Saturday, July 30, 2016

ದಸ್ತಕ್ - The knock

ಈ ಚಿತ್ರದ ಬಗ್ಗೆ ಬರೀಬೇಕು ಅಂತ ಅಂದುಕೊಂಡು ಬಹಳ ದಿನವೇ ಆಯ್ತು. ವಿಭಿನ್ನ ಕಥೆ, 1970ರ ಕಾಲಕ್ಕೆ ತೀರಾ ಕ್ರಾಂತಿಕಾರಿ ಎನ್ನಬಹುದಾದ ನಿರೂಪಣೆ, ಈಗಿನ ಕಾಲಕ್ಕೂ ಬೋಲ್ಡ್ ಎನಿಸಬಹುದಾದ ನಟನೆ, ಕಪ್ಪು ಬಿಳುಪು ಛಾಯಾಗ್ರಹಣದ ಎಲ್ಲಾ ಸೌಂದರ್ಯ ಸಾಧ್ಯತೆಗಳನ್ನು ಬಳಸಿಕೊಂಡಿರುವ ಸಿನಿಮಟೋಗ್ರಫಿ. ಮತ್ತು ಶಾಸ್ತ್ರೀಯ ರಾಗಗಳನ್ನು ಆಧರಿಸಿ ಮದನ್ ಮೋಹನ್ ನೀಡಿರುವ ಅತ್ಯುತ್ತಮ ಸಂಗೀತವನ್ನು ಹೊಂದಿದ್ದ ಒಂದು ಒಳ್ಳೆಯ ಚಿತ್ರ ದಸ್ತಕ್ – The Knock.  ಆದರೆ, ಇದರ ಬಗ್ಗೆ ಬರೆಯಲೇಬೇಕು ಅನಿಸಿದ್ದಕ್ಕೆ ಕಾರಣ ಮಾತ್ರ ಬೇರೆ. ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಬಾಚಿಕೊಂಡರೂ ಭಾರತೀಯ ಕಲಾತ್ಮಕ ಚಿತ್ರಗಳ ಸಾಲಿನಲ್ಲಿ ಇದಕ್ಕೆ ಸರಿಯಾದ ಸ್ಥಾನಮಾನ ದೊರೆತಿಲ್ಲ ಮತ್ತು ಹಲವರಿಗೆ ದಸ್ತಕ್ ಅಪರಿಚಿತವಾಗಿಯೇ ಉಳಿದುಬಿಟ್ಟಿದೆ ಎಂಬುದು.

ಖ್ಯಾತ ಉರ್ದು ಸಾಹಿತಿ ರಾಜೇಂದ್ರ ಸಿಂಗ್ ಬೇಡಿ ತಮ್ಮ ಸಣ್ಣ ರೇಡಿಯೋ ನಾಟಕ ಆಧರಿಸಿ ತಗೆದ ದಸ್ತಕ್ ಅವರ ನಿರ್ದೇಶನದ ಚೊಚ್ಚಲ ಚಿತ್ರ. ಹರಸಾಹಸ ಪಟ್ಟು ಮುಂಬೈನಲ್ಲಿ ಅಂತೂ ಒಂದು ಮನೆ ಬಾಡಿಗೆಗೆ ಪಡೆದು ಇನ್ನೇನೋ ತಮ್ಮ ದಾಂಪತ್ಯ ಜೀವನ ಆರಂಭಿಸಬೇಕು ಎಂದುಕೊಳ್ಳುವ ನವದಂಪತಿ ಹಮೀದ್ ಮತ್ತು ಸಲ್ಮಾ ಅವರಿಗೆ ರಾತ್ರಿ ಮನೆ ಬಾಗಿಲು ತಟ್ಟುವವವರ ಕಾಟ ಆರಂಭವಾಗುತ್ತದೆ. ತಮ್ಮ ಈ ಕನಸಿನ ಗೂಡಿನಲ್ಲಿ ಈ ಹಿಂದೆ ಬಾಡಿಗೆಗೆ ಇದ್ದವಳು ಒಬ್ಬಳು ನಾಚ್ ವಾಲೀ, ವೇಶ್ಯೆ ಎಂಬ ಸತ್ಯದ ಅರಿವಾಗುವ ವೇಳೆಗೆ ಯಾರದ್ದೂ ಸ್ವಂತ ಎನಿಸದ ಮುಂಬೈ ತನ್ನ ಕರಾಳತೆಯ ಮುಖವನ್ನ ತೋರಿಸಲು ಆರಂಭಿಸಿರುತ್ತದೆ. ಸಲ್ಮಾ ಳ ಮಧುರ ಕಂಠವೇ ಅವಳಿಗೆ ಮುಳುವಾಗಿ, ಆಕೆಯೂ ನಾಚ್ ವಾಲಿಯೇ ಇರಬೇಕು ಎಂಬ ಸುತ್ತಮುತ್ತಲಿನವರಲ್ಲಿ ಹುಟ್ಟುವ ಅನುಮಾನ ಮತ್ತು ನಂತರ ಆ ಅನುಮಾನವನ್ನು ನಿಜವಾಗಿಸಲೇಬೇಕೆನ್ನುವ ಅವರೆಲ್ಲರ ಆರ್ಥಿಕ, ಸಾಮಾಜಿಕ ಮತ್ತು ನೈತಿಕ ಒಳ ಉದ್ದೇಶಗಳು...ಹಮೀದ್ ಮತ್ತು ಸಲ್ಮಾರ ಕನಸನ್ನು ತಮ್ಮ ತಣ್ಣನೆಯ ಕ್ರೌರ್ಯದಿಂದ ಕೊಲ್ಲುತ್ತಾ ಬರುವ ನೆರೆಹೊರೆ...ಒಂದು ಅಮಾಯಕ ಹಾಗು ಭಾವನಾತ್ಮಕ ಮನಸ್ಸುಗಳೆರಡು ಬದಲಾಗುತ್ತಾ, ಬರಡಾಗುತ್ತಾ ಹೋಗುವ ರೀತಿ...ಇವೆಲ್ಲವನ್ನೂ ಅತ್ಯಂತ ಶಕ್ತಿಯುತವಾಗಿ ಮೆಟಾಫರ್ ಗಳ ಸಹಿತ ನಿರೂಪಿಸುವ ಬೇಡಿ ಆಗಿನ ಕಾಲದ ಆದರೆ ಈಗಲೂ ಪ್ರಸ್ತುತ ಎನಿಸುವ ಹಲವು ವಿಷಯಗಳನ್ನು ಕೇವಲ ಒಂದೇ ಮಾತುಗಳಲ್ಲೇ ಚೂರಿ ಇರಿದಷ್ಟೇ ಹರಿತವಾಗಿ ಹೇಳಿಬಿಡುತ್ತಾರೆ.

ಮನೆಗೆ ಮುಂಗಡ ಕೊಡಲು ಹೋಗುವ ಹಮೀದ್ ಹೆಸರೇನು ಎಂಬ ಪ್ರಶ್ನೆಗೆ ಎರಡು ಕ್ಷಣದ ಮೌನದ ಬಳಿಕ ತಡವರಿಸಿ ನಂದಕಿಶೋರ್ ಎನ್ನುವುದು ಅಂತಹ ದೃಶ್ಯಕ್ಕೆ ಒಂದು ಉದಾಹರಣೆ ಅಷ್ಟೇ. ಚಿತ್ರದಲ್ಲಿ ಮತ್ತೆಲ್ಲೂ ಜಾತಿ ಧರ್ಮದ ಬಗ್ಗೆ ಮಾತನಾಡದ ಬೇಡಿ ಆ ಒಂದೇ ಒಂದು ಡೈಲಾಗ್ ಮೂಲಕ  ಮುಂಬೈನಂತಹ ಕಾಸ್ಮೋಪಾಲಿಟನ್ ನಗರದ ಹಿಪೋಕ್ರಸಿಯನ್ನ ಬಟಾಬಯಲು ಮಾಡುತ್ತಾರೆ.               

ಹಗಲಿಡೀ ಮನೆಯಲ್ಲಿ ಬಂಧಿಯಾಗಿ ಉಳಿಯುವ, ಹಾಡುವ ಅನುಮತಿಯೂ ಇಲ್ಲದ  ಸಲ್ಮಾ ನಿಧಾನವಾಗಿ ಬೇಯತೊಡಗುತ್ತಾಳೆ. ರಕ್ಷಣೆ ನೀಡಬೇಕಾಗಿದ್ದ ಮನೆಯಿಂದಲೇ ತಪ್ಪಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಿ   ಮಧ್ಯರಾತ್ರಿವರೆಗೆ ಊರು ಸುತ್ತಿ ನಂತರ ಮನೆಗೆ ಮರಳತೊಡಗುತ್ತಾರೆ ಗಂಡ ಹೆಂಡತಿ. ಇದೆಲ್ಲದರ ಮಧ್ಯೆ ಸಾಮಾನ್ಯ ಪರಿಸ್ಥಿತಿಯಲ್ಲಿ ಒಳ್ಳೆಯವನಾಗಿರುವ ಮನುಷ್ಯ ಒತ್ತಡ, ಹತಾಶೆ ಮತ್ತು ಮಾನಸಿಕ ಹಿಂಸೆ ಹೆಚ್ಚಾದಾಗ ಹೇಗೆ ನಿಧಾನವಾಗಿ ತನ್ನೊಳಗೆ ಎಲ್ಲೋ ಅಡಗಿದ್ದ ರಾಕ್ಷಸೀ ಗುಣ ತೋರಿಸಲು ಆರಂಭಿಸುತ್ತಾನೆ ಮತ್ತು ಅದನ್ನು ತನಗಿಂತ ದುರ್ಬಲರ ಮೇಲೆಯೇ( ಇಲ್ಲಿ ಹಂಡತಿ) ಪ್ರದರ್ಶಿಸುತ್ತಾನೆ ಎಂಬುದಕ್ಕೆ ಹಮೀದ್ ಸಾಕ್ಷಿಯಾಗುತ್ತಾನೆ. ಅತ್ಯಂತ ಮೃದು ಸ್ವಭಾವದ, ಭಾವಜೀವಿ, ಪ್ರಾಮಾಣಿಕ ಹಮೀದ್ ನ ಒಳಗಿನ ರಾಕ್ಷಸ ಆಗಾಗ ಕಾಣಿಸಿಕೊಳ್ಳತೊಡಗುತ್ತಾನೆ. ಒಂದು ಕಡೆ ಸಲ್ಮಾ ತನ್ನ  ಚಾರಿತ್ತ್ರ್ಯದ ಬಗ್ಗೆ  ನಂಬಿಕೆ  ಕಳೆದುಕೊಳ್ಳುತ್ತಾ ಹೋದರೆ ಹಮೀದ್ ತನ್ನ ಪ್ರಾಮಾಣಿಕತೆಗೆ ಎಳ್ಳು ನೀರು ಬಿಡುತ್ತಾನೆ. 

ಸಂಸ್ಕಾರ ಚಿತ್ರದ ಮೂಲಕ, ಕನ್ನಡ ಚಲನಚಿತ್ರರಂಗ ದೇಶದ ಗಮನ ಸೆಳೆದ ವರ್ಷವೇ (1970) ದಸ್ತಕ್ ಕೂಡ ತೆರೆಕಂಡಿತು. ರಾಷ್ಚ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮೂರು ಪ್ರಶಸ್ತಿ ಬಾಚಿಕೊಂಡು ಗಮನ ಸೆಳೆಯಿತು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ನಾಯಕ ಸಂಜೀವ್ ಕುಮಾರ್, ನಾಯಕಿ ರೆಹನಾ ಸುಲ್ತಾನ್ ಮತ್ತು ಸಂಗೀತಕ್ಕಾಗಿ ಮದನ್ ಮೋಹನ್ ಪ್ರಶಸ್ತಿ ಪಡೆದರು. ತೀರಾ ತಡವಾಗಿ ಬಂತು ಎಂಬ ಕಾರಣಕ್ಕೆ ಪ್ರಶಸ್ತಿ ನಿರಾಕರಿಸಲಿದ್ದ ಮದನ್ ಮೋಹನ್ ಅವರ ಮನವೊಲಿಸಿ ಸಮಾರಂಭಕ್ಕೆ ಕರೆದೊಯ್ದರಂತೆ ಸಂಜೀವ್ ಕುಮಾರ್.


ದಸ್ತಕ್ ಆಗ ಬರುತ್ತಿದ್ದ ಕಲಾತ್ಮಕ ಚಿತ್ರಗಳ ಹಲವು ಅಲಿಖಿತ ನಿಯಮಗಳನ್ನು ತನ್ನ ಸಂಭಾಷಣೆ, ಹಾಡುಗಳಿಂದ ಮುರಿಯುತ್ತದೆ. ಮತ್ತು ಅದೇ ಚಿತ್ರದ ಶಕ್ತಿಯೂ ಅಗಿದೆ. ಮಜ್ರೂಹ್ ಸುಲ್ತಾಪುರಿ ಬರೆದಿರುವ ಉರ್ದು ಪ್ರಭಾವ ಹೆಚ್ಚಿರುವ ಕಾವ್ಯಾತ್ಮಕ ಗೀತೆಗಳು ಲತಾ ಮಂಗೇಷ್ಕರ್ ಹಾಡಿನ ಬದುಕಲ್ಲಿ ನಿಸ್ಸಂದೇಹವಾಗಿ ಒಂದು ಮೈಲುಗಲ್ಲು.