮಯ


ಈ ಮೊದಲು ಆತ್ಮಹತ್ಯೆ ಮಾಡಿಕೊಂಡ ಅನುಭವ ಇರಲಿಲ್ಲವಾದ್ದರಿಂದ, ಸಹಜವಾಗಿಯೇ ರಮೇಶ ಆತಂಕಗೊಂಡಿದ್ದ. ಹಗ್ಗಕ್ಕೆ ಕುಣಿಕೆ ಗಂಟು ಹಾಕಲು ಯತ್ನಿಸಿದಷ್ಟೂ ಕೈ ನಡುಗಿ ಜಾರಿ ಹೋಗುತ್ತಿತ್ತು. ಕಾಲಿನ ಕಂಪನ ತಡೆಯಲಾರದೆ, ಆತ್ಮಹತ್ಯೆ ಮಾಡಿಕೊಳ್ಳಲು ಬೇಕಾದ ಅತ್ಯಗತ್ಯ ಸಾಮಾಗ್ರಿಯಾಗಿ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ನೀಲ್ ಕಮಲ್ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಧಡಾರನೆ ಕುಳಿತ. ಅವನಿಗೆ ನೂರನೇ ಬಾರಿ ಅನಿಸಿತು ಆತ್ಮಹತ್ಯೆ ಮಾಡಿಕೊಳ್ಳಲೇ ಬೇಕಾ ಎಂದು. ಅವನು ಹಗ್ಗಕ್ಕೆ ಕುಣಿಕೆ ಬಿಗಿಯಲು ಯತ್ನಿಸುತ್ತಲೇ ಬದುಕಲು ಬೇಕಾದ ಕಾರಣಗಳ, ಸಮಜಾಯಿಷಿಗಳ ತಲಾಷಿಗೆ ತೊಡಗಿದ.
ಆದರೆ, ಕೊಂಚ ಹೊತ್ತಿನಲ್ಲೇ ರಮೇಶನಿಗೆ ತನ್ನ ಬಗ್ಗೆಯೇ ತೀರಾ ಹೀನಾಯ ಎನ್ನಿಸಿ ಬಿಟ್ಟಿತು. ಎಷ್ಟು ಯೋಚಿಸಿದರೂ, ಬದುಕಲು ಸಾಲಿಡ್ ಆದ ಒಂದೂ ಕಾರಣ ಸಿಗುತ್ತಿಲ್ಲ ಎಂದರೆ ಏನರ್ಥ? ತನ್ನ ಅಸ್ತಿತ್ವವನ್ನು ಕ್ಯಾರೇ ಅನ್ನದಂತೆ, ರಮೇಶ ಎಂಬೋನೊಬ್ಬ ಇದ್ದಾನೆ ಎಂಬುದರ ಅರಿವೇ ಇಲ್ಲದಂತೆ ಬದುಕುತ್ತಿರುವ ಸುತ್ತಲಿನ ಜನರಿಗೆ, ನನ್ನ ಇರುವಿಕೆಯ ಅಘಾತ ತಟ್ಟಬೇಕಾದರೆ, ನಾನು ಇಲ್ಲವಾಗುವುದೊಂದೇ ದಾರಿ ಎನಿಸಿದಾಗ, ಈ ವಿಪರ್ಯಾಸದ ಬಗ್ಗೆ ಯೋಚಿಸಿ ರಮೇಶನಿಗೆ ವಿಚಿತ್ರ ತಳಮಳವಾಯಿತು. ತನ್ನ ಬದುಕಿಗಿಂತ ಸಾವಿಗೆ, ಸಾವಿನ ನಂತರದ ಘಟನೆಗಳಿಗೆ, ಹೆಚ್ಚಿನ ಮಹತ್ವ ದೊರೆಯಲಿದೆ ಎಂಬ ಪ್ರಜ್ಞೆ ಮೂಡಿದ್ದೇ ರಮೇಶ ಬದುಕಲು ಬೇಕಾದ ಕಾರಣಗಳ ತಲಾಷಿಯನ್ನು ಕೂಡಲೇ ನಿಲ್ಲಿಸಿದ. ತನ್ನ ಹುಟ್ಟಿಗೆ ಕಾರಣ ಯಾರು ಎಂಬುದು ಯಾರಿಗೂ ತಿಳಿಯದಿದ್ದರೂ, ಸಾವಿಗೆ ಕಾರಣ ಯಾರು ಎಂಬುದು ಮಾತ್ರ ಇನ್ನು ಕೆಲ ಗಂಟೆಗಳಲ್ಲೇ ಎಲ್ಲರಿಗೂ ತಿಳಿದು ಹೋಗಲಿದೆ ಎಂಬ ಒಂದು ರೀತಿಯ ವಿಚಿತ್ರವಾದ ಸೇಡಿನ ನೋವಿನಲ್ಲಿ ರಮೇಶ ನರಳಿದ. ಕಾರಣಕರ್ತರಿಲ್ಲದ ಹುಟ್ಟಿಗಿಂತ, ಕಾರಣಕರ್ತರಿರುವ ಸಾವೇ ಹೆಚ್ಚು ಆಕರ್ಷಕವೆನಿಸಿ ಕುಣಿಕೆ ಬಿಗಿಯುವತ್ತ ಹೆಚ್ಚು ಗಮನಹರಿಸಿದ. ಅದರೊಂದಿಗೆ, ರಮೇಶನ ಹುಟ್ಟಿನೊಂದಿಗೇ ಜನ್ಮತಳೆದಂತಿದ್ದ ಆತ್ಮಹತ್ಯಾ ಯೋಜನೆಯ ಮೊದಲ ಅಂಕ ಬಿರುಸು ಪಡೆಯಿತು.

********

ರಮೇಶ ತನಗೆ ಬುದ್ದಿ ತಿಳಿದಾಗಿನಿಂದ ಅಕ್ಕಿಕೆರೆ ಮಠಕ್ಕೆ ಸೇರಿದ ಖಡಕ್ ಶಿಸ್ತಿಗೆ ಹೆಸರಾದ ಅನಾಥ ಬಾಲಕರ ಆಶ್ರಮದಲ್ಲೇ ಇದ್ದವನು. ಆದರೆ ಆಶ್ರಮದಲ್ಲಿ ಆಗಾಗ್ಗೆ ನಡೆಯುವ ಭಾಷಣಗಳಿಂದಾಗಿ ಅವನಿಗೆ ಚಿರಪರಿಚಿತವಾಗಿದ್ದ, ಅನಾಥಪ್ರಜ್ಞೆ, ಪ್ರೀತಿಯ ಕೊರತೆ, ಕೀಳರಿಮೆ ಮುಂತಾದ ಸಾಹಿತ್ಯಕ ಪದಗಳು, ಅವನನ್ನು ಎಂದೂ ನಿಜಭಾವನೆಗಳಾಗಿ ಕಾಡಿರಲಿಲ್ಲ. ಅದಕ್ಕೆ ಕಾರಣವಿತ್ತು.  ಊರಿಗೇ ಹೆಸರುವಾಸಿಯಾಗಿದ್ದ ಆ ಆಶ್ರಮದಲ್ಲಿ, ವಾರಕ್ಕೊಮ್ಮೆಯಾದರೂ ಯಾರೋ ಹುಟ್ಟುಹಬ್ಬವೆಂದೋ, ಇನ್ಯಾರೋ ಸತ್ತದಿನವೆಂದೋ ಒಂದಲ್ಲ ಒಂದು ಕಾರಣಕ್ಕೆ ಸಿಹಿ ಊಟ ಹಾಕಿಸುತ್ತಿದ್ದರು. ಚಂದದ ಹಳೆಯ ಅಥವಾ ಹೊಸ ಬಟ್ಟೆಗಳು ಆಶ್ರಮಕ್ಕೆ ದಾನವಾಗಿ ಬರುತ್ತಿದ್ದವು. ಆಶ್ರಮವೇ ನಡೆಸುತ್ತಿದ್ದ ಕನ್ನಡ ಮಾಧ್ಯಮ ಶಾಲೆಯಲ್ಲಿ ಇತರ ಅನಾಥ ಮಕ್ಕಳ ಜೊತೆ ರಮೇಶನೂ ಓದುತ್ತಿದ್ದ. ಹೀಗಾಗಿ, ಹೊರಗಿನ ಪ್ರಪಂಚದ ಅರಿವೆಯೇ ಇಲ್ಲದೆ, ಆ ಅನಾಥಾಶ್ರಮವೆಂಬ ಬಾವಿಯೊಳಗೆ, ಕಪ್ಪೆಯಂತಿದ್ದ ರಮೇಶನಿಗೆ ಅನಾಥ ಎಂಬ ಪದ ಕೂಡ, ಸ್ವಂತ ವಾಕ್ಯ ರಚಿಸಿ ಎಂಬ ಪ್ರಶ್ನೆಯಲ್ಲಿ ಬರುವ ಇತರ ಪದಗಳಷ್ಟೇ ಭಾವಿರಾಹಿತ್ಯವಾಗಿತ್ತು.  


ಹಾಗಿದ್ದೂ, ಆಶ್ರಮದ ಹೊರಗಿದ್ದ ಇತರ ಮಕ್ಕಳ ಬದುಕಿಗೂ, ರಮೇಶನ ಬದುಕಿಗೂ ಕೆಲ ವ್ಯತ್ಯಾಸಗಳು ಇದ್ದೇ ಇದ್ದವು. ಸಂಜೆ ವೇಳೆ ಅಪ್ಪ ಅಮ್ಮನ ಬದಲು ಆಶ್ರಮದ ವಾರ್ಡನ್ ಬೆತ್ತ ಹಿಡಿದು ಓದಿಸುತ್ತಿದ್ದರು, ರಜಾ ದಿನಗಳನ್ನು ಅವನು ಅದೇ ಆಶ್ರಮದಲ್ಲೇ ಕಳೆಯುತ್ತಿದ್ದ, ಪಾಕೆಟ್ ಮನಿ ಸಿಗುತ್ತಿರಲಿಲ್ಲ, ದೂರದರ್ಶನ ಮಾತ್ರ ಅವನು ನೋಡಬಹುದಾಗಿದ್ದ ಏಕಮಾತ್ರ ಛಾನಲ್ ಆಗಿತ್ತು ಮತ್ತು ಎಂದೂ ತನ್ನ ಹುಟ್ಟುಹಬ್ಬ ಆಚರಿಸಿ ಕೇಕ್ ಕಟ್ ಮಾಡಿರಲಿಲ್ಲ. ಬದಲಾಗಿ, ಹೆಸರೇ ಗೊತ್ತಿಲ್ಲದ ಮಕ್ಕಳು ತಮ್ಮ ಅಪ್ಪ ಅಮ್ಮನೊಂದಿಗೆ ಆಶ್ರಮಕ್ಕೆ ಬಂದು ಬರ್ತ್ ಡೇ  ಆಚರಿಸಿಕೊಂಡಾಗ ಇವನು ಕೇಕ್ ತಿನ್ನುತ್ತಿದ್ದ, ಆದರೆ, ಆಶ್ರಮ ಬಿಟ್ಟು ಹೊರ ಹೋಗುವ ಪ್ರಮೇಯ ಅಥವಾ ಅವಕಾಶ ಎರಡೂ ಇರಲಿಲ್ಲವಾದ್ದರಿಂದ, ಅವನಿಗೆ ಈ ವ್ಯತ್ಯಾಸಗಳ ಅರಿವಾಗಲೀ, ಆ ಅರಿವಿನಿಂದ ಉದ್ಭವಿಸಬಹುದಾದ ವ್ಯಥೆಯಾಗಲೀ ಇರಲಿಲ್ಲ. ಹೀಗಾಗಿ, ಅನಾಥ ಎಂಬ ಶಬ್ದಕ್ಕೆ ರಮೇಶ ಸಾಕಷ್ಟು ಹಳಬನಾಗಿದ್ದರೂ, ಆ ಶಬ್ದದೊಂದಿಗೆ ಅಂಟಿಕೊಂಡು ಬರುವ ತೀವ್ರತರವಾದ ಭಾವರಾಗಗಳಿಂದ ಸಂಪೂರ್ಣ ಮುಕ್ತನಾಗಿದ್ದ, ಎಸ್ಎಸ್ಎಲ್ ಸಿ, ಪಬ್ಲಿಕ್ ಪರೀಕ್ಷೆ ಬರೆಯುವವವರೆಗೂ.


ಎಸ್ಎಸ್ಎಲ್ ಸಿ ಪರೀಕ್ಷಾ ಕೇಂದ್ರ ಅಕ್ಕಿಕೆರೆ ಆಶ್ರಮದಿಂದ 3 ಕಿ ಮೀ ದೂರದಲ್ಲಿತ್ತು. ಪರೀಕ್ಷೆಯ ಮೊದಲ ದಿನ ಇನ್ನೂ ತೆರೆಯದ ಬಾಗಿಲ ಹೊರಗೆ ನಿಂತು ಸುಮ್ಮನೆ ಸುತ್ತ ಮುತ್ತ ಕಣ್ಣುಹಾಯಿಸಿದ ರಮೇಶನೊಳಗೆ, ಅರಿವಿಗೇ ಬಾರದ ಅಪರಿಚಿತ ಭಾವವೊಂದು ಅದೇ ಮೊದಲ ಬಾರಿಗೆ ಕಣ್ತೆರೆಯತೊಡಗಿತು. ಇನ್ನೇನೂ ಕೆಲ ಕ್ಷಣಗಳಲ್ಲೇ ತನ್ನೆಲ್ಲಾ ಮಹತ್ವ ಕಳೆದುಕೊಂಡು ರದ್ದಿ ಸೇರಲಿರುವ ಪುಸ್ತಕಗಳು, ತಮ್ಮೊಡೆಯರ ಬೆಚ್ಚಗಿನ ಕೈ ಸ್ಪರ್ಶದಲ್ಲಿ, ತಮ್ಮ ಜೀವನದ ಅತ್ಯಂತ ಮಹತ್ವಪೂರ್ಣವಾದ ಕೊನೆಯ ಕ್ಷಣಗಳನ್ನು ಕರಗಿಸುತ್ತಿರುವ ಹೊತ್ತಲ್ಲೇ, ನಿಧಾನವಾಗಿ ರಮೇಶನೊಳಗೆ ಪ್ರವೇಶಿಸಿ, ತಳಮಳಿಸುವಂತೆ ಮಾಡಿದ ಆ ಭಾವ, ಧಿಡೀರನೆ ಮೈ ಕೊಡವಿ ನಿಂತು ಅವನ ಬದುಕಿನ ಶೀತಲತೆಯ ದರ್ಶನ ಮಾಡಿಸಿತು.
ಆಶ್ರಮದ ಹೊರಗಿನ ಆ ಪ್ರಪಂಚದಲ್ಲಿ, ಈಗಷ್ಟೇ ರೆಕ್ಕೆ ಬಿಚ್ಚಿದ ಸುಂದರ ಚಿಟ್ಟೆಗಳಂತಹ ಹುಡುಗಿಯರಿದ್ದರು, ತಮ್ಮ ಮಕ್ಕಳನ್ನು ಕಾರು, ಸ್ಕೂಟರ್ ಗಳಲ್ಲಿ ಕರೆತಂದ ಅಪ್ಪಂದಿರಿದ್ದರು, ಕೊನೆಘಳಿಗೆಯಲ್ಲಿ ಗಬಗಬನೆ ಓದುತ್ತಿದ್ದ ಮಕ್ಕಳ ಎದುರು ತಿಂಡಿಯ ಡಬ್ಬ ಹಿಡಿದು ನಿಂತ ಅಮ್ಮಂದಿರಿದ್ದರು. ಅಪ್ಪ ಅಮ್ಮ ಇರುವ ಮಕ್ಕಳೇ ಎಲ್ಲರಿಗಿಂತ ಬೇರೆ, ಅವರೇ ಎಲ್ಲೂ ಸಲ್ಲದವರು ಎಂದುಕೊಂಡಿದ್ದ ರಮೇಶನಿಗೆ, ಈಗ ಏಕಾಏಕಿ ಅಪ್ಪ ಅಮ್ಮ ಇಲ್ಲದ ನಾವೇ ಇತರರಿಗಿಂತ ಭಿನ್ನ ಎಂಬ ಅರಿವು ಮೂಡಿತು. ಈ ಅರಿವಿನೊಂದಿಗೆ ಮೊದಲ ಬಾರಿ ಅವನಿಗೆ ಅನಾಥರು ಎಂಬ ಪದದ ನಿಜ ಭಾವಾರ್ಥ ಸ್ಫುರಿಸಿತು.

ಫಲಿತಾಂಶ ಬಂದಾಗ ನಿರೀಕ್ಷಿಸಿದಂತೆಯೇ ರಮೇಶ ಇಂಗ್ಲಿಷ್ ನಲ್ಲಿ ಫೇಲಾಗಿದ್ದ. ಹೀಗಾಗಿ, ಆಶ್ರಮ ಮತ್ತು ದಾನಿಗಳ ಖರ್ಚಲ್ಲೇ ಓದು ಮುಂದುವರಿಸುವ ಸಾಧ್ಯತೆ ಇಲ್ಲವಾಗಿತ್ತು. ಈಗ, ಆಶ್ರಮದ ನಿಯಮದಂತೆ 18 ವರ್ಷ ತುಂಬುವುದರೊಳಗೆ ರಮೇಶ ಯಾವುದಾದರೋ ಜೀವನೋಪಾಯ ಹುಡುಕಿಕೊಂಡು ಆಶ್ರಮ ಬಿಡುವುದು ಅನಿವಾರ್ಯವಾಗಿತ್ತು. ಆಶ್ರಮದ ಅದೂ ಇದೂ ಕೆಲಸ ಮಾಡಿಕೊಂಡು, ಅಂತೂ ಇಂತೂ ಉರುಹೊಡೆದು ವರ್ಷದೊಳಗೆ ಎಸ್ಸೆಲ್ಸಿ ಪಾಸಾದ ರಮೇಶನಿಗೆ ಟ್ರಸ್ಟಿಯೊಬ್ಬರ ಕೃಪೆಯಿಂದ ಆ ಊರಿನಲ್ಲೇ ಪ್ರಸಿದ್ಧವಾದ ಪ್ಯಾರಾಮೌಂಟ್ ಹೊಟೇಲ್ ನಲ್ಲಿ ರೂಂ ಬಾಯ್ ಕೆಲಸ ದೊರಕಿತು. ಅವನ ಜೀವನದ ಎರಡನೇ ಮತ್ತು ಸಧ್ಯದ ಮಟ್ಟಿಗಂತೂ ಕೊನೆಯದೇ ಎನಿಸುತ್ತಿರುವ ಅಧ್ಯಾಯ ಹೀಗೆ ಆರಂಭವಾಯಿತು.
ನಾನು ಅನಾಥ ಎಂಬ ನವಭಾವೋದಯದಿಂದ ಹಾಗು ಆಶ್ರಮದ ಏಕತಾನತೆಯಿಂದ ಬೇಸತ್ತಿದ್ದ ರಮೇಶನಿಗೆ ಉಚಿತ ಊಟ ವಸತಿ ಕೊಟ್ಟಿದ್ದ ಹೊಟೇಲಿನ ಹೊಸ ಜೀವನ ಆಕರ್ಷಕವಾಗಿಯೇ ಕಂಡಿತ್ತು. ಹೊಟೇಲಿನ ಬೇಸ್ಮೆಂಟ್ ನಲ್ಲಿ ರೂಂಬಾಯ್ ಗಳಿಗಾಗಿಯೇ ಸಣ್ಣದಾದ ಎರಡು ರೂಂಗಳಿದ್ದವು. ಒಂದು ರೂಂ ನಲ್ಲಿ ಕಳೆದ 3 ವರ್ಷಗಳಿಂದಲೂ ಜೊತೆಯಾಗಿ ಇದ್ದ ಇಬ್ಬರು ರೂಂಬಾಯ್ ಇತರರ ಗುಸುಗುಸುವಿಗೆ ಕಾರಣವಾಗುವಂತೆ ಸದಾ ಅಂಟಿಕೊಂಡೇ ಇರುತ್ತಿದ್ದರು, ಉಳಿದ ಮತ್ತೊಂದು ರೂಂ ಮಾತ್ರ ಹೊಸ ರೂಂಬಾಯ್ ಗಳ ತಾತ್ಕಾಲಿಕ ಶಿಬಿರದಂತೆ ಕೆಲಸ ಮಾಡುತ್ತಿತ್ತು. ಹೊಸದಾಗಿ ಆ ಊರಿಗೆ ಬಂದು ಕೆಲಸಕ್ಕೆ ಸೇರಿದವರು ಮೂರು, ನಾಲ್ಕು ತಿಂಗಳು ತಂಗುತಿದ್ದರು, ಅಗತ್ಯ ಬಿದ್ದರೆ ಯಾರಾದರೂ ರೂಂಬಾಯ್ ಗಳು ದಿನದ 24 ಗಂಟೆಗಳೂ ಕೈಗೆ  ಸಿಗುವಂತೆ ಇರಲಿ ಎಂಬುದೇ ಈ ವಸತಿ ಸೌಲಭ್ಯದ ಒಳ ಉದ್ದೇಶ ಎಂಬುದು ಗೊತ್ತಾದ ಮೇಲೋ, ಅಥವಾ ತಮ್ಮ ಸ್ವಾತಂತ್ರಕ್ಕಾಗಿಯೋ, ಅಥವಾ ತಮ್ಮ ಸಂಸಾರಕ್ಕಾಗಿಯೋ ಆದಷ್ಟು ಬೇಗ ಬೇರೆಡೆಗೆ ವಾಸ್ತವ್ಯ ಬದಲಿಸುತ್ತಿದ್ದರು. ಹೀಗಾಗಿ, ಆ ಮತ್ತೊಂದು ರೂಮಿನ ಏಕಮೇವ ಸದಸ್ಯನಾಗಿ ರಮೇಶ ಹೊಟೇಲ್ ಜೀವನ ಆರಂಭಿಸಿದ, ಇದುವರೆಗೆ ಆಶ್ರಮದ ಉದ್ದನೆಯ ಹಜಾರದಲ್ಲಿ ಸಾಲಾಗಿ ಮಲಗಿ, ಸಾಮೂಹಿಕ ನಲ್ಲಿ ಕೆಳಗೆ ಸ್ನಾನ ಮಾಡಿ, ಶೌಚಾಲಯ ಹೊರತುಪಡಿಸಿ ಮತ್ತೆಲ್ಲೂ ಖಾಸಗಿತನವೆಂಬುದರ ಅನುಭವವೇ ಇಲ್ಲದೆ ಬೆಳದವನಿಗೆ ಈ ಹೊಸಪರಿಯ ಜೀವನ ಹೊಸದೇನನ್ನೋ....ಬಯಕೆಯೋ ಮತ್ತೇನನ್ನೋ ತಟ್ಟಿ ಎಬ್ಬಿಸಿತು.


ಹೊಟೇಲ್ ಸೇರಿದ ನಂತರ ರಮೇಶನ ಜೀವನದಲ್ಲಿ ಇನ್ನೂ ಹಲವು ಪ್ರಮುಖ ಬದಲಾವಣೆಗಳಾದವು. ಹುಡುಗಿಯರ ಜೊತೆ ಮಾತನಾಡಿಯೇ ಗೊತ್ತಿಲ್ಲದವನು ರಿಸಪ್ಷನಿಸ್ಟ್ ಹುಡುಗಿಯರ ಜೊತೆ ಅಷ್ಟಿಷ್ಟು ಮಾತಾಡ ತೊಡಗಿದ್ದ, ಅತ್ಯಂತ ಕಷ್ಟದ ಭಾಷೆ ಎಂದುಕೊಂಡಿದ್ದ ಇಂಗ್ಲಿಷ್ ಕೊಂಚ ಮಟ್ಟಿಗೆ ಅರ್ಥವಾಗ ತೊಡಗಿತ್ತು, ಆ ಹೊಟೇಲ್ ನ ಸ್ಪೆಷಾಲಿಟಿ ಎನಿಸಿದ್ದ, ಹನಿಮೂನ್ ಸ್ವೀಟ್ ಸಜ್ಜುಗೊಳಿಸುವುದನ್ನು ಕರಗತಗೊಳಿಸಿಕೊಂಡಿದ್ದ. ಮತ್ತು ಅತ್ಯಂತ ಮುಖ್ಯವಾಗಿ ತಿಂಗಳೊಳಗೆ ರಿಸಪ್ಸನಿಸ್ಟ್ ಕೌಂಟರ್ ಎದುರಿಗೆ 24 ಗಂಟೆಯೂ ಚಾಲೂ ಅಗಿಯೇ ಇರುತ್ತಿದ್ದ ಟಿವಿಯಲ್ಲಿ ಯಾವ ಭಾಷಾಭೇದವೂ ಇಲ್ಲದಂತೆ ಬಂದ ಸಿನಿಮಾಗಳನ್ನೆಲ್ಲಾ ನೋಡಿ ಮುಗಿಸಿದ್ದ, ಅದುವರೆಗೆ ಸಪ್ಪೆಯಾದ ದೂರದರ್ಶನದ ಸುತ್ತ ಗಿರಕಿ ಹೊಡೆಯುತ್ತಿದ್ದ ಅವನ ಟೀವಿ ಪ್ರಪಂಚ, ಕೇಬಲ್ ಸಂಪರ್ಕದಿಂದಾಗಿ ಒಮ್ಮಿಂದೊಮ್ಮೆಲೇ ಅಗಾಧವಾಗಿ ವಿಸ್ತರಿಸಿತು. ಆ ಮಾಯಾಲೋಕದೊಳಗೆ ಕಕ್ಕಾಬಿಕ್ಕಿಯಾಗಿ ಪ್ರವೇಶಿಸಿದ್ದ ಅವನು ಮೊದಲು ಕೆಲ ದಿನಗಳು ಅದರಲ್ಲಿ ಕಂಡಿದ್ದೆಲ್ಲಾ, ರಿಸಪ್ಷನಿಸ್ಟ್ ಹುಡುಗಿಯರು ಹಾಕಿದ್ದನೆಲ್ಲಾ ನೋಡಿದ. ನಂತರದ ದಿನಗಳಲ್ಲಿ ತಾನೇ ಛಾನಲ್ ಬದಲಾಯಿಸುವಷ್ಟು ಪಳಗಿದ ಮೇಲೆ ರಾತ್ರಿ ಪಾಳಿಯ ರಿಸಪ್ಷನಿಸ್ಟ್ ಹುಡುಗ ನಿದ್ದೆಗೆ ಜಾರಿದ ಬಳಿಕ ಯಾರ ಹಂಗೂ ಇಲ್ಲದೆ ತನಗೆ ಬೇಕಾದ ಛಾನಲ್ ಹಾಕಿಕೊಂಡು ರಾತ್ರಿಯ ಬಹುತೇಕ ಸಮಯವನ್ನು ಕನ್ನಡ ಸಿನಿಮಾ ನೋಡುತ್ತಾ ಕಳೆಯುತ್ತಿದ್ದ. ಮತ್ತು ಮೊದಲ ರಾತ್ರಿಯ ದೃಶ್ಯಗಳನ್ನು ಇನ್ನೂ ಹೆಚ್ಚಿನ ಎಚ್ಚರಿಕೆಯಿಂದ ಗಮನಿಸುತ್ತಿದ್ದ.


ಹೊಟೇಲ್ ರೂಮಿನಲ್ಲಿ ಫಸ್ಟ್ ನೈಟ್ ಕಳೆಯುವುದು ಬೆಂಗಳೂರಿನಂತಹ ನಗರಗಳಲ್ಲಿ ಫ್ಯಾಷನ್ ಎನಿಸಿದ್ದ ಸಂದರ್ಭದಲ್ಲೇ, ಪ್ಯಾರಾಮೌಂಟ್ ಹೊಟೇಲ್ ಕೂಡ ಈ ಹೊಸ ಸೇವೆ ಆರಂಭಿಸಿತ್ತು. ಊರಿನವರಿಗೆ ಮೊದಲು ಇದೇನು ಅಸಹ್ಯ ಅನಿಸಿದರೂ, ಮಹಾನಗರಿಗಳ ಜೀವನ ನೋಡಿದ್ದ, ಮದುವೆಗೆ ಸಿದ್ಧವಾಗಿ ನಿಂತಿದ್ದ ಹಲವು ಬಿಸಿರಕ್ತದ ಯುವಕರಿಗೆ ಸಂತಸ ಕೊಟ್ಟಿತ್ತು.    ಪ್ಯಾರಾಮೌಂಟ್ ಹೊಟೇಲ್ ನ ಅತ್ಯಂತ ಹಿರಿಯ ರೂಂಬಾಯ್, ಬಾಯ್ ಅನ್ನಿಸಿಕೊಳ್ಳಲಾರದಷ್ಟು ವಯಸ್ಸಾಗಿದ್ದ ಖಾಸಿಂಭಾಯಿಗೆ ಸಜ್ಜೆ ಮಂಚ ಸಿಂಗರಿಸುವ ಜವಾಬ್ದಾರಿ ದೊರಕಿತು. ಜೀವನದಲ್ಲಿ ನಿಖಾಹ್ ಸುಖವನ್ನೇ ಕಂಡಿರದ, ಎಲ್ಲರಿಗೂ ಭಾಯಿಯಾಗಿಯೇ ಉಳಿದು ಬಿಟ್ಚಿದ್ದ ಖಾಸಿಂ, ಮೊದಲು ಹೂವಿನ ವ್ಯಾಪಾರಿಯಾಗಿದ್ದ ಎಂಬ ಒಂದೇ ಕಾರಣಕ್ಕೆ ಈ ಜವಾಬ್ದಾರಿ ಹೊತ್ತಿದ್ದ, ಮತ್ತು ನಿರೀಕ್ಷೆಗೂ ಮೀರಿ ಅದನ್ನು ನಿಭಾಯಿಸುತ್ತಿದ್ದ.


ಹನಿಮೂನ್ ಸ್ವೀಟ್ ಗೆ ಬೇಡಿಕೆ ಹೆಚ್ಚಿದ್ದರಿಂದ, ವಯಸ್ಸಾಗಿರುವ ಖಾಸಿಂಗೆ ಸಹಾಯಕನಾಗಿ ರಮೇಶನನ್ನು ಒದಗಿಸಲಾಯಿತು. ರಮೇಶ ಆ ಕಲೆಯಲ್ಲಿ ಬೇಗ ಪಳಗಿದ್ದಲ್ಲದೆ, ಟಿವಿಯಲ್ಲಿ ಕಂಡ ಹೊಸ ರೀತಿಯ ಅಲಂಕಾರಗಳನ್ನೆಲ್ಲಾ ತಾನೂ ಪ್ರಯೋಗಿಸಿ ಶಭಾಷ್ ಗಿರಿ ಗಿಟ್ಟಿಸಿಕೊಂಡಿದ್ದ. ಪರಿಣಾಮವಾಗಿ ಹೊಟೇಲಿನಲ್ಲಿದ್ದ ನಾಲ್ಕು ಹುಡುಗಿಯರು ಮೊದಲರಾತ್ರಿಯ ಸೀನ್ ಟಿವಿಯಲ್ಲಿ ಕಂಡರೆ ಸಾಕು ಹೆಚ್ಚು ಮಾತನಾಡದ ರಮೇಶನನ್ನು ಕರೆದು ನೋಡ್ರೀ ನಿಮ್ ಸೀನ್ ಬಂತು ಅಂತ ಕಿಸಿ ಕಿಸಿ ನಗುತ್ತಿದ್ದರು. ರಮೇಶ ನಾಚಿಕೊಂಡು ಬೆವರುತ್ತಾ ಟಿವಿ ನೋಡಲಾರದೇ ಹೋಗುತ್ತಿದ್ದ.
ಮೊದಲ ಬಾರಿ ಸಂಬಳ ಕೈಗೆ ಬಂದಾಗ ರಮೇಶನಿಗೆ ಅದನ್ನು ಏನು ಮಾಡುವುದೆಂದೇ ತಿಳಿಯಲಿಲ್ಲ. ಇಷ್ಟವಾದದ್ದು ತಿನ್ನೋಣವೆಂದರೆ ಅವನು ಆಶ್ರಮದಲ್ಲಿದ್ದಾಗ ಆಸೆ ಪಟ್ಟಿದ್ದ ಹೊಟೇಲ್ ತಿಂಡಿಗಳೆಲ್ಲಾ, ಪ್ಯಾರಾಮೌಂಟ್ ರೆಸ್ಟೋರೆಂಟ್ ನ  ಧಾರಾಳಿ ಭಟ್ಟನಿಂದಾಗಿ ಫ್ರೀಯಾಗೇ ಸಿಗುತ್ತಿತ್ತು. ಒಳ್ಳೆಯ ಬಟ್ಟೆ ಕೊಳ್ಳೋಣ ಎಂದರೆ, ಹೊಟೇಲಿನಲ್ಲಿ ಯೂನಿಫಾರ್ಮ್ ಹಾಕುವುದು ಅನಿವಾರ್ಯ. ಮೊಬೈಲ್ ತೆಗೆದುಕೊಳ್ಳೋಣ ಎಂದರೆ, ಅವನಿಗೆ ಫೋನ್ ಮಾಡುವ ಅಥವಾ ಅವನು ಫೋನ್ ಮಾಡಬೇಕಾದಂತಹ ಆಪ್ತರು ಯಾರೂ ಇಲ್ಲ. ಇದುವರೆಗೂ ತನ್ನದೇ ಆದ ಹಣ ಕೈಯಲ್ಲಿ ಮುಟ್ಟಿಯೇ ಇರಲಿಲ್ಲವಾದ್ದರಿಂದ, ಒಂದು ರೀತಿಯ ವಿಭ್ರಾಂತಿಯೊಂದಿಗೆ ಆ ದುಡ್ಡನ್ನು ಆಶ್ರಮದಿಂದ ತಂದ ಟ್ರಂಕಿನೊಳಗೆ ಬಚ್ಚಿಟ್ಟ.


ಬಹಳಷ್ಟು ಯೋಚಿಸಿದ ಬಳಿಕ, ಕೊನೆಗೆ ಹಣ ಖರ್ಚು ಮಾಡಲು ಅವನಿಗೆ ಸರಿಯೆಂದು ಕಂಡ ಮಾರ್ಗವೆಂದರೆ, ಟಾಕೀಸಿನಲ್ಲಿ ಸಿನಿಮಾ ನೋಡುವುದು. ಇದುವರೆಗೆ ತನ್ನ ಕೆಲಸಕ್ಕೆ ವೇಳೆಯ ಮಿತಿ ಇದೆ ಎಂದಾಗಲೀ ವಾರದ ರಜೆ ಇದೆ ಎಂದಾಗಲೀ ಯೋಚಿಸಿರದ ರಮೇಶ, ಸಿನಿಮಾಕ್ಕೆ ಹೋಗುವ ಏಕಮೇವ ಉದ್ದೇಶದಿಂದ ಧೈರ್ಯ ಮಾಡಿ ಒಂದು ದಿನ ಮ್ಯಾನೇಜರನ್ನು ಹೊರಗೆ ಹೋಗಲು ಅನುಮತಿ ಕೇಳಿದ. ಇದುವರೆಗೂ ಅವನನ್ನು ಒಬ್ಬ ಸಿಬ್ಬಂದಿಯಂತೆ ಭಾವಿಸಿಯೇ ಇರದಿದ್ದ, ಆಶ್ರಮದಿಂದ ಬಂದು ತಮ್ಮಲ್ಲಿ ಆಶ್ರಯ ಪಡೆದಿರುವ, ಯಾವಾಗ ಏನೇ ಕೆಲಸವಿದ್ದರೂ ಕೈಗೆ ಸಿಗುವ ಅನಾಥ ಎಂದೇ ಭಾವಿಸಿದ್ದ ಮ್ಯಾನೇಜರ್ ಗೆ ಆತನ ಕೋರಿಕೆ ವಿಚಿತ್ರವಾಗಿ ಕಂಡು, ಈಗ ಸಧ್ಯಕ್ಕೆ ಸಾಧ್ಯವಿಲ್ಲ, ಮುಂದಿನ ವಾರ ನೋಡೋಣ ಎಂದು ತೇಲಿಸಿದ. ಮುಂದಿನ ವಾರ ಮತ್ತೆ ರಮೇಶ ಹೊರಗೆ ಹೋಗುವ ರಾಗ ತೆಗೆದಾಗ ಸರಿ, ನಾಳೆ ಹೋಗು ಎಂದ.
ಮ್ಯಾನೇಜರ್ ಅನುಮತಿ ದೊರೆತ ಮೇಲೆ, ರಮೇಶನಿಗೆ ನಿಜವಾದ ಸಮಸ್ಯೆಯ ಅರಿವಾಯಿತು. ಆಶ್ರಮದ ಮಕ್ಕಳನ್ನು ಯಾವುದೋ ಕೆಲ ಸಿನಿಮಾಗಳಿಗೆ ಕರೆದೊಯ್ದಿದ್ದರು. ಅದು ಬಿಟ್ಟರೆ, ತಾನೇ ಸ್ವತಂ ಟಾಕೀಸಿಗೆ ಹೋದ ಅನುಭವವೇ ಇಲ್ಲ. ಈಗ ಸಿನಿಮಾಗೆ ಹೋಗಬೇಕಾದಾಗ ಯಾರ ಜೊತೆ, ಯಾವುದಕ್ಕೆ, ಮತ್ತು ಹೇಗೆ ಎಂಬ ಪ್ರಶ್ನೆಗಳು ಕಾಡತೊಡಗಿತು. ಈ ಪ್ರಶ್ನೆಗೆ ಮರುಗಳಿಗೆಯಲ್ಲೇ ಬದುಕು ಬದಲಾಗುವಂತಹ ಉತ್ತರ ದೊರೆಯಲಿದೆ ಎಂಬ ಅರಿವಿಲ್ಲದ ರಮೇಶ, ಒಬ್ಬನೇ ಹೋಗುವ ಧೈರ್ಯಮಾಡಿ ಸಿನಿಮಾ ಯಾವುದೆಂದು ನಿರ್ಧರಿಸಲು ನ್ಯೂಸ್ ಪೇರ್ ಎತ್ತಿಕೊಂಡ. ಆಗ, ಅಲ್ಲಿ ಒಬ್ಬಳೇ ಕೂತಿದ್ದ ರಿಸಫ್ಷನಿಸ್ಟ್ ಸುಮ, ಯಾವತ್ತೂ ರಮೇಶ ಪೇಪರ್ ಮುಟ್ಟಿದ್ದೇ ನೋಡಿರಲಿಲ್ಲವಾದ್ದರಿಂದ

ಏನ್ರೀ, ಇವತ್ತೇನೂ ಸ್ಪೆಷಲ್? ಪೇಪರ್ ನೋಡ್ತಾ ಇದ್ದೀರಾ!” ಎಂದಳು. ರಮೇಶ ನಾಚುತ್ತಾ ಯಾವ ಸಿನಿಮಾ ಇದೆ ಅಂತ ನೋಡ್ತಾ ಇದ್ದೀನಿ ಎಂದ.

ಓ...ಯಾರ ಜೊತೆ ಹೋಗ್ತಾ ಇದ್ದೀರ?”

ಒಬ್ಬನೇ

ಆ ಕೂಡಲೇ ರಮೇಶ ನಿರೀಕ್ಷಿಸದ ರೀತಿಯಲ್ಲಿ ಸುಮ ನನ್ನ ಕರೆಯೋಲ್ವಾ? ಬೇಕಿದ್ರೆ ಕಂಪೆನಿ ಕೊಡ್ತೀನಿ ಅಂದಳು. 

ಮೊದಲಿಗೆ ಕಕ್ಕಾಬಿಕ್ಕಿಯಾದ ರಮೇಶ ನಂತರ ಯಾವತ್ತಿನಂತೆ ತನ್ನನ್ನು ಹಾಸ್ಯ ಮಾಡುತ್ತಿರಬೇಕು ಎಂದುಕೊಂಡು ಸುಮ್ಮನೆ ನಕ್ಕ. 
 ಯಾವ ಫಿಲಂ?”ಅವಳು ಮತ್ತೆ ಕೇಳಿದಳು. 
ಇನ್ನೂ ಯೋಚನೆ ಮಾಡಿಲ್ಲ ಎನ್ನುತ್ತಾ ಕನ್ನಡ ಸಿನಿಮಾಗಳ ಮೇಲೆ ಕಣ್ಣಾಡಿಸಿದ. 
ಶಾರುಖ್ ಖಾನ್ ಹೊಸ ಫಿಲಂ ಬಂದಿದೆ. ಟಿಕೇಟ್ ಸಿಗೋದು ಕಷ್ಟ, ನೀವು ಹೇಗಾದ್ರೋ ಟಿಕೆಟ್ ತಂದ್ರೆ. ನಾನೂ ಬರ್ತೀನಿ ಅಂದಳು.

ಆಗ ರಮೇಶನಿಗೆ ಖಾತರಿಯಾಯಿತು. ಇವಳು ನಿಜಕ್ಕೂ ನನ್ನ ಜೊತೆ ಫಿಲಂ ನೋಡಲು ಸಿದ್ದವಾಗಿದ್ದಾಳೆ ಅಂತ. ಒಂದೇ ಉಸಿರಿಗೆ ಸರಿ ಎಂದಿದ್ದಲ್ಲದೆ ತನಗೆ ಅರ್ಥವಾಗದ ಹಿಂದಿ ಸಿನಿಮಾ ನೋಡಲು ಎರಡು ಗಂಟೆ ಮೊದಲೇ ಹೋಗಿ ಬ್ಲಾಕ್ ನಲ್ಲಿ ಟಿಕೆಟ್ ತಂದು ಇರುವುದರಲ್ಲೇ ಒಳ್ಳೇ ಬಟ್ಟೆ ಧರಿಸಿ ಸಿದ್ಧನಾದ. ಮೊದಲ ಬಾರಿಗೆ ಛೇ, ಸಂಬಳದ ದುಡ್ಡಲ್ಲಿ ಒಂದೆರಡು ಹೊಸ ಬಟ್ಟೆ ತಗೋಬೇಕಿತ್ತು ಅಂದುಕೊಂಡ. ಪಕ್ಕದ ಬೀದಿಯಲ್ಲಿ ಕಾದಿರುವಂತೆ ಅವನಿಗೆ ಹೇಳಿದ ಸುಮಾ 4 ಗಂಟೆಗೆ ತನ್ನ ಶಿಫ್ಟ್ ಮುಗಿಸಿ ಅವನನ್ನು ಸೇರಿಕೊಂಡಳು. ಸಿನಿಮಾ ಆರಂಭವಾಗುವುದು ಆರು ಗಂಟೆಗಾದ್ದರಿಂದ, ಈಗೇನು ಮಾಡೋದು ಎಂಬಂತೆ ಅವನನ್ನು ನೋಡಿದಳು. ರಮೇಶ ತಕ್ಷಣ ನಾನು ಸ್ವಲ್ಪ ಬಟ್ಟೆ ತಗೊಬೇಕಿತ್ತುಎಂದ. 

ನನಗೆ ಒಳ್ಳೆ ಅಂಗಡಿ ಗೊತ್ತು ಎಂದು ಕರೆದೊಯ್ದಳಲ್ಲದೆ, ಅವಳೇ ಎರಡು ಜೊತೆ ಪ್ಯಾಂಟ್ ಶರಟು ಆರಿಸಿದಳು. ಅಲ್ಲೇ ತೂಗಾಡಿಸಿದ್ದ ಚೂಡೀದಾರವನ್ನು ಮುಟ್ಟಿ ಮುಟ್ಟಿ ನೋಡಿದಳು. ತುಂಬಾ ಚೆನ್ನಾಗಿದೆ ಎಂದಳು.

ತಗೊಳ್ಳಿ ರಮೇಶ ಹೇಳಿದ.

ಈಗ ಬೇಡ ದುಡ್ಡಿಲ್ಲ

ನಾನು ಕೊಡ್ತೀನಿ ತಗೊಳ್ಳಿ

ನನಗೆ ಸಂಬಳ ಆದ ಮೇಲೆ ಕೊಡ್ತೀನಿ. ವಾಪಾಸ್ ತಗೋಬೇಕು ಎಂದು ಶರತ್ತು ವಿಧಿಸಿ ಆ ಚೂಡೀದಾರ್ ಪ್ಯಾಕ್ ಮಾಡಿಸಿದಳು.

ಐದೂವರೆ ಸುಮಾರಿಗೆ ಥಿಯೇಟರ್ ತಲುಪಿ, ಅವಳ ಆಸೆಯಂತೆ ಪಾಪಕಾರ್ನ್ ಖರೀದಿಸಿ ಒಳಗೆ ಕೂರುವ ತನಕ ರಮೇಶನಿಗೆ ನಡೆಯುತ್ತಿರುವುದೆಲ್ಲವೂ, ತಾನು ಹೊಟೇಲ್ ನಲ್ಲಿ ರಾತ್ರಿ ಒಬ್ಬನೇ ಕೂತು ನೋಡುವ ಸಿನಿಮಾದಂತೆ ಅನ್ನಿಸುತ್ತಿತ್ತು. ಆದರೆ, ತನ್ನ ಈ ಸಿನಿಮಾದೊಳಗೊಂದು, ನಿಜವಾದ ಸಿನಿಮಾ ರೀಲು ಬಿಚ್ಚಲು ಆರಂಭಿಸಿದಾಗ, ಸಿನಿಮಾ ಯಾವುದೂ ನಿಜ ಯಾವುದು ಅರಿವಾಗದೆ ಕಕ್ಕಾಬಿಕ್ಕಿಯಾದ. ನೋಟ ತೆರೆಯ ಮೇಲಿದ್ದರೂ ನೋಡಿದ್ದೇನೂ ಅರ್ಥವಾಗಲಿಲ್ಲ. ಮೊದಲಿಗೆ ಹಿಂದಿ ಸಿನಿಮಾವಾದ್ದರಿಂದ ಅರ್ಥವಾಗುತ್ತಿಲ್ಲ ಎಂದುಕೊಂಡ. ನಂತರ ಕನ್ನಡವೇ ಅಗಿದ್ದರೂ ಇವತ್ತು ಏನೂ ಅರ್ಥವಾಗುತ್ತಿರಲಿಲ್ಲ ಎಂಬ ಅರಿವು ಮೂಡಿತು. ಸಿನಿಮಾ ಮುಗಿದಾಗ ಸುಮಾ ತನ್ನ ಮನೆಯ ದಾರಿ ಹಿಡಿದರೆ, ಇವನು ಹೊಟೇಲ್ ದಾರಿ ಹಿಡಿದ. ರಮೇಶ ಅಂದು ಮೊದಲ ಬಾರಿಗೆ ಸಿನಿಮಾ ನೋಡುವ ಸಂದರ್ಭದಲ್ಲಿ ತನಗೆ ಇರುತ್ತಿದ್ದ ಉಗ್ರ ಏಕಾಗ್ರತೆ ಕಳೆದುಕೊಂಡಿದ್ದ, ಜೊತೆಗೆ, ಅಲ್ಪ ಸ್ವಲ್ಪವಾದರೂ ಬರುತ್ತಿದ್ದ ನಿದ್ದೆಯನ್ನೂ ಕಳಕೊಂಡ.


ಮರುದಿನ ಅವಳನ್ನು ಕದ್ದುಮುಚ್ಚಿ ನೋಡಿ, ಎಷ್ಟು ಸುಂದರವಾಗಿದ್ದಾಳೆ ಎಂದುಕೊಂಡ. ಯಾವುದೋ ಹಿರೋಯಿನ್ ಥರಾ ಇದ್ದಾಳೆ ಎಂದುಕೊಂಡು ತಲೆ ಕೆರೆದು ಯೋಚಿಸಿದ. ಟಿವಿಯಲ್ಲಿ ಪ್ರೀತಿ ಪ್ರೇಮದ ದೃಶ್ಯಗಳನ್ನು ನೋಡಿ ನರಳಿದ. ಮತ್ತಷ್ಟು ನಿದ್ದೆ ಬಿಟ್ಟ. ಅವಳು ಮಾತ್ರ ಏನೂ ನಡೆದೇ ಇಲ್ಲವೆಂಬಂತೆ ಮಾಮೂಲಾಗಿಯೇ ಉಳಿದಾಗ, ಈ ಗುಟ್ಟಾದ ಹೊಸ ಬಾಂದವ್ಯ ಒಂದು ಸಿನಿಮಾಗೆ ಮುಗಿದುಹೋಯಿತೇನೋ ಎಂದು ಅವನು ನಿಟ್ಟುಸಿರು ಬಿಡುತ್ತಿರುವಾಗಲೇ, ಅವಳೇ ಮತ್ತೆ ಸಿನಿಮಾಗೆ ಕರೆದಳು. ಇವ ಮತ್ತೆ ಬ್ಲಾಕ್ ನಲ್ಲಿ ಟಿಕೆಟ್ ತಂದ, ಅವಳ ಜೊತೆ ಕೊಂಡ ಹೊಸ ಬಟ್ಟೆ ಧರಿಸಿದ, ಯಥಾಪ್ರಕಾರ ಪಕ್ಕದ ಬೀದಿಯಲ್ಲಿ ಕಾದ, ಅರ್ಥವಾಗದಂತೆ ಸಿನಿಮಾ ನೋಡಿ ಬಂದ.


ಅವಳು ತೀರಾ ಸಾಧಾರಣ ಎಂಬಂತೆ ಚೂಡೀದಾರಿನ ಹಣವನ್ನು ಹಿಂದಿರುಗಿಸಲು ಮರೆತಾಗ, ಇವನು ಅದಕ್ಕಾಗಿ ಅಸಾಧಾರಣವೆಂಬಂತೆ ಸಂಭ್ರಮಿಸಿದ. ಸಂಬಳ ಏನು ಮಾಡಲಿ ಎಂಬ ಅವನ ಸಮಸ್ಯೆಗೆ ಪರಿಹಾರ ದೊರೆಯಿತು. ಮೊದಲು ಅವಳಿಷ್ಟದ ಹೊಟೇಲ್ ಗಳಿಗೆ ಹೋಗುತ್ತಿದ್ದರು. ಅವನಿಗೆ ಗೊತ್ತಿಲ್ಲದ ಯಾವುದೋ ಹೊಸ ತಿಂಡಿಗಳನ್ನು ಅವಳು ತರಿಸುತ್ತಿದ್ದಳು, ಇವನು ತಿನ್ನುತ್ತಿದ್ದ. ಅವಳು ಯಾವುದೋ ಸಿನಿಮಾ ವಿಷಯ ಹೇಳುತ್ತಿದ್ದಳು, ಇವನು ಕೇಳುತ್ತಿದ್ದ. ಅವಳು ತನ್ನ ನೆಚ್ಚಿನ ಸಿನಿಮಾ ನೋಡುತ್ತಿದ್ದಳು. ಇವನು ಕನಸು ಕಾಣುವಂತೆ ಸುಮ್ಮನೆ ಕುಳಿತು ಎದ್ದುಬರುತ್ತಿದ್ದ. ಯಾರಿಗೂ ಸುಳಿವು ಸಿಗದಂತೆ ಒಂದು ವರ್ಷಗಳ ಕಾಲ ಇದೇ ಕಾರ್ಯಕ್ರಮ ಮುಂದುವರಿಯಿತು. ಇಡೀ ಒಂದು ವರ್ಷದಲ್ಲಿ ಇದಕ್ಕಿಂತ ಹೆಚ್ಚಿನದೇನೂ ನಡೆಯಲಿಲ್ಲ. ನಮ್ಮ ಕತೆ ಅಲ್ಲೇ ನಿಂತು ಬಿಟ್ಟಿದೆ, ಹೀಗಾಗಿ, ಎಲ್ಲೋ ಏನೋ ತಪ್ಪಾಗುತ್ತಿದೆ ಎಂಬ ಸಣ್ಣ ಯೋಚನೆಯೂ ಬಾರದಂತೆ ರಮೇಶ ಯಾವುದೋ ಕನಸಿನಲ್ಲೇ ಉಳಿದುಬಿಟ್ಟಿದ್ದ,...ಹೋದ ತಿಂಗಳವರೆಗೂ.
ಈ ಬಾರಿ ಸಿನಿಮಾ ನೋಡಿ ಮೂರು ವಾರವಾದರೂ ಅವಳು ಮತ್ತೆ ಕರೆಯದೇ ಇದ್ದಾಗ ಇವನಿಗೆ ಆತುರವಾಯಿತು. ಒಬ್ಬಳೇ ಇದ್ದಾಗ ಇವನೇ ಸಿನಿಮಾಗೆ ಹೋಗೋಣ್ವಾ?” ಅಂತ ಕೇಳಿದ. ಅವಳು ನಕ್ಕು ಈಗ ಆಗಲ್ಲ ಅಂದಳು. ಮತ್ತೆರಡು ದಿನ ರಜೆಯ ಬಳಿಕ ಸಿಂಗರಿಸಿಕೊಂಡು ಬಂದವಳೇ ಸಿಹಿ ಹಂಚಿ ಮದುವೆ ನಿಶ್ಟಯವಾದ ಸುದ್ದಿ ಎಲ್ಲರಿಗೂ ತಿಳಿಸಿದಳು. ಅವಳು ಕೊಟ್ಟ ಸಿಹಿ ಅವನ ಅಂಗೈಯಲ್ಲೇ ಬೆವರಿ ಅಂಟು ಅಂಟಾಯಿತು. ಉಳಿದವರೆಲ್ಲಾ ಅವಳ ಸುತ್ತ ನೆರೆದಾಗ ಅವನು ಟಿವಿಯತ್ತ ಕಣ್ಣು ಕೀಲಿಸಿ ಕೂತ. ಸ್ವಲ್ಪ ಹೊತ್ತಿಗೆ ಹೊಟೇಲ್ ಮುಂದೆ ಬಂದು ನಿಂತ ಬೈಕ್ ಏರಿ, ಹೆಲ್ಮೆಟ್ ಧರಿಸಿದ್ದವನ ಹಿಂದೆ ನಾಚುತ್ತಾ ಕುಳಿತ ಸುಮ ಎಲ್ಲರಿಗೂ ಕೈ ಬೀಸಿ ಹೊರಟಳು.


ರಮೇಶನಿಗೆ ಮೊದಲು ತಲೆ ಖಾಲಿಯಾದಂತೆನಿಸಿ, ನಂತರ ಈಗ ಏನೂ ಮಾಡುವುದೆಂಬ ಪ್ರಶ್ನೆ ಮೂಡಿತು. ಅವಳನ್ನು ತಾನು ಪ್ರೇಮಿಸುತ್ತಿರುವ ವಿಷಯ ತಿಳಿಸಬೇಕು, ಇಷ್ಟು ದಿನ ನನ್ನ ಜೊತೆ ಸುತ್ತಾಡಿದ್ದರ ಅರ್ಥವೇನು ಎಂದು ಘಟ್ಟಿಸಿ ಕೇಳಬೇಕು ಎಂದುಕೊಂಡ. ಅದು ತನ್ನ ಕೈಯಿಂದ ಖಂಡಿತಾ ಸಾಧ್ಯವಿಲ್ಲ ಎಂಬ ವಿವೇಕ ಮೂಡಿ, ತಾನು ನೋಡಿದ್ದ ಸಿನಿಮಾಗಳಲ್ಲಿ ತನ್ನ ಪ್ರಶ್ನೆಗೆ ಉತ್ತರ ಹುಡುಕಿದ. ಆತ್ಮಹತ್ಯೆಯೇ ಉತ್ತರವಾದಾಗ ಮೊದಲಿಗೆ ತಳ್ಳಿಹಾಕಿದ. ಆದರೆ, ಮದುವೆಯ ಹಿಂದಿನ ದಿನ, ಅಂದರೆ ನಿನ್ನೆ, ಸುಮಳ ಮದುವೆ ಉಡುಗೊರೆಯಾಗಿ, ಹೊಟೇಲ್ ಪರವಾಗಿ ತಾನೇ ಫ್ರೀಯಾಗಿ ಹನಿಮೂನ್ ಸ್ವೀಟ್ ರೆಡಿ ಮಾಡಬೇಕು ಎಂಬುದು ತಿಳಿದಾಗ, ಮಾತ್ರ ರಮೇಶನಿಗೆ ಇದು ತನ್ನ ಸೋಲಿನ ಪರಮಾವಧಿ ಎನಿಸಿತು. ಮೊದಲ ಬಾರಿಗೆ ಸುಮ ತನ್ನನ್ನು ಬಳಸಿಕೊಂಡು ಮೋಸ ಮಾಡಿದ್ದಾಳೆಂಬ ರೋಷ ಮೂಡಿತು. ಅವಳಿಗೆ ಹೇಗಾದರೋ ಬುದ್ದಿ ಕಲಿಸಬೇಕು, ನಮ್ಮಿಬ್ಬರ ನಡುವಿನ ಗುಟ್ಟನ್ನು, ನಂಬದೇ ಬೇರೆ ದಾರಿಯೇ ಇಲ್ಲದ ರೀತಿಯಲ್ಲಿ ಸಮಾಜಕ್ಕೆ ಹೇಳಬೇಕು, ತನ್ನ ಅಸ್ತಿತ್ವವನ್ನು ಆತ್ಮಹತ್ಯೆಯ ಮೂಲಕ ನಿರೂಪಿಸಬೇಕು ಎಂಬ ಹಠ ಮೂಡಿತು.  

************

ಕುಣಿಕೆ ಹಾಕುವುದನ್ನು ಮುಗಿಸಿದ ರಮೇಶ ಈಗ ತನ್ನ ಆತ್ಮಹತ್ಯಾ ಯೋಜನೆಯ ಅತ್ಯಂತ ಪ್ರಮುಖ ಭಾಗವಾಗಿದ್ದ, ಅವನ ಆತ್ಮಹತ್ಯೆಯ ಉದ್ದೇಶವನ್ನು ಸಫಲಗೊಳಿಸುವ ಏಕೈಕ ಸಾಧನವಾಗಿದ್ದ ಡೆತ್ ನೋಟ್ ಬರೆಯಲು ಕುಳಿತ. ಸುಮಳ ಮಧುಮಂಚ ತನ್ನ ರೂಮಿನ ಸೀದಾ ಮೇಲಿನ ರೂಮಿನಲ್ಲೇ ಇರುವುದು, ಅದನ್ನು ತಾನೇ ಸಜ್ಜುಗೊಳಿಸಿರುವುದು ಇವೆಲ್ಲಾ ತನ್ನ ಬದುಕಿನ ವಿಪರ್ಯಾಸದಂತೆಯೂ, ಒಬ್ಬ ದುರಂತ ನಾಯಕನ ಜೀವನದಲ್ಲಿ ಮಾತ್ರ ನಡೆಯಬಹುದಾದ ಘಟನೆಗಳಂತೆಯೂ, ತನ್ನ ಆತ್ಮಹತ್ಯೆಯನ್ನು ಮತ್ತಷ್ಟು ದುರಂತವಾಗಿಸುವ ಅಂಶಗಳಂತೆಯೂ ಕಂಡು, ರಮೇಶನಿಗೆ ಸಂತೋಷವೇ ಆಯಿತು. ತನ್ನನ್ನು ಅಮರ ಪ್ರೇಮಿಯಾಗಿಸುವ ಆ ಪತ್ರದಲ್ಲಿ ಏನಿರಬೇಕೆಂಬ ಕುರಿತು ನಿನ್ನೆಯಿಂದ ಸಾಕಷ್ಟು ಯೋಚಿಸಿದ್ದ ರಮೇಶ ಪೆನ್ ಹಿಡಿದು ಕುಳಿತ ಕೂಡಲೇ, ಅಕ್ಷರಗಳು ಮೂಡತೊಡಗಿದವು.

ಎಂತಹ ವಿಪರ್ಯಾಸ ನೋಡು, ನಿನ್ನ ಮೊದಲ ರಾತ್ರಿ ನನ್ನ ಕೊನೆಯ ರಾತ್ರಿಯಾಗಲಿದೆ.
ನಿನ್ನ ಮಧುಮಂಚವನ್ನು, ನನ್ನ ಮರಣಶಯ್ಯೆಯಮೇಲೆ ನಾನೇ ಕೈಯಾರೆ ಸಿಂಗರಿಸಿದ್ದೇನೆ.
ಅಲ್ಲಿ ನಿನ್ನ ಹೊಸ ಜೀವನದ ಸುಂದರ ಅಧ್ಯಾಯ ತೆರೆದುಕೊಳ್ಳುತ್ತಿರುವಾಗ, ಇಲ್ಲೇ ಕೆಳಗೆ ನನ್ನ ಹಳೆಯ ಜೀವನದ ದುರಂತ ಅಧ್ಯಾಯ ಕೊನೆಗೊಳ್ಳುತ್ತಿದೆ.
ನೀನು ಅಲ್ಲೇ ಮೇಲೆ ಸೃಷ್ಟಿಕಾರ್ಯದಲ್ಲಿ ತೊಡಗಿರುವಾಗ,ನಾನು ಇಲ್ಲೇ ಕೆಳಗೆ ನನ್ನ ಸೃಷ್ಟಿಗೆ ಅಂತ್ಯ ಹಾಡುತ್ತಿದ್ದೇನೆ.
ನಿನ್ನ ಸುಖದ ನರಳುವಿಕೆಯೊಂದಿಗೆ, ನನ್ನ ನೋವಿನ ನರಳುವಿಕೆ ಶಾಶ್ವತವಾಗಿ ಬೆರೆತು ಹೋಗಲಿದೆ.
ನಿನ್ನ ಬಾಳ ಪಯಣ, ನಾನು ಸಜ್ಜುಗೊಳಿಸಿದ ಸಜ್ಜೆ ಮಂಚದಂತೆ ಹೂ ಹಾಸಿಗೆಯಾಗಿರಲೆಂದೇ ನಾನು ಈ ಮುಳ್ಳಿನ ಹಾದಿ ತುಳಿಯುತ್ತಿದ್ದೇನೆ..........

ಬರೆಯುವುದನ್ನು ನಿಲ್ಲಿಸಿ ಒಮ್ಮೆ ಓದಿದ ರಮೇಶನಿಗೆ ತನ್ನ ಬರವಣಿಗೆಯ ಶೈಲಿ, ತಾನು ಬಳಸಿರುವ ಶಬ್ದಗಳನ್ನು ಕಂಡು ಅಚ್ಚರಿಯಾಯಿತು. ಯಾವ ಸಿನಿಮಾದ ಯಾವ ನಾಯಕನೂ ಇದುವರೆಗೆ ಬರೆಯದಂತಹ ಭಾವನಾತ್ಮಕವಾದ, ಕಾವ್ಯಾತ್ಮಕವಾದ ಅಂತಿಮಪತ್ರವಿದು ಎಂಬ ಹೆಮ್ಮೆ ಮೂಡಿತು. ತಾನು ಬರೆಯುತ್ತಾ ಹೋದಂತೆ ಒಳಗೇನೋ ಖಾಲಿಯಾಗುವ ಬದಲು, ಇದುವರೆಗೂ ಇದ್ದ ಖಾಲಿತನ ತುಂಬಿಕೊಳ್ಳುತ್ತಾ ಹೋಗುತ್ತಿದೆ ಅನ್ನಿಸಿ ರಮೇಶನಿಗೆ ತನ್ನ ಚರಮಗೀತೆಯ ಮೇಲೆ ಇನ್ನಿಲ್ಲದ ಮೋಹ ಹುಟ್ಟಿತು. ಇನ್ನಷ್ಟು ಮತ್ತಷ್ಟು ಬರೆಯುವ ಆಸೆಯಿಂದ ರಮೇಶ ಗೋಡೆಗೆ ಒರಗಿ ನೆಟ್ಟಗೆ ಕುಳಿತ. ಆ ರಾತ್ರಿ ರಮೇಶ ಟಿವಿಯಲ್ಲಿ ಸಿನಿಮಾ ನೋಡಲಿಲ್ಲ, ಸುಮಳ ಬಗ್ಗೆ ಯೋಚಿಸಲೂ ಇಲ್ಲ, ಆತ್ಮಹತ್ಯೆಯಂತೂ ಮಾಡಿಕೊಳ್ಳಲೇ ಇಲ್ಲ, ಬೆಳಗು ಹರಿಯುವವರೆಗೂ ತನ್ನ ಸೃಷ್ಟಿಕಾರ್ಯದಲ್ಲೇ ಲೀನವಾಗಿದ್ದ................     

ಹೊಂಗೆ ಮರದಡಿ ಕಥಾ ಸಂಕಲನದಿಂದ