Monday, May 19, 2008

ಅಮ್ಮ ಮಾತಾಡ್ಲಿಲ್ಲ.........

ಕಳೆದ ಮೂರು ದಿನಗಳಿಂದ ಮನೆಯಲ್ಲಿ ದುಸುಮುಸು.... ಎಲ್ಲವೂ ಸರಿಯಿಲ್ಲ ಎಂಬ ಭಾವ...ಎಷ್ಟು ಬೇಕೋ ಅಷ್ಟೇ ಮಾತುಕತೆ. ಮಗಳಿಗಂತೂ ಚಿಕ್ಕ ಪುಟ್ಟ ವಿಷಯಕ್ಕೂ ಕಣ್ಣಂಚಲ್ಲೇ ನೀರು. ನಾನು ಏನು ಮಹಾ ಕೇಳಿದ್ದು....ಮಂಡಿ ಕಾಣೋ ಮಿನಿ ಸ್ಕರ್ಟ್ ಹಾಕೋತೀನಿ ಅಂದ್ನಾ....ಮೈಮಾಟ ತೋರೋ ಟೈಟ್ ಟೀ ಶರ್ಟ್ ಬೇಕು ಅಂದ್ನಾ...ನನ್ನ ಇಷ್ಟು ಚಿಕ್ಕ ಆಸೆಗೆ ಬೇಡ ಅಂತಾ ಹಠ ಹಿಡಿದಿರೋ ಈ ಅಮ್ಮಒಳ್ಳೇ 18ನೇ ಶತಮಾನದಲ್ಲಿ ಬದುಕುತ್ತಿರೋ ತರಾ ಆಡ್ತಾಳಲ್ಲ.ಮೂರು ದಿನದ ಹಿಂದಿನ ಮಾತು-ಜಗಳ ನೆನಪಾಗಿ ಮತ್ತೆ ಮಗಳ ಕಣ್ಣಂಚಲ್ಲಿ ಮುತ್ತು ಸುರಿಯಿತು.
ಮೊನ್ನೆ ತಾನೇ ಕಾಲೇಜಿನ ಬಣ್ಣದ ಲೋಕ ಪ್ರವೇಶಿಸಿದ್ದ ಹುಡುಗಿ ಅಲ್ಲಿನ ರಂಗು ನೋಡಿ ದಂಗಾಗಿದ್ದು ಸುಳ್ಳಲ್ಲ. ಮೊನ್ನೆವರೆಗೂ,ನೀಟಾಗಿ ಯೂನಿಫಾರ್ಮ್ ಹಾಕಿಕೊಳ್ಳುತ್ತಿದ್ದ, ಚೆನ್ನಾಗಿ ಡ್ರೆಸ್ ಮಾಡ್ಕೋಳ್ಳೋದು ಯಾವುದಾದರೋ ಮದುವೆ ಇದ್ದಾಗ ಅದ್ಕೊಂಡಿದ್ದ ಹುಡುಗಿಗೆ ಕಾಲೇಜಿನ ವಸ್ತ್ರ ವೈಭವ ಭ್ರಮೆ ಹುಟ್ಟಿಸಿತ್ತು.ಎರಡು ದಿನ ಕಾಲೇಜಿಗೆ ಹೋಗಿ ಬಂದವಳೇ ತನ್ನಲ್ಲಿರುವ ವಸ್ತ್ರ ಭಂಡಾರ ತೀರಾ ಚಿಕ್ಕದು ಮತ್ತು ಔಟ್ ಡೆಟೆಡ್ ಅನ್ನಿಸಿ, ಅಂದೇ ಅಪ್ಪನನ್ನು ಹೊರಡಿಸಿ ತನಗೆ ಬೇಕಾದ ಬಣ್ಣ ಬಣ್ಣದ ಸಲ್ವಾರ್ ಸೂಟ್,ಕುರ್ತಾ, ಜೀನ್ಸ್ ಕೊಂಡಿದ್ದಳು. ಆದರೆ, ಹೊಸದಾಗಿ ತಂದ ಜೀನ್ಸ್ ತೊಟ್ಟು ಕಾಲೇಜಿಗೆ ಹೊರಟು ನಿಂತಾಗ ಮಾತ್ರ ಯಾಕೋ ಎಲ್ಲಾ ಸರಿಯಿಲ್ಲ ಅನ್ನಿಸಿತ್ತು. ಕಾಲೇಜು ತಲುಪಿದ ಮೇಲಂತೂ ನನ್ನ ಜೀನ್ಸ್ ಗೆ ಉದ್ದನೇ ಕೂದಲೂ ಯಾವ ರೀತಿ ನೋಡಿದ್ರೂ ಹೊಂದುತ್ತಿಲ್ಲ ಅನ್ನಿಸಿತ್ತು.

ಇದುವರೆಗೆ ಉದ್ದನೆ ಕೂದಲನ್ನು ಎರಡಾಗಿ ಸೀಳಿ ಜಡೆ ಹೆಣೆದು ಅದನ್ನು ಮಡಿಸಿ ಅಮ್ಮ ರಿಬ್ಬನ್ ಬಿಗಿದರೆ ನಾಳಿನವರೆಗೂ ಅದು ಭದ್ರ. ಎಷ್ಟು ಉದ್ದ ಕೂದ್ಲೇ ನಿಂದು ಚೆನ್ನಾಗಿದೆ ಅಂತ ಯಾರಾದ್ರೋ ಹೇಳಿದ್ರೆ ಮನೆಗೆ ಬಂದು ಕನ್ನಡಿ ಮುಂದೆ ನಿಂತು ಕೂದಲು ಸವರುತ್ತಿದ್ದ ಹುಡುಗಿಗೆ ತನ್ನ ಕೂದಲ ಕುರಿತು ಸಾಕಷ್ಟು ಹೆಮ್ಮೇನೇ ಇತ್ತು. ಆದರೆ,ಈಗ, ಮೊದಲು ಜೀನ್ಸ್ ಹಾಕಿದಾಗ ಯಾವತ್ತೂ ಅನ್ನಿಸಿರದಿದ್ದ ಭಾವ ಹುಡುಗಿಯನ್ನ ಕಾಡಿ, ಹತ್ತಾರು ಬಾರಿ ಲೇಡಿಸ್ ರೂಮ್ ಗೆ ನುಗ್ಗಿ ಕನ್ನಡಿ ಮುಂದೆ ನಿಲ್ಲುವಂತೆ ಮಾಡಿತ್ತು. ಜೀನ್ಸ್ ಜೊತೆ ಸೊಂಟ ಮುಟ್ಟುವ ಬಿಗಿಯಾಗಿ ಹೆಣೆದ ಉದ್ದನೇ ಜಡೆ....ಯಾಕೋ ತೀರಾ ಹಳ್ಳಿ ಗಮಾರಿ ಥರಾ ಅನ್ನಿಸಿದ್ದೇ , ಹಡುಗಿ ಹೇರ್ ಕಟ್ ಮಾಡಿಸೋ ನಿರ್ಧಾರಕ್ಕೆ ಬಂದು ಬಿಟ್ಲು.

ಯಾಕೋ ನಿಂದು ತೀರಾ ಅತಿ ಆಯ್ತು ಕಣೇ. ಹೊಸ ಡ್ರೆಸ್ ಬೇಕು ಅಂದೆ, ಬೇರೆ ವಾಚ್ ಬೇಕು ಅಂದೆ, ಸ್ಕೂಟಿ ಕೊಡ್ಸಿ ಅಂತಾ ಆಗ್ಲೆ ಡಿಮ್ಯಾಂಡ್ ಇಟ್ಟಿದ್ದೀಯಾ.ಈಗ ನೋಡಿದ್ರೆ ಕೂದ್ಲು ಕಟ್ ಮಾಡಿಸ್ತಾಳಂತೆ. ನೀನೇನು ಕಾಲೇಜಿಗೆ ಶೋಕಿ ಮಾಡೋಕೆ ಹೋಗ್ತೀಯೋ ಓದೋಕೋ.... ಅಮ್ಮನಿಂದ ತೀವ್ರ ವಿರೋಧ ವ್ಯಕ್ತವಾದಾಗ, ಹುಡುಗಿಯೂ ಹಟಕ್ಕೆ ಬಿದ್ದಳು. ಊಟಿ ತಿಂಡಿ ಕಡಿಮೆ ಆಯ್ತು, ಮಾತಂತೂ ಇಲ್ಲವೇ ಇಲ್ಲ ಅನ್ನುವಷ್ಟು ಚಿಕ್ಕದಾಯಿತು. ನಗು ನಿಂತೇ ಹೋಯ್ತು. ಹಠ ಬಿಡದ ಅಮ್ಮ ಮಗಳ ಮೌನ ಕೆದಕದೆ ಹಾಗೇ ಬಿಟ್ಟರು. ಮೂರನೇ ದಿನ ಮಾತ್ರ ರಾತ್ರಿ ಊಟಕ್ಕೆ ಕೂತಾಗ ಅನ್ನ ತಿನ್ನದೇ ತಟ್ಟೆ ಕೆದಕುತ್ತಾ ಕೂತಿದ್ದವಳನ್ನು ಕಂಡು ಅಮ್ಮ, ಸರಿ ನಿನ್ನಿಷ್ಟ ಏನೂ ಬೇಕಾದ್ರೂ ಮಾಡ್ಕೋ ಅಂದಿದ್ದೇ ಹುಡುಗಿಗೆ ಗೆದ್ದ ಭಾವ. ಅರಿವಿಲ್ಲದಂತೆ ಮೊಗದಲ್ಲಿ ಅರಳಿದ ನಗೆ ಮಲ್ಲಿಗೆ.

ಮಾರನೇ ದಿನ ಕಾಲೇಜಿನಲ್ಲಿ ಹೊಸ ಫ್ರೆಂಡ್ಸಗಳನ್ನೆಲ್ಲಾ ಕೇಳಿ ಹೇರ್ ಕಟ್ ಶೈಲಿಯನ್ನ ಮನದಲ್ಲೇ ಸಿದ್ದಪಡಿಸಿಕೊಂಡಳು. ದಿನಾ ಒಂದಷ್ಟು ಪೌಡರ್ ಮೆತ್ತಿಕೊಂಡು ಮೇಕಪ್ ಆಯ್ತು ಅಂದ್ಕೋಳ್ಳೋ ಅಮ್ಮನಿಗೇನು ಗೊತ್ತು, ಅಂದು ಕೊಂಡೇ ಪಕ್ಕದ ಮನೆ ಆಂಟಿ ಹತ್ರ ಬ್ಯೂಟಿ ಪಾರ್ಲರ್ ಮಾಹಿತಿ ಕಲೆ ಹಾಕಿದಳು. ಸಂಜೆ ಅಮ್ಮನ ಜೊತೆ, ಬ್ಯೂಟಿ ಪಾರ್ಲರ್ ಪ್ರವೇಶಿಸಿದಳೇ, ಅಲ್ಲಿದ್ದ ಹುಡುಗಿ ಮುಖದಲ್ಲಿ ಮೂಡಿದ್ದ ಪ್ರಶ್ನೆಗೆ ಹೇರ್ ಕಟ್ ಅಂತ ಹೆಮ್ಮೆಯಿಂದಲೇ ಉತ್ತರಿಸಿ ಸರದಿಗಾಗಿ ಕಾದು ಕುಳಿತಳು. ಅಮ್ಮ ಅಲ್ಲೇ ಇದ್ದ ಕಳೆದ ವರ್ಷದ ಯಾವುದೋ ವಿಮೆನ್ ಮ್ಯಾಗಝಿನ್ ಹಿಡಿದು ಕುಳಿತಾಗ ತನ್ನ ಹೊಸ ಲುಕ್ಸ ಹೇಗಿರಬಹುದು ಅಂತಾ ಕನಸು ಕಂಗಳಲ್ಲಿ ರಂಗವಲ್ಲಿ ಬರೆದಳು.

ಪಾರ್ಲರ್ ಹುಡುಗಿ ಯಾರದೋ ಹುಬ್ಬು ಕೆತ್ತಿ, ಇನ್ಯಾರದೋ ಮುಖಕ್ಕೆ ಮತ್ತೇನೂ ಮೆತ್ತಿ ಬನ್ನಿ ಅಂದಾಗ ಮಾತ್ರ ಯಾಕೋ ಹುಡುಗಿ ಮಂಕಾದಳು. ಬಲಿ ಪೀಠ ಏರುವಂತೆ ಎತ್ತರದ ಕುರ್ಚಿ ಏರಿ ಕುಳಿತಳು. ಯಾವ ಕಟ್ ಎಂಬ ಪ್ರಶ್ನಗೆ ಅಸ್ಪಷ್ಟವಾಗಿ ಗೊಣಗಿದಳು. ಸಸ್ ಸಸ್ ಅಂತ ಕೂದಲ ತುಂಬಾ ಸ್ಪ್ರೇ ಮಾಡಿದ ಬ್ಯೂಟೀಶಿಯನ್ ಕೂದಲನ್ನು ಒಮ್ಮೆ ಎತ್ತಿ ಹಿಡಿದವಳೇ ಮೂರು ದಿನಗಳ ಬೇಗುದಿ ಅರಿತಂತೆ ಇಷ್ಟು ಕೂದಲು ಬೆಳೆಸೋಕೆ ನಿಮ್ಮ ಅಮ್ಮ ಎಷ್ಚು ವರ್ಷ ಕಷ್ಟ ಪಟ್ಟಿರ್ತಾರೆ ಗೊತ್ತಾ ನನಗೇನೂ ನಿಮಿಷಕ್ಕೆ ಕಟ್ ಮಾಡಿ ಬಿಸಾಕ್ತೀನಿ ಎಂದಳು. ಈ ಹೇಳಿಕೆಗೇ ಕಾದಿದ್ದಂತೇ ಹುಡುಗಿ ಕಣ್ಣು ಹನಿಗೂಡಿತು. ದೇವರೇ ಅಮ್ಮ ಈಗ ಒಂದೇ ಸಾರಿ ಕಟ್ ಮಾಡಿಸಬೇಡ ಕಣೇ ಅನ್ನಲಿ ಈ ಪೀಠದಿಂದ ಕೆಳಗಿ ಇಳೀತೀನಿ ಅಂದುಕೊಂಡಳು. ಅಮ್ಮ ಮಾತೇ ಮರೆತಂತೆ ಸುಮ್ಮನಿದ್ದಳು. ಕತ್ತರಿ ನಡುವೆ ಸಿಲುಕಿದ್ದ ಹುಡುಗಿಯ ಕೂಡಲು ಕಸಕ್ ಶಬ್ದದೊಂದಿಗೆ ಕಳಚಿ ನೆಲಕ್ಕೆ ಬಿತ್ತು.....ಜೊತೆಗೆ,ಹುಡುಗಿಯ ಕಣ್ಣಲ್ಲಿ ಮಡುಗಟ್ಟಿದ್ದ ಹನಿ....

3 comments:

ಅಮರ said...

ಎಷ್ಟೊ ಬಾರಿ ನಮ್ಮ ಬದುಕಿನಲ್ಲಿ ನಡೆಯೊದೆ ಹೀಗೆ, ಎಲ್ಲರೊಂದಿಗೆ ನಾನು ಸರಿ ಸಾಟಿಯಾಗಿ ನಿಲ್ಲಬೇಕು ಅನ್ನೊ ಆಲೋಚನೆಯಲ್ಲೆ ಒಲ್ಲದ ಅಭ್ಯಾಸಗಳನ್ನ ಮತ್ತು ಅಭಿರುಚಿಗಳನ್ನ ಅಳವಡಿಸಿಕೊಂಡು ಬಿಡುತ್ತೆವೆ. ಎಲ್ಲೊ ಒಂದು ಕಡೆ ನಮ್ಮ ತನ ಅನ್ನೊಂದು ತಣ್ಣಗೆ ಕರಗುತ್ತಿರುತ್ತದೆ. ಬರಹ ಖುಷಿ ತಂದಿದೆ.
-ಅಮರ

Shree said...

ಓದಿದ ದಿನವೇ ಕಮೆಂಟಿಸಬೇಕೆಂದಿದ್ದೆ, ಆಗಲಿಲ್ಲ. ಚೆಂದದ ಕಥೆ, ಬರೆಯಿತ್ತಿರಿ...

Harisha - ಹರೀಶ said...

ನಮ್ಮತನ ಮರೆತಾಗ, ವಿವೆಚನೆಯಿಲ್ಲದೆ ಏನಾದ್ರೂ ತೀರ್ಮಾನ ತೆಗೆದುಕೊಂಡಾಗ ಹೀಗಾಗೋದು ಶತಃಸಿದ್ಧ. ಯಾರೋ ಏನೋ ಮಾಡ್ತಾರೆ ಅಂತ ನಾವೂ ಮಾಡ್ಲಿಕ್ಕೆ ಹೋದ್ರೆ ಹೀಗೆ ಆಗೋದು...

ತುಂಬಾ ಚೆನ್ನಾಗಿ ಬರ್ದಿದೀರಾ..