Tuesday, July 10, 2007

ಕಾಲವನ್ನು ಹಿಂದಕ್ಕೆ ತಿರುಗಿಸೋ ಮಹರಾಯ.......
ಈ ನೆನಪುಗಳೆಲ್ಲಾ ಯಾವತ್ತೂ ಹಸಿಬಿಸಿಯಲ್ಲ. ಎಲ್ಲೋ ಮನಸ್ಸಿನೊಳಗೆ ಅಡಗಿದ್ದು, ಒಮ್ಮೆಲೆ ಪುಸಕ್ಕನೆ ಹೊರಗೆ ಜಾರಿದ್ದು। ಬಹುಶ ಅಜ್ಜಿ ಮನೆಯಲ್ಲಿ ರಜಾ ದಿನ ಕಳೆಯುತ್ತಿದ್ದವರಿಗೆಲ್ಲಾ ಇಂತದೇ ನೆನಪುಗಳು ಕಾಡುತ್ತಿರುತ್ತವೆ। ರಜಕ್ಕಾಗಿಯೇ ಕಾದು ಹೊರಡಲು ಅನುವಾಗಿ ಭರ್ಜರಿ 1 ಅಥವಾ 2 ತಿಂಗಳು ಅಜ್ಜಿಮನೆಯಲ್ಲೇ ಠಿಕಾಣಿ ಹೂಡುತ್ತಿದ್ದ ಆ ದಿನಗಳನ್ನು ಮರೆತೇನೆಂದರೂ ಮರೆಯಲಿ ಹ್ಯಾಂಗಾ………
ಪ್ರತೀಬಾರಿ ಅಜ್ಜಿಮನೆಗೆ ಹೋದಾಗಲೂ ಹಳೆ ಗೆಳೆಯರೆಲ್ಲಾ ಸುಮಾರು 6 ತಿಂಗಳ ವಿರಹದ ಬಳಿಕ ಮತ್ತೆ ಆಟಕ್ಕೆ ಜೊತೆಯಾಗುತ್ತಿದ್ದರು. ಹೊಸ ಗೆಳೆಯರು ಯಾವುದೇ ಪರಿಚಯ, ಫಾರ್ಮಾಲಿಟೀಸ್ ಗಳ ಅಗತ್ಯವಿಲ್ಲದೆ ಆಟಕ್ಕೆ ಬರ್ತೀಯ...ಅನ್ನೋ ಆಹ್ವಾನದ ಜೊತೆಗೋ, ಜಗಳದ ಜೊತೆಗೆ ಜೀವದ ಗೆಳೆಯರಾಗಿ ಬಿಡುತ್ತಿದ್ದರು. ಅಜ್ಜಿಯ ಪುಟಾಣಿ ಬೆಲ್ಲ,... ಅಜ್ಜನ ಶ್ಲೋಕ...ಅತ್ತೆಯ ಕೈತುತ್ತು,... ಮಾವನ ಬ್ರೆಡ್ ಬಿಸ್ಕತ್ತು,...ಹೀಗೆ... ರೆಜೆಯ ಎಲ್ಲಾ ಆಯಾಮಗಳು ಹಳೆಯ ಪುಸ್ತಕದ ಹಳದಿಗಟ್ಟಿದ ಹಾಳೆಗಳಂತೆ ಮನಸ್ಸಲ್ಲಿ ಉಳಿದು ಬಿಟ್ಟಿವೆ.

ಆದರೆ ಈ ಎಲ್ಲಕ್ಕಿಂತ ನನ್ನನ್ನು ಹೆಚ್ಚಾಗಿ ಕಾಡುತ್ತಿದ್ದದ್ದು, ಅಜ್ಜಿಯ ಕತ್ತಲೆ ಕೋಣಿಯೊಳಗಿನ ಮಂಚದ ಕೆಳಗೆ ಭದ್ರವಾಗಿದ್ದ ಹಳೆಯ ಭಾರೀ ಗಾತ್ರದ ಟ್ರಂಕು। ಅದರ ಕುರಿತು ನನಗಂತೂ ಇನ್ನಿಲ್ಲದ ಆಕರ್ಷಣೆ। ಅದರ ಕತ್ತಲೊಳಗೆ ಅಡಗಿರುವ ನಿಗೂಡ ಪ್ರಪಂಚದ ಕುರಿತು ಏನೋ ಕುತೂಹಲ. ಅಜ್ಜಿ ಟ್ರಂಕು ತೆರೆಯಲು ಕುಳಿತಾಗೆಲ್ಲಾ ಕೋಣೆಯ ಕತ್ತಲನ್ನು ಓಡಿಸಲು ಹೆಣಗುತ್ತಿದ್ದ ಝೀರೋ ಕ್ಯಾಂಡಲ್ ದೀಪದಲ್ಲೇ ಅಚ್ಚರಿಯಿಂದ ಕಣ್ಣು ಅರಳಿಸಿ ಅಜ್ಜಿ ಅಕ್ಕ ಪಕ್ಕ ಕುಳಿತಿರುತ್ತಿದ್ದೆವು, ಮೂಗಿಗೆ ಹೊಡೆಯಲಿರುವ ನುಸಿಗುಳಿಗೆಯ ವಾಸನೆಯನ್ನು ಆಸ್ವಾದಿಸಲಿಕ್ಕೇ ಎಂಬಂತೆ ಕಣ್ಣಿನೊಂದಿಗೆ ಮೂಗನ್ನೂ ಅರಳಿಸಿ ಕಾಯುತ್ತಿರುತ್ತಿದ್ದೆವು. ದೊಡ್ಡ ಖಜಾನೆಯ ಬಾಗಿಲಿನಂತೆ ಅಜ್ಜಿಯ ಮಾಂತ್ರಿಕ ಟ್ರಂಕ್ ನ ಬಾಗಿಲು ತೆರೆದುಕೊಳ್ಳುತ್ತಿತ್ತು. ಮೇಲೆ ಇರುತ್ತಿದ್ದ 18 ಮೊಳದ ಭಾರೀ ಗಾತ್ರದ ರೇಷಿಮೆ ಸೀರೆಗಳನ್ನು ಅತೀ ಜಾಗರೂಕತೆಯಿಂದ ಪಕ್ಕಕ್ಕೆ ಎತ್ತಿ ಇಡುವ ಅಜ್ಜಿ ವಿಸ್ಮಯ ಲೋಕ ತೋರಿಸುತ್ತಾರೆಂಬಂತೆ ನಾವು ಕಾಯುತ್ತಿದ್ದ ರೀತಿ ಈಗ ನೆನೆಸಿಕೊಂಡರೆ ತೀರಾ ವಿಚಿತ್ರವೆನಿಸುತ್ತದೆ. ಒಳಗೇನಿದೆ ಎಂದು ನಮ್ಮ ಕುತೂಹಲದ ಕಣ್ಣು ಅರಸುತ್ತಿರುವಾಗಲೇ ಟ್ರಂಕಿನ ಯಾವುದೋ ಮೂಲೆಯಿಂದ ಕಟ್ಟು ಹಾಕಿದ ಫೋಟೋ ಒಂದನ್ನು ನಮ್ಮಜ್ಜಿ ತೆಗೆದು ನೋಡ್ರೋ ನಿಮ್ಮಮ್ಮ ಎನ್ನುತ್ತಿದ್ದರು. ಎರಡು ಜಡೆ ಹಾಕಿಕೊಂಡು, ಉದ್ದನೇ ಲಂಗ ತೊಟ್ಟು ತನ್ನ ಕಾಲೇಜು ಗೆಳತಿಯರೊಂದಿಗೆ ಫೋಟೋದಿಂದ ಇಣುಕುವ ಅಮ್ಮ ಯಾಕೋ ತೀರಾ ಅಪರಿಚಿತ ಎನಿಸುತ್ತಿದ್ದಳು. ಫೋಟೋವನ್ನು ಕದ್ದು ಮುಚ್ಚಿ ನಾಚಿಕೆಯಿಂದಲೇ ನೋಡುತ್ತಿದ್ದೆವು. ಅಷ್ಟರೊಳಗೆ ಅನಾವರಣಗೊಂಡಿದ್ದ ಅಜ್ಜಿಯ ಟ್ರಂಕ್ ಲೋಕ ನಿಧಾನವಾಗಿ ಮುಚ್ಚಿಕೊಳ್ಳುತ್ತಿತ್ತು. ಒಟ್ಟಿನಲ್ಲಿ ರಜೆಯ ಎಲ್ಲಾ ವೈಭೋಗಗಳಿಗೆ ಟ್ರಂಕ್ ಪ್ರಹಸನ ಕಳಶದಂತಿತ್ತು.ಬೇಸಿಗೆ ರಜೆಯಾದರೆ ಎರಡು ತಿಂಗಳು, ಅಕ್ಟೋಬರ್ ರಜೆಯಾದರೆ ಒಂದು ತಿಂಗಳು ಯಾವುದೇ ಶಿಬಿರಗಳ ಕಾಟವಿಲ್ಲದೆ ಅದು ಹೇಗೋ ಕಳೆದೇ ಹೋಗುತ್ತಿತ್ತು. ಮನೆಗೆ ಕರೆದೊಯ್ಯಲು ಬರುತ್ತಿದ್ದ ಅಪ್ಪ ಅಮ್ಮನೊಂದಿಗೆ ಪೆಚ್ಚು ಮೋರೆಯೊಂದಿಗೆ ಮುಂದಿನ ವರ್ಷದ ರಜೆಯ ಕನಸು ಹೊತ್ತೇ ಪ್ರಯಾಣ ಬೆಳೆಸುತ್ತಿದ್ದೆವು.
ಅದು ಹೇಗೋ ನಾವು ಬೆಳೆದಂತೆ ನಮ್ಮ ರಜಾದಿನಗಳ ಅಜ್ಜಿಮನೆಯ ಪಯಣ ವಿರಳವಾಗುತ್ತಾ ಬಂತು. ತಿಂಗಳ ಠಿಕಾಣಿಯಿಂದ ದಿನಗಳಿಗೆ ಇಳಿದದ್ದು ಕೊನೆಗೊಮ್ಮೆ ನಿಂತೇ ಹೋಯ್ತು. ಆದರೆ, ಅದರ ನೆನಪುಗಳು ಮಾತ್ರ ಇಂದಿಗೂ ಚೇತೋಹಾರಿ.

2 comments:

Shree said...

'ಹಳೆಯ ಪುಸ್ತಕದ ಹಳದಿಗಟ್ಟಿದ ಹಾಳೆಗಳಂತೆ' ... ಪರಿಮಳ ಬರ್ತಾ ಇದೆ... ಹಳೇ ಪುಸ್ತಕದ್ದು... :)
ಛೆ, ಇನ್ನು ಸದ್ಯಕ್ಕೆ ಯಾವ ಬ್ಲಾಗೂ ಓದಬಾರದು, ಎಲ್ಲಿಯೂ ಬ್ಲಾಗ್ ಕಮೆಂಟ್ ಬರೆಯಬಾರದು ಅಂದುಕೊಂಡಿದ್ದೆ, ಇವತ್ತು ವ್ರತ ಭಂಗವಾಯ್ತು... ಪರ್ವಾಗಿಲ್ಲ, ಮತ್ತಿನ್ಯಾವತ್ತಾದ್ರೂ ಈಕಡೆ ಬರ್ತೇನೆ.

Prasanna Sharma said...

Kanasugalu chennaagive. Innoo chennaagiruva kanasugalu haridu barali....
Thanks Latha for pointing to this blog.